ADVERTISEMENT

ICC Womens World Cup 2022: ಭಾನುವಾರ ಭಾರತ-ಪಾಕಿಸ್ತಾನ ಹಣಾಹಣಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಮಾರ್ಚ್ 2022, 7:46 IST
Last Updated 5 ಮಾರ್ಚ್ 2022, 7:46 IST
ಭಾರತೀಯ ಮಹಿಳಾ ಕ್ರಿಕೆಟ್ ತಂಡ
ಭಾರತೀಯ ಮಹಿಳಾ ಕ್ರಿಕೆಟ್ ತಂಡ   

ಬೇ ಓವಲ್: ಐಸಿಸಿ ಮಹಿಳಾ ವಿಶ್ವಕಪ್ 2022 ಟೂರ್ನಿಯಲ್ಲಿ ಭಾನುವಾರ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ.

ಇದರೊಂದಿಗೆ ಬೇ ಓವಲ್‌ನಲ್ಲಿ ಮಗದೊಂದು ಭಾರತ-ಪಾಕ್ ರೋಚಕ ಹಣಾಹಣಿಗೆ ವೇದಿಕೆ ಸಿದ್ಧಗೊಂಡಿದೆ.

ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಭಾರತ ಚೊಚ್ಚಲ ಟ್ರೋಫಿ ಕನಸು ಎದುರು ನೋಡುತ್ತಿದೆ. ಭಾರತದ ನಾಯಕಿ ಮಿಥಾಲಿ ರಾಜ್, ಗೆಲುವಿನ ಮೂಲಕ 22 ವರ್ಷಗಳ ಸುದೀರ್ಘ ವೃತ್ತಿಜೀವನಕ್ಕೆ ವಿರಾಮ ಘೋಷಿಸುವ ಇರಾದೆಯಲ್ಲಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯವು ಭಾನುವಾರ ಬೆಳಿಗ್ಗೆ 6.30ಕ್ಕೆ ಸರಿಯಾಗಿ ಆರಂಭವಾಗಲಿದೆ. ಅತ್ತ ಪಾಕಿಸ್ತಾನ ಕೂಡಾ ಚೊಚ್ಚಲ ಕಿರೀಟವನ್ನು ಎದುರು ನೋಡುತ್ತಿದೆ.

ಒಟ್ಟು ಎಂಟು ತಂಡಗಳು ಭಾಗವಹಿಸುವ ಟೂರ್ನಿಯು ಲೀಗ್ ಮಾದರಿಯಲ್ಲಿ ಆಯೋಜನೆಯಾಗುತ್ತಿದೆ. ಬಳಿಕ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ.

2017 ಹಾಗೂ 2005ರಲ್ಲಿ ರನ್ನರ್-ಅಪ್ ಸ್ಥಾನ ಪಡೆದಿರುವುದು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತದ ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ.

ಇನ್ನೊಂದೆಡೆ ಆರು ಬಾರಿ ಚಾಂಪಿಯನ್ ಎನಿಸಿಕೊಂಡಿರುವ ಆಸ್ಟ್ರೇಲಿಯಾ, ಏಳನೇ ಕಿರೀಟದ ಮೇಲೆ ಕಣ್ಣಾಯಿಸಿದೆ. ಇಂಗ್ಲೆಂಡ್ ನಾಲ್ಕು ಹಾಗೂ ನ್ಯೂಜಿಲೆಂಡ್ ಒಂದು ಬಾರಿ ಪ್ರಶಸ್ತಿ ಜಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.