ADVERTISEMENT

ICC Womens World Cup: ದಕ್ಷಿಣ ಆಫ್ರಿಕಾ ಬಳಗಕ್ಕೆ ಇಂಗ್ಲೆಂಡ್ ಸವಾಲು

ಮಹಿಳಾ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್ ಇಂದು: ಬ್ರಂಟ್, ವೊಲ್ವಾರ್ಟ್ ಮೇಲೆ ಕಣ್ಣು

ಪಿಟಿಐ
Published 28 ಅಕ್ಟೋಬರ್ 2025, 23:30 IST
Last Updated 28 ಅಕ್ಟೋಬರ್ 2025, 23:30 IST
ಇಂಗ್ಲೆಂಡ್ ತಂಡದ ನ್ಯಾಟ್ ಶಿವರ್ ಬ್ರಂಟ್ ಮತ್ತು ಎಮಿ ಜೋನ್ಸ್  –ಎಪಿ ಚಿತ್ರ
ಇಂಗ್ಲೆಂಡ್ ತಂಡದ ನ್ಯಾಟ್ ಶಿವರ್ ಬ್ರಂಟ್ ಮತ್ತು ಎಮಿ ಜೋನ್ಸ್  –ಎಪಿ ಚಿತ್ರ   

ಗುವಾಹಟಿ: ನಾಲ್ಕು ಬಾರಿಯ ಚಾಂಪಿಯನ್ ಇಂಗ್ಲೆಂಡ್ ತಂಡವು ಬುಧವಾರ ನಡೆಯಲಿರುವ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. 

ದಕ್ಷಿಣ ಅಫ್ರಿಕಾ ತಂಡವು ಲೀಗ್ ಹಂತದಲ್ಲಿ ಎರಡು ಪಂದ್ಯಗಳಲ್ಲಿ ದೊಡ್ಡ ಅಂತರದಿಂದ ಸೋತಿತ್ತು. ಅ ಪಂದ್ಯಗಳಲ್ಲಿ ಸ್ಪಿನ್ ಬೌಲಿಂಗ್ ಎದುರು ಬ್ಯಾಟರ್‌ಗಳು ವಿಫಲರಾಗಿದ್ದರು. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 69 ರನ್‌ಗಳಿಗೆ ಆಲೌಟ್ ಆಗಿತ್ತು. ಸೋಲುಗಳ ನಂತರ ಪುಟಿದೆದ್ದ ತಂಡವು ನ್ಯೂಜಿಲೆಂಡ್, ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಪಾಕಿಸ್ತಾನ ಎದುರಿನ ಪಂದ್ಯಗಳಲ್ಲಿ ಜಯಿಸಿತ್ತು.  

ಲೀಗ್‌  ಹಂತದ ಕೊನೆ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಕೂಡ ಸ್ಪಿನ್ನರ್‌ಗಳ ಎದುರು 24 ಓವರ್‌ಗಳಲ್ಲಿ 97 ರನ್‌ಗಳಿಗೆ ಕುಸಿದಿತ್ತು. ಅಲನಾ ಕಿಂಗ್‌ ಲೆಗ್‌ಸ್ಪಿನ್ ಮೋಡಿಯನ್ನು ಅಂದಾಜು ಮಾಡುವಲ್ಲಿ ಆಟಗಾರ್ತಿಯರು ಎಡವಿದ್ದರು. 

ADVERTISEMENT

ದಕ್ಷಿಣ ಆಫ್ರಿಕಾ ತಂಡದ ಈ ದೌರ್ಬಲ್ಯವನ್ನು ತನ್ನ ಗೆಲುವಿನ ಮೆಟ್ಟಿಲನ್ನಾಗಿ ಬಳಸಿಕೊಳ್ಳುವತ್ತ ಇಂಗ್ಲೆಂಡ್ ಚಿತ್ತ ನೆಟ್ಟಿದೆ. ತಂಡದ ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ಗಳಾದ ಸೋಫಿ ಎಕ್ಲೆಸ್ಟೋನ್, ಲಿನ್ಸೆ ಸ್ಮಿತ್ ಮತ್ತು ಚಾರ್ಲಿ ಡೀನ್ ಅವರು ಎದುರಾಳಿ ತಂಡಕ್ಕೆ ಕಠಿಣ ಸವಾಲೊಡ್ಡಲು ಸಿದ್ಧರಾಗಿದ್ದಾರೆ. 

ಆದರೆ ಸೋಫಿ ಅವರು ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದರು. ಅವರ ಭುಜಕ್ಕೆ ಪೆಟ್ಟುಬಿದ್ದಿತ್ತು. 

‘ಅವರ ಎಡಭುಜದ ಗಾಯದ ಎಂಆರ್‌ಐ ಸ್ಕ್ಯಾನ್ ಮಾಡಲಾಗಿದೆ. ಸಣ್ಣ ಪ್ರಮಾಣದ ಗಾಯವಾಗಿದೆ. ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಬುಧವಾರ ಬೆಳಿಗ್ಗೆ ಅವರ ಫಿಟ್‌ನೆಸ್‌ ಕುರಿತು ಸ್ಪಷ್ಟತೆ ದೊರೆಯಲಿದೆ’ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಪ್ರಕಟಣೆಯಲ್ಲಿ ತಿಳಿಸಿದೆ.

ದಕ್ಷಿಣ ಆಫ್ರಿಕಾ ನಾಯಕಿ ಲಾರಾ ವೊಲ್ವಾರ್ಟ್ ಒಟ್ಟು 301 ರನ್‌ ಗಳಿಸಿದ್ದು, ತಂಡದ ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ತಾಜ್ಮೀನ್ ಬ್ರಿಟ್ಸ್ ಅವರು ಭಾರತ ಎದುರು ಶತಕ ಬಾರಿಸಿದ್ದರು. ಆದರೆ ನಂತರ ಮೂರು ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದರು. ಸುನೆ ಲೂಸ್ ಮತ್ತು ಮರೈಝನ್ ಕಾಪ್ ಅವರು ಕೂಡ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಇಂಗ್ಲೆಂಡ್ ತಂಡದ ಹೀದರ್ ನೈಟ್ (288) ಮತ್ತು ಎಮಿ ಜೋನ್ಸ್ (220, ಟ್ಯಾಮಿ ಬೇಮೌಂಟ್ (210) ಅವರು ತಮ್ಮ ಉತ್ತಮ ಲಯದಲ್ಲಿ ಮುಂದುವರಿದರೆ ತಂಡದ ಬಲ ಹೆಚ್ಚಲಿದೆ. ಆಲ್‌ರೌಂಡರ್‌ ನ್ಯಾಟ್ ಶಿವರ್ ಬ್ರಂಟ್ ಅವರ ಆಟವೇ ಇಂಗ್ಲೆಂಡ್‌ಗೆ ಪ್ರಮುಖವಾಗಲಿದೆ. 

ಪಂದ್ಯ ಆರಂಭ: ಮಧ್ಯಾಹ್ನ 3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.