ADVERTISEMENT

ಸತತ 3ನೇ ವರ್ಷವೂ ಐಸಿಸಿ ತಂಡಗಳ ನಾಯಕನಾದ ಕೊಹ್ಲಿ: ರೋಹಿತ್ ಏಕದಿನ ಕ್ರಿಕೆಟಿಗ

ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡ ಟೀಂ ಇಂಡಿಯಾ ನಾಯಕ–ಉಪನಾಯಕ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 11:54 IST
Last Updated 15 ಜನವರಿ 2020, 11:54 IST
   

ನವದೆಹಲಿ:ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಬುಧವಾರ ಪ್ರಕಟಿಸಿರುವ ವರ್ಷದ ಪ್ರಶಸ್ತಿ ಪಟ್ಟಿಯಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಉಪನಾಯಕ ರೋಹಿತ್‌ ಶರ್ಮಾ ಪ್ರಮುಖ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

2019ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ನೀಡಿದ ಅಮೋಘ ಪ್ರದರ್ಶನದಿಂದಾಗಿ ರೋಹಿತ್‌ ಶರ್ಮಾವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ಗಿಟ್ಟಿಸಿದ್ದಾರೆ. ಕಳೆದ ವರ್ಷ ನಡೆದ ವಿಶ್ವಕಪ್‌ ಟೂರ್ನಿಯೊಂದರಲ್ಲೇ ಐದು ಶತಕ ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಿದ್ದ ರೋಹಿತ್, 2019ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು (1490) ರನ್‌ ಗಳಿಸಿದ್ದರು.

ವಿರಾಟ್‌ ಕೊಹ್ಲಿ ಸ್ಪಿರಿಟ್‌ ಆಫ್‌ ಕ್ರಿಕೆಟ್‌ ಎನಿಸಿದ್ದಾರೆ. ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧ ಶಿಕ್ಷೆ ಅನುಭವಿಸಿ ವಾಪಸ್‌ ಆಗಿದ್ದ ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌ ಏಕದಿನ ವಿಶ್ವಕಪ್‌ನಲ್ಲಿ ಬೌಂಡರಿ ಗೆರೆ ಬಳಿ ಫೀಲ್ಡಿಂಗ್‌ ಮಾಡುತ್ತಿದ್ದಾಗ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಅವರವಿರುದ್ಧ ಘೋಷಣೆ ಕೂಗುತ್ತಿದ್ದರು. ಈ ವೇಳೆ ಅಭಿಮಾನಿಗಳತ್ತ ಬ್ಯಾಟ್‌ ಬೀಸಿ ಸನ್ನೆ ಮಾಡಿದ್ದ ಕೊಹ್ಲಿ, ಹೀಯಾಳಿಸದಂತೆ ಮತ್ತು ಸ್ಮಿತ್‌ರನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರು.

ADVERTISEMENT

ವಿಶ್ವಪಕ್‌ ಫೈನಲ್‌ ಹಾಗೂ ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಅಮೋಘ ಆಟವಾಡಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಇಂಗ್ಲೆಂಡ್‌ ಆಲ್ರೌಂಡರ್ ಬೆನ್‌ ಸ್ಟೋಕ್ಸ್‌ಗೆಐಸಿಸಿಯ ವರ್ಷದ ಕ್ರಿಕೆಟಿಗ ಪ್ರಶಸ್ತಿ ಒಲಿದಿದೆ.

ಕಳೆದ ವರ್ಷ ಆಡಿದ 12 ಟೆಸ್ಟ್‌ಗಳ 23 ಇನಿಂಗ್ಸ್‌ಗಳಿಂದ 59 ವಿಕೆಟ್ ಉರುಳಿಸಿದ್ದ ಆಸ್ಟ್ರೇಲಿಯಾ ವೇಗಿ ಪ್ಯಾಟ್‌ ಕಮಿನ್ಸ್‌ ವರ್ಷದ ಟೆಸ್ಟ್ ಕ್ರಿಕೆಟಿಗ ಎನಿಸಿದ್ದಾರೆ.

2019ರಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೆಚ್ಚು ರನ್‌ ಗಳಿಸಿದ್ದ ಆಸ್ಟ್ರೇಲಿಯಾದ ಮಾರ್ನಸ್‌ ಲಾಬುಶೇನ್‌ ಅವರು ಉದಯೋನ್ಮುಕ ಕ್ರಿಕೆಟಿಗ ಪ್ರಶಸ್ತಿ ಗಳಿಸಿದ್ದಾರೆ.

ಭಾರತದ ದೀಪಕ್‌ ಚಾಹರ್‌ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕೇವಲ 7 ರನ್ ನೀಡಿ ಆರು ವಿಕೆಟ್‌ ಪಡೆದಿದ್ದರು. ಇದನ್ನು ಟಿ20 ವರ್ಷದ ಪ್ರದರ್ಶನ ಎಂದು ಐಸಿಸಿ ಆಯ್ಕೆ ಮಾಡಿದೆ.

ಇಂಗ್ಲೆಂಡ್‌ನ ರಿಚರ್ಡ್‌ ಇಲ್ಲಿಂಗ್‌ವರ್ಥ್‌ ವರ್ಷದ ಅಂಪೈರ್‌ಎನಿಸಿದ್ದಾರೆ.ಐಸಿಸಿ ಆಯ್ಕೆ ಮಾಡಿರುವ ಏಕದಿನ ಮತ್ತು ಟೆಸ್ಟ್‌ ತಂಡಗಳಿಗೆ ಸತತ ಮೂರನೇ ವರ್ಷವೂ ವಿರಾಟ್‌ ಕೊಹ್ಲಿಯೇ ನಾಯಕರಾಗಿದ್ದಾರೆ.

ವರ್ಷದ ಏಕದಿನ ತಂಡ
ರೋಹಿತ್‌ ಶರ್ಮಾ, ಶಾಯ್‌ ಹೋಪ್‌, ವಿರಾಟ್‌ ಕೊಹ್ಲಿ (ನಾಯಕ), ಬಾಬರ್‌ ಅಜಂ, ಕೇನ್‌ ವಿಲಿಯಮ್ಸನ್‌, ಜಾಸ್‌ ಬಟ್ಲರ್‌, ಬೆನ್‌ ಸ್ಟೋಕ್ಸ್‌, ಮಿಚೇಲ್ ಸ್ಟಾರ್ಕ್‌, ಟ್ರೆಂಟ್‌ ಬೌಲ್ಟ್‌, ಕುಲ್‌ದೀಪ್‌ ಯಾದವ್‌, ಮೊಹಮದ್‌ ಶಮಿ

ವರ್ಷದ ಏಕದಿನ ತಂಡ
ಮಯಂಕ್‌ ಅಗರವಾಲ್, ಟಾಮ್‌ ಲಾಥಮ್‌, ಮಾರ್ನಸ್‌ ಲಾಬುಶೇನ್, ವಿರಾಟ್‌ ಕೊಹ್ಲಿ (ನಾಯಕ), ಸ್ಟೀವ್‌ ಸ್ಮಿತ್‌, ಬೆನ್‌ ಸ್ಟೋಕ್ಸ್‌, ಬಿ.ಜೆ. ವಾಟ್ಲಿಂಗ್‌, ಪ್ಯಾಟ್‌ ಕಮಿನ್ಸ್‌, ಮಿಚೇಲ್ ಸ್ಟಾರ್ಕ್‌, ನೀಲ್‌ ವ್ಯಾಗ್ನರ್‌, ನಾಥನ್‌ ಲಯನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.