ಜಸ್‌ಪ್ರೀತ್ ಬೂಮ್ರಾ, ಸ್ಯಾಮ್ ಕೊನ್‌ಸ್ಟಸ್
(ಎಕ್ಸ್ ಚಿತ್ರ)
ಸಿಡ್ನಿ: ಭಾರತ ಕ್ರಿಕೆಟ್ ತಂಡದ ಉಸ್ತುವಾರಿ ನಾಯಕ ಜಸ್‌ಪ್ರೀತ್ ಬೂಮ್ರಾ ಅವರೊಂದಿಗೆ ಅನಗತ್ಯವಾಗಿ ವಾಗ್ವಾದ ನಡೆಸಿರುವುದಕ್ಕೆ ಆಸ್ಟ್ರೇಲಿಯಾದ 19 ವರ್ಷದ ಬ್ಯಾಟರ್ ಸ್ಯಾಮ್ ಕೊನ್‌ಸ್ಟಸ್ ವಿಷಾದ ವ್ಯಕ್ತಪಡಿಸಿದ್ದಾರೆ.
'ಆ ಕ್ಷಣದಲ್ಲಿ ನಾನು ಸಮಯ ವ್ಯರ್ಥ ಮಾಡಲು ಯತ್ನಿಸಿದ್ದೆ. ಅಂತಿಮವಾಗಿ ಕೊನೆಯ ನಗು ಬೂಮ್ರಾ ಅವರದ್ದಾಯಿತು' ಎಂದು ಅವರು ಹೇಳಿದ್ದಾರೆ.
'ಹಾಗೊಂದು ವೇಳೆ ಇದೇ ಪರಿಸ್ಥಿತಿ ಇನ್ನೊಂದು ಸಲ ಎದುರಾದರೆ ಕೆದಕಲು ಹೋಗಲಾರೆ' ಎಂದು ತಪ್ಪೊಪ್ಪಿಕೊಂಡಿದ್ದಾರೆ.
'ಈ ಸರಣಿಯಿಂದ ಒಳ್ಳೆಯ ಪಾಠಗಳನ್ನು ಕಲಿತಿದ್ದೇನೆ. ಸಮಯ ವ್ಯರ್ಥ ಮಾಡುವುದು ನನ್ನ ಉದ್ದೇಶವಾಗಿತ್ತು. ಇನ್ನೊಂದು ಓವರ್ ಮಾಡುವುದನ್ನು ನಿರಾಕರಿಸಲು ಯತ್ನಿಸಿದ್ದೆ. ಆದರೆ ಬೂಮ್ರಾ ಕಡೆಯ ಯಶಸ್ಸು ಗಳಿಸಿದರು. ನಿಸ್ಸಂಶಯವಾಗಿಯೂ ಅವರು ವಿಶ್ವ ದರ್ಜೆಯ ಬೌಲರ್. ಸರಣಿಯಲ್ಲಿ 32 ವಿಕೆಟ್‌ಗಳನ್ನು ಗಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
'ಬಹುಶಃ ಮತ್ತದೇ ಘಟನೆ ಸಂಭವಿಸಿದ್ದಲ್ಲಿ ಬೂಮ್ರಾ ಬಳಿ ನಾನೇನು ಹೇಳಲು ಹೋಗಲಾರೆ' ಎಂದಿದ್ದಾರೆ.
ಸಿಡ್ನಿಯಲ್ಲಿ ನಡೆದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬೂಮ್ರಾ ಹಾಗೂ ಕೊನ್‌ಸ್ಟಸ್ ನಡುವೆ ಕಾವೇರಿದ ವಾತಾವರಣ ಸೃಷ್ಟಿಯಾಗಿತ್ತು.
ಮೊದಲ ದಿನದಾಟದ ಕೊನೆಯ ಓವರ್‌ನಲ್ಲಿ ನಾನ್-ಸ್ಟ್ರೈಕರ್‌ನಲ್ಲಿ ಕೊನ್‌ಸ್ಟಸ್ ಅನಗತ್ಯವಾಗಿ ಬೂಮ್ರಾ ಜತೆ ಜಗಳಕ್ಕಿಳಿದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಅಂಪೈರ್ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಇದಕ್ಕೆ ಪ್ರತಿಯಾಗಿ ದಿನದಾಟದ ಕೊನೆಯ ಎಸೆತದಲ್ಲಿ ಉಸ್ಮಾನ್ ಖ್ವಾಜಾ ಅವರನ್ನು ಔಟ್ ಮಾಡುವ ಮೂಲಕ ಬೂಮ್ರಾ ತಿರುಗೇಟು ನೀಡಿದ್ದರು. ನೇರವಾಗಿ ಕೊನ್‌ಸ್ಟಸ್ ಬಳಿ ತೆರಳಿ ದಿಟ್ಟಿಸಿ ನೋಡುತ್ತಾ ಆಕ್ರೋಶ ಹೊರಹಾಕಿದ್ದರು.
ಇದಕ್ಕೂ ಮೊದಲು ಬಾಕ್ಸಿಂಗ್ ಡೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಕೊನ್‌ಸ್ಟಸ್ ಅವರಿಗೆ ಭುಜದಿಂದ ಡಿಕ್ಕಿ ಹೊಡೆದ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ದಂಡನೆಗೊಳಗಾಗಿದ್ದರು.
ಈ ಘಟನೆ ಬಳಿಕವೂ ಬಾಲ್ಯ ಕಾಲದ ತಮ್ಮ ಆರಾಧ್ಯ ಆಟಗಾರನ ಬಳಿ ಹೋಗಿ ಮಾತನಾಡಿರುವುದಾಗಿ ಕೊನ್‌ಸ್ಟಸ್ ತಿಳಿಸಿದ್ದಾರೆ. 'ಕೊಹ್ಲಿ ವಿರುದ್ಧ ಆಡುವುದು ನನಗೆ ಸಂದ ಗೌರವವಾಗಿದೆ. ಅವರು ನನಗೆ ಶುಭ ಹಾರೈಸಿದ್ದಾರೆ' ಎಂದು ಹೇಳಿದ್ದಾರೆ.
‘ವಿರಾಟ್ ಕೊಹ್ಲಿ ಅವರು ನನ್ನ ಅಚ್ಚುಮೆಚ್ಚಿನ ಆಟಗಾರ. ಅವರ ಎದುರು ಆಡಿದ್ದು ನನಗೆ ಸಂದ ದೊಡ್ಡ ಗೌರವ. ಆ ದಿನ ಪಂದ್ಯದ ನಂತರ ಅವರನ್ನು ಭೇಟಿಯಾಗಿ ಮಾತನಾಡಿದೆ. ಅವರೇ ನನ್ನ ಬಾಲ್ಯದ ಹೀರೊ ಎಂದೂ ಹೇಳಿದೆ. ಅವರು ಬ್ಯಾಟಿಂಗ್ ಮಾಡುವಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಹರ್ಷೋದ್ಗಾರಗಳು ಕೇಳಿಬರುತ್ತಿದ್ದವು. ನಾನು ಕೂಡ ಅವರ ಬ್ಯಾಟಿಂಗ್ ಅನ್ನು ಬೆರಗಿನಿಂದಲೇ ನೋಡುತ್ತಿದ್ದೆ’ ಎಂದರು.
‘ಕೊಹ್ಲಿ ಅವರು ಬಹಳ ಸರಳ ವ್ಯಕ್ತಿ. ಅವರೂ ನನ್ನೊಂದಿಗೆ ಸೌಜನ್ಯದಿಂದ ಮಾತನಾಡಿದರು. ನನ್ನ ಭವಿಷ್ಯವು ಚೆನ್ನಾಗಿ ರೂಪುಗೊಳ್ಳಲಿ ಎಂದು ಹಾರೈಸಿ ದರು. ಮುಂಬರಲಿರುವ ಶ್ರೀಲಂಕಾ ಎದುರಿನ ಸರಣಿಯಲ್ಲಿ ಚೆನ್ನಾಗಿ ಆಡೆಂದರು’ ಎಂದು ಸ್ಯಾಮ್ ಹೇಳಿದರು.
ಮೆಲ್ಬರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ 19 ವರ್ಷದ ಸ್ಯಾಮ್ ಪದಾರ್ಪಣೆ ಮಾಡಿದ್ದರು. ಬೂಮ್ರಾ ಬೌಲಿಂಗ್‌ನಲ್ಲಿ ಎರಡು ಸಿಕ್ಸರ್ ಗಳಿಸಿದ್ದರು. ಅದೇ ಪಂದ್ಯದಲ್ಲಿ ಕೊಹ್ಲಿ ಅವರು ಸ್ಯಾಮ್‌ಗೆ ಭುಜ ತಾಗಿಸಿದ್ದರು. ಅದಕ್ಕಾಗಿ ಕೊಹ್ಲಿಗೆ ದಂಡ ಕೂಡ ಹಾಕಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.