ADVERTISEMENT

Aus vs Ind: ರೋಹಿತ್, ಶ್ರೇಯಸ್ ಅರ್ಧಶತಕ; ಆಸಿಸ್‌ಗೆ 265 ರನ್ ಗುರಿ ನೀಡಿದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಅಕ್ಟೋಬರ್ 2025, 7:28 IST
Last Updated 23 ಅಕ್ಟೋಬರ್ 2025, 7:28 IST
<div class="paragraphs"><p>ರೋಹಿತ್‌ ಶರ್ಮಾ ಮತ್ತು ಶ್ರೇಯಸ್‌ ಅಯ್ಯರ್‌ ಬ್ಯಾಟಿಂಗ್‌ ವೈಖರಿ</p></div>

ರೋಹಿತ್‌ ಶರ್ಮಾ ಮತ್ತು ಶ್ರೇಯಸ್‌ ಅಯ್ಯರ್‌ ಬ್ಯಾಟಿಂಗ್‌ ವೈಖರಿ

   

ಕೃಪೆ: X / @BCCI

ಅಡಿಲೇಡ್‌: ಮಾಜಿ ನಾಯಕ ರೋಹಿತ್‌ ಶರ್ಮಾ ಮತ್ತು ಉಪನಾಯಕ ಶ್ರೇಯಸ್‌ ಅಯ್ಯರ್‌ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ಬಲದಿಂದ, ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ಪಡೆಗೆ 265 ರನ್‌ಗಳ ಗುರಿ ನೀಡಿದೆ.

ADVERTISEMENT

ಅಡಿಲೇಡ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಆತಿಥೇಯ ತಂಡದ ನಾಯಕ ಮಿಚೇಲ್‌ ಮಾರ್ಷ್‌, ಬೌಲಿಂಗ್‌ ಆಯ್ದುಕೊಂಡರು. ಅದರಂತೆ ಕ್ರೀಸ್‌ಗಿಳಿದ ಟೀಂ ಇಂಡಿಯಾಗೆ ನಿರೀಕ್ಷಿತ ಆರಂಭ ಸಿಗಲಿಲ್ಲ.

ನಾಯಕ ಶುಭಮನ್ ಗಿಲ್‌ (9) ಹಾಗೂ ವಿರಾಟ್‌ ಕೊಹ್ಲಿ (0) ಒಂದೇ ಓವರ್‌ನಲ್ಲಿ ಔಟಾಗುವುದೊಂದಿಗೆ ಆರಂಭಿಕ ಆಘಾತ ಎದುರಾಯಿತು.

ಈ ಹೊತ್ತಿನಲ್ಲಿ ಜೊತೆಯಾದ ರೋಹಿತ್‌ ಮತ್ತು ಶ್ರೇಯಸ್‌, ಇನಿಂಗ್ಸ್‌ಗೆ ಬಲತುಂಬಿದರು. ಆರಂಭದಲ್ಲಿ ತಿಣುಕಾಡುತ್ತಿದ್ದ ರೋಹಿತ್‌ ನಿಧಾನವಾಗಿ ಆಟಕ್ಕೆ ಕುದುರಿಕೊಂಡರು. ಈ ಜೋಡಿ 3ನೇ ವಿಕೆಟ್ ಪಾಲುದಾರಿಕೆಯಲ್ಲಿ 118 ರನ್ ಕಲೆಹಾಕುವುದರೊಂದಿಗೆ ವಿಕೆಟ್‌ ಕುಸಿತಕ್ಕೆ ತಡೆಯೊಡ್ಡಿತು.

97 ಎಸೆತಗಳನ್ನು ಎದುರಿಸಿದ ರೋಹಿತ್, 7 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ 73 ರನ್‌ ಗಳಿಸಿ ಔಟಾದರೆ, ಅಯ್ಯರ್‌ ಆಟ 61 ರನ್‌ಗೆ ಕೊನೆಯಾಯಿತು. ಮಧ್ಯಮ ಕ್ರಮಾಂಕದಲ್ಲಿ ಭರವಸೆ ಮೂಡಿಸಿದ ಅಕ್ಷರ್ ಪಟೇಲ್‌, 44 ರನ್‌ಗಳ ಕೊಡುಗೆ ನೀಡಿದರು. ಕೊನೆಯಲ್ಲಿ ಹರ್ಷಿತ್‌ ರಾಣ (24) ಅವರೂ ಉಪಯುಕ್ತ ಆಟವಾಡಿದರು. ಹೀಗಾಗಿ, ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗೆ 264 ರನ್‌ ಕಲೆಹಾಕಲು ಸಾಧ್ಯವಾಯಿತು.

ಆಸಿಸ್‌ ಪರ ಸ್ಪಿನ್ನರ್‌ ಆ್ಯಡಂ ಜಂಪಾ ನಾಲ್ಕು ವಿಕೆಟ್ ಪಡೆದರೆ, ಷೇವಿಯರ್‌ ಬರ್ಟ್ಲೆಟ್‌ ಎರಡು ವಿಕೆಟ್‌ ಉರುಳಿಸಿದರು. ಮಿಚೇಲ್‌ ಸ್ಟಾರ್ಕ್‌ ಎರಡು ವಿಕೆಟ್‌ ಕಿತ್ತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.