ADVERTISEMENT

ಬಾರ್ಡರ್‌ – ಗಾವಸ್ಕರ್ ಟ್ರೋಫಿ 4ನೇ ಟೆಸ್ಟ್‌: ಇಶಾನ್ ಕಿಶನ್‌ಗೆ ಅವಕಾಶ ಸಾಧ್ಯತೆ

ಪಿಟಿಐ
Published 7 ಮಾರ್ಚ್ 2023, 19:31 IST
Last Updated 7 ಮಾರ್ಚ್ 2023, 19:31 IST
ಭಾರತ ಕ್ರಿಕೆಟ್‌ ತಂಡದ ಆಟಗಾರರು ಮತ್ತು ಕೋಚಿಂಗ್‌ ಸಿಬ್ಬಂದಿ ಮಂಗಳವಾರ ಅಹಮದಾಬಾದ್‌ನಲ್ಲಿ ಬಣ್ಣ ಹಚ್ಚಿ ಹೋಳಿ ಆಚರಿಸಿದರು –ಬಿಸಿಸಿಐ ಟ್ವಿಟರ್‌ ಚಿತ್ರ
ಭಾರತ ಕ್ರಿಕೆಟ್‌ ತಂಡದ ಆಟಗಾರರು ಮತ್ತು ಕೋಚಿಂಗ್‌ ಸಿಬ್ಬಂದಿ ಮಂಗಳವಾರ ಅಹಮದಾಬಾದ್‌ನಲ್ಲಿ ಬಣ್ಣ ಹಚ್ಚಿ ಹೋಳಿ ಆಚರಿಸಿದರು –ಬಿಸಿಸಿಐ ಟ್ವಿಟರ್‌ ಚಿತ್ರ   

ನವದೆಹಲಿ: ಜಾರ್ಖಂಡ್‌ನ ವಿಕೆಟ್‌ ಕೀಪರ್‌ ಬ್ಯಾಟರ್‌ ಇಶಾನ್‌ ಕಿಶನ್‌ ಅವರು ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಮೊದಲ ಮೂರು ಪಂದ್ಯಗಳಲ್ಲಿ ಆಡಿದ್ದ ವಿಕೆಟ್‌ಕೀಪರ್‌ ಶ್ರೀಕರ್‌ ಭರತ್‌ ಅವರು ಮಿಂಚಲು ವಿಫಲವಾಗಿರುವುದು, ಇಶಾನ್‌ಗೆ ಅಂತಿಮ ಇಲೆವೆನ್‌ನಲ್ಲಿ ಅವಕಾಶದ ಬಾಗಿಲು ತೆರೆಯುವ ಸಾಧ್ಯತೆಯಿದೆ.

ನಾಲ್ಕನೇ ಟೆಸ್ಟ್‌ ಅಹಮದಾಬಾದ್‌ನಲ್ಲಿ ಗುರುವಾರ ಆರಂಭವಾಗಲಿದೆ. ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ಗೆ ಯೋಗ್ಯವಾಗುವ ಗುಣವನ್ನು ಹೊಂದಿರುವುದು ಕೂಡಾ ಇಶಾನ್‌ಗೆ ಅನುಕೂಲಕರವಾಗಿ ಪರಿಣಮಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ADVERTISEMENT

ಭರತ್‌ ಅವರು ಮೊದಲ ಮೂರು ಪಂದ್ಯಗಳ ಐದು ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 8, 6, ಔಟಾಗದೆ 23, 13 ಮತ್ತು 3 ರನ್ ಗಳಿಸಿದ್ದಾರೆ. ಕೀಪಿಂಗ್‌ನಲ್ಲಿ ಚುರುಕುತನ ತೋರಿದ್ದರೂ, ಐದು ಇನಿಂಗ್ಸ್‌ಗಳಿಂದ ಕೇವಲ 57 ರನ್‌ ಕಲೆಹಾಕಿರುವುದು ಅವರಿಗೆ ಹಿನ್ನಡೆ ಉಂಟುಮಾಡಿದೆ.

ಇಶಾನ್ ಅವರು ಮಂಗಳವಾರ, ಕೋಚ್ ರಾಹುಲ್‌ ದ್ರಾವಿಡ್‌ ಮಾರ್ಗದರ್ಶನದಲ್ಲಿ ನೆಟ್ಸ್‌ನಲ್ಲಿ ದೀರ್ಘ ಅವಧಿ ಅಭ್ಯಾಸ ಮಾಡಿದರು. ಅಹಮದಾಬಾದ್‌ ಕ್ರೀಡಾಂಗಣದ ಪಿಚ್‌, ಬೌನ್ಸ್‌ಗೆ ನೆರವು ನೀಡಲಿರುವುದರಿಂದ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುಪಡೆದಿರುವ ಇಶಾನ್‌ ಅವರಿಗೆ ತಂಡವು ಆದ್ಯತೆ ನೀಡಬಹುದು.

ರಿಷಭ್‌ ಪಂತ್ ಅನುಪಸ್ಥಿತಿಯಲ್ಲಿ ಭಾರತ ತಂಡವು ಮಧ್ಯಮ ಕ್ರಮಾಂಕದಲ್ಲಿ ಅಕ್ರಮಣಕಾರಿ ಬ್ಯಾಟರ್‌ವೊಬ್ಬನ ಕೊರತೆ ಎದುರಿಸುತ್ತಿದೆ. ಇಶಾನ್‌ ಮೂಲಕ ಆ ಕೊರತೆಯನ್ನು ನೀಗಿಸಬಹುದು ಎಂಬುದು ತಂಡದ ವ್ಯವಸ್ಥಾಪನ ಮಂಡಳಿಯ ವಿಶ್ವಾಸ.

ಪಂತ್‌ ಅವರಂತೆ ಟೆಸ್ಟ್‌ನ ಒಂದೇ ಅವಧಿಯಲ್ಲಿ ಪಂದ್ಯದ ಗತಿಯನ್ನು ಬದಲಿಸಬಲ್ಲ ಸಾಮರ್ಥ್ಯ ಹೊಂದಿರುವ ಬ್ಯಾಟರ್‌ ತಂಡದಲ್ಲಿಲ್ಲ. ಅಪಘಾತದಲ್ಲಿ ಗಾಯಗೊಂಡಿರುವ ಅವರು ಇನ್ನೂ ಕೆಲವು ಕಾಲ ತಂಡದಿಂದ ದೂರವುಳಿಯಲಿರುವುದರಿಂದ ಟೆಸ್ಟ್‌ ತಂಡಕ್ಕೆ ಸಮರ್ಥ ವಿಕೆಟ್‌ಕೀಪರ್‌ ಒಬ್ಬರನ್ನು ಕಂಡುಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.