ADVERTISEMENT

IND vs AUS Test | ಬೌಲರ್‌ಗಳ ಮೆರೆದಾಟ; ಭಾರತ ಬ್ಯಾಟರ್‌ಗಳ ಪರದಾಟ

ಅಲ್ಪಮೊತ್ತಕ್ಕೆ ಕುಸಿದ ಜಸ್‌ಪ್ರೀತ್ ಬೂಮ್ರಾ ಪಡೆ; ಪಂತ್, ಜಡೇಜ ದಿಟ್ಟ ಬ್ಯಾಟಿಂಗ್; ಬೊಲ್ಯಾಂಡ್‌ಗೆ 4 ವಿಕೆಟ್

ಮಧು ಜವಳಿ
Published 3 ಜನವರಿ 2025, 23:30 IST
Last Updated 3 ಜನವರಿ 2025, 23:30 IST
<div class="paragraphs"><p>ಭಾರತದ ಬ್ಯಾಟರ್ ರಿಷಭ್ ಪಂತ್ ಅವರ ತೋಳಿಗೆ ಚೆಂಡು ಬಡಿದು ಗಾಯವಾದ ಸಂದರ್ಭದಲ್ಲಿ ಧಾವಿಸಿದ ಫಿಸಿಯೊ ಐಸ್‌ ಪ್ಯಾಕ್ ಥೆರಪಿ ಮಾಡಿದರು&nbsp; &nbsp;</p></div>

ಭಾರತದ ಬ್ಯಾಟರ್ ರಿಷಭ್ ಪಂತ್ ಅವರ ತೋಳಿಗೆ ಚೆಂಡು ಬಡಿದು ಗಾಯವಾದ ಸಂದರ್ಭದಲ್ಲಿ ಧಾವಿಸಿದ ಫಿಸಿಯೊ ಐಸ್‌ ಪ್ಯಾಕ್ ಥೆರಪಿ ಮಾಡಿದರು   

   

–ಎಎಫ್‌ಪಿ ಚಿತ್ರ

ಸಿಡ್ನಿ: ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಅಂತಿಮ ಟೆಸ್ಟ್‌ ಪಂದ್ಯದ ಮೊದಲ ದಿನ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಢಾಳಾಗಿ ಕಂಡಿತು. ಮೋಡ ಕವಿದ ಆಗಸದ ಪ್ರತಿಬಿಂಬದಂತೆಯೇ ಭಾರತ ತಂಡದಲ್ಲಿ ಮಬ್ಬು ಆವರಿಸಿತ್ತು. ಶುಕ್ರವಾರ ಬೆಳಿಗ್ಗೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಹಂಗಾಮಿ ನಾಯಕ ಜಸ್‌ಪ್ರೀತ್ ಬೂಮ್ರಾ ‘ರೋಹಿತ್ ವಿಶ್ರಾಂತಿ ಪಡೆದಿದ್ದಾರೆ’ ಎಂದಷ್ಟೇ ಹೇಳಿದರು. 

ADVERTISEMENT

ಮೊದಲಿನಿಂದಲೂ ಸ್ಪಿನ್ ಸ್ನೇಹಿ ಎಂಬ ಖ್ಯಾತಿ ಹೊಂದಿರುವ ಸಿಡ್ನಿ ಕ್ರಿಕೆಟ್ ಮೈದಾನದ ಪಿಚ್ ಮೊದಲ ದಿನದಾಟದಲ್ಲಿ ಭಿನ್ನವಾಗಿ ಕಂಡಿತು. ಹಸಿರು ಗರಿಕೆಗಳಿದ್ದ ಪಿಚ್‌ ಮತ್ತು ಮೋಡ ಕವಿದ ವಾತಾವರಣವು ಆತಿಥೇಯ ವೇಗಿಗಳಿಗೆ ಬಹಳಷ್ಟು ನೆರವು ನೀಡಿತು. ಅನಿರೀಕ್ಷಿತ ಮತ್ತು ಎತ್ತರ ಪುಟಿತದೊಂದಿಗೆ ಬರುತ್ತಿದ್ದ ಎಸೆತಗಳನ್ನು ಎದುರಿಸುವಲ್ಲಿ ಭಾರತದ ಬ್ಯಾಟರ್‌ಗಳು ಕಷ್ಟಪಟ್ಟರು. ಅಲ್ಲದೇ ಮೈಕೈಗಳಿಗೆ ಚೆಂಡು ಅಪ್ಪಳಿಸಿದ ಪೆಟ್ಟುಗಳೂ ಕಮ್ಮಿಯೇನಲ್ಲ. 

ಅದರಲ್ಲೂ ದಿನದಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್ ಗಳಿಸಿದ ರಿಷಭ್ ಪಂತ್ (40; 98ಎ) ಎಲ್ಲರಿಗಿಂತ ಹೆಚ್ಚು ಹೊಡೆತಗಳ ನೋವು ಅನುಭವಿಸಿದರು. ಮುಂಗೈ, ತೊಡೆ, ಭುಜ, ಹೆಲ್ಮೆಟ್‌ ಮತ್ತಿತರೆಡೆ ಚೆಂಡು ಅಪ್ಪಳಿಸಿ ನೋವು ಅನುಭವಿಸಿದರು. ಪದೇ ಪದೇ ಧಾವಿಸಿ ಬಂದ ಫಿಸಿಯೊ ಪ್ರಥಮ ಚಿಕಿತ್ಸೆ ನೀಡಿದರು. 

ಆರಂಭದಲ್ಲಿ ಚೆಂಡು ಗಾಳಿಯ ಬಲದಿಂದ ಹೆಚ್ಚು ಚಲನೆಯಾಗುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಸೀಮ್ ಮೂವ್‌ಮೆಂಟ್ ಜೋರಾಯಿತು. ಇದರಿಂದಾಗಿ ಬೌನ್ಸರ್‌ಗಳು ಹೆಚ್ಚಿ ಭಾರತ ಬ್ಯಾಟರ್‌ಗಳಿಗೆ ಫಜೀತಿ ತಂದವು. ಆಸ್ಟ್ರೇಲಿಯಾದ 6.2  ಮತ್ತು 6.5 ಅಡಿ ಎತ್ತರದ ಬೌಲರ್‌ಗಳು ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು. ಇದರಿಂದಾಗಿ ಭಾರತದ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತಪ್ಪಾಯಿತು. 

ವೇಗಿ ಸ್ಕಾಟ್ ಬೊಲ್ಯಾಂಡ್ (31ಕ್ಕೆ4) ಅವರು ಕರಾರುವಾಕ್ ದಾಳಿ ನಡೆಸಿದರು. ಭಾರತದ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಪೆಟ್ಟುಕೊಟ್ಟರು. ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 72.2 ಓವರ್‌ಗಳಲ್ಲಿ 185 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು.  ಮಿಚೆಲ್ ಸ್ಟಾರ್ಕ್ (49ಕ್ಕೆ3) ಮತ್ತು ಪ್ಯಾಟ್ ಕಮಿನ್ಸ್ (37ಕ್ಕೆ2) ಅವರೂ ಭಾರತಕ್ಕೆ ಬಲವಾದ ಪೆಟ್ಟುಕೊಟ್ಟರು. ಈ ಪಂದ್ಯದಲ್ಲಿ  ರೋಹಿತ್ ಬದಲು  ಶುಭಮನ್ ಗಿಲ್, ಆಕಾಶದೀಪ್ ಬದಲಿಗೆ ಪ್ರಸಿದ್ಧಕೃಷ್ಣ ಸ್ಥಾನ ಪಡೆದಿದ್ದಾರೆ. 

ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ದಿನದಾಟದ ಅಂತ್ಯಕ್ಕೆ 3 ಓವರ್‌ಗಳಲ್ಲಿ 1 ವಿಕೆಟ್‌ಗೆ 9 ರನ್ ಗಳಿಸಿತು. ಸ್ಯಾಮ್ ಕಾನ್‌ಸ್ಟಸ್ (ಬ್ಯಾಟಿಂಗ್ 7) ಕ್ರೀಸ್‌ನಲ್ಲಿದ್ದಾರೆ.  ಅಂತಿಮ ಓವರ್‌ನಲ್ಲಿ ಬೂಮ್ರಾ ಮತ್ತು ಸ್ಯಾಮ್ ನಡುವೆ ನಡೆದ ಮಾತಿನ ಚಕಮಕಿಯು ಆಟಕ್ಕೆ ಮತ್ತಷ್ಟು ಕಾವೇರಿಸಿತು. 

ಭಾರತದ ಬ್ಯಾಟರ್ ವಿರಾಟ್ ಕೊಹ್ಲಿ   –ಎಪಿ/ಪಿಟಿಐ ಚಿತ್ರ

ನಿರಾಶೆ ಮೂಡಿಸಿದ ವಿರಾಟ್

ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್. ರಾಹುಲ್ ಅವರು ಇನಿಂಗ್ಸ್ ಆರಂಭಿಸಿದರು. ಆದರೆ ಈ ಜೋಡಿಗೆ ಹೆಜ್ಜೆಯೂರಲು ಸಾಧ್ಯವಾಗಲಿಲ್ಲ. ಮೆಲ್ಬರ್ನ್‌ ಟೆಸ್ಟ್‌ನಲ್ಲಿ ಬೆಂಚ್ ಕಾದಿದ್ದ ಗಿಲ್ ಇಲ್ಲಿ ಮೂರನೇ ಕ್ರಮಾಂದಕ್ಲಿ ಮರಳಿದರು. ಅವರು ಮತ್ತು ವಿರಾಟ್‌ ಕೊಹ್ಲಿ ಎಚ್ಚರಿಕೆಯ ಜೊತೆಯಾಟವಾಡಿದರು. ಇದರಿಂದ ಇನಿಂಗ್ಸ್‌ಗೆ ಕೊಂಚ ಸ್ಥಿರತೆ ಲಭಿಸಿತು. ಆದರೆ ಕೊಹ್ಲಿ ಕ್ರೀಸ್‌ಗೆ ಬಂದು ಎದುರಿಸಿದ ಮೊದಲ ಎಸೆತದಲ್ಲಿಯೇ ಔಟಾಗುವುದರಿಂದ ಸ್ವಲ್ಪದರಲ್ಲಿ ಉಳಿದರು. ಬೊಲ್ಯಾಂಡ್ ಅವರು ಹಾಕಿದ ಬ್ಯಾಕ್ ಆಫ್ ಲೆಂಗ್ತ್ ಎಸೆತವು ಕೊಹ್ಲಿ ಬ್ಯಾಟ್ ಅಂಚು ಸವರಿ ಸ್ಪಿಪ್‌ನತ್ತ ನುಗ್ಗಿತು. ಫೀಲ್ಡರ್ ಸ್ಟೀವ್ ಸ್ಮಿತ್ ಡೈವ್ ಮಾಡಿ ಚೆಂಡನ್ನು ಹಿಡಿತಕ್ಕೆ ಪಡೆದರು. ಆದರೆ ಚೆಂಡಿನ ಅರ್ಧಭಾಗ ಹುಲ್ಲುಹಾಸನ್ನು ಉಜ್ಜಿದ್ದು ಮೂರನೇ ಅಂಪೈರ್ ಪರಿಶೀಲನೆಯಲ್ಲಿ ಸ್ಪಷ್ಟವಾಗಿ ಕಂಡಿತು. ಕೊಹ್ಲಿ ಶೂನ್ಯ ಸುತ್ತುವುದು ತಪ್ಪಿತು.  

ಊಟದ ವಿರಾಮಕ್ಕೂ ಮುನ್ನ ಗಿಲ್ ವಿಕೆಟ್ ಗಳಿಸುವಲ್ಲಿ ಸಫಲರಾದ ಸ್ಪಿನ್ನರ್ ನೇಥನ್ ಲಯನ್ ಅವರು 3ನೇ ವಿಕೆಟ್ ಜೊತೆಯಾಟವನ್ನು ಮುರಿದರು. ಇಬ್ಬರೂ 40 ರನ್‌ ಸೇರಿಸಿದರು. ವಿರಾಮದ ನಂತರ ಕೊಹ್ಲಿ ಭರವಸೆದಾಯಕ ಆಟವಾಡಲು ಆರಂಭಿಸಿದರು. ಆದರೆ ಈ ಹಂತದಲ್ಲಿಯೇ ಎಡವಿದರು. ಬೊಲ್ಯಾಂಡ್ ಹಾಕಿದ ಆಫ್‌ಸ್ಟಂಪ್ ಹೊರಗಿನ ಎಸೆತವನ್ನು ಕೆಣಕುವ ತಮ್ಮ ಹಳೆ ಚಾಳಿಯನ್ನು ಕೊಹ್ಲಿ ಪುನರಾವರ್ತಿಸಿದರು. ವೆಬ್‌ಸ್ಟರ್‌ಗೆ ಕ್ಯಾಚಿತ್ತರು. 

ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ತಮ್ಮ ಹೊಡೆತಗಳ ಆಯ್ಕೆಯಿಂದಾಗಿ ರಿಷಭ್ ಪಂತ್ ಇಲ್ಲಿ  ಬಹಳ ಎಚ್ಚರಿಕೆಯಿಂದ ಆಡಿದರು. ಪಂತ್ ಮತ್ತು ರವೀಂದ್ರ ಜಡೇಜ ತಾಳ್ಮೆಯಿಂದ ಆಡಿದರು. ಅದರಿಂದಾಗಿ ಚಹಾ ವಿರಾಮಕ್ಕೆ ತಂಡವು 4 ವಿಕೆಟ್‌ಗಳಿಗೆ 107 ರನ್ ಗಳಿಸಿತು.  ಮೈತುಂಬಾ ಪೆಟ್ಟುಗಳನ್ನು ತಿಂದ ಪಂತ್ ತಂಡವು ಅಲ್ಪಮೊತ್ತಕ್ಕೆ ಕುಸಿಯದಂತೆ ತಡೆಯಲು ಪ್ರಯತ್ನಿಸಿದರು. ಆದರೆ ಬೌಲರ್‌ಗಳು ಭಾರತದ ಬ್ಯಾಟರ್‌ಗಳ ಆಟ ಹೆಚ್ಚುಹೊತ್ತು ನಡೆಯದಂತೆ ನೋಡಿಕೊಂಡರು. ಕೇವಲ 61 ರನ್‌ಗಳ ಅಂತರದಲ್ಲಿ 6 ವಿಕೆಟ್‌ಗಳನ್ನು ಉರುಳಿಸಿದರು. ಅದರಲ್ಲಿ ವಾಷಿಂಗ್ಟನ್ ಸುಂದರ್ (14 ರನ್) ಮತ್ತು ಬೂಮ್ರಾ ಅವರ ಮಿಂಚಿನ 22 ರನ್ (17ಎಸೆತ) ಕಾಣಿಕೆ ಸೇರಿತ್ತು. 

ಪಂತ್‌ಗೆ ಎಂಟು ಪೆಟ್ಟು 

ಎಡಗೈ ಬ್ಯಾಟರ್ ರಿಷಭ್ ಪಂತ್ ಅವರು ಸಿಡ್ನಿ ಅಂಗಳದಲ್ಲಿ ಅನಿರೀಕ್ಷಿತ ಬೌನ್ಸರ್‌ ಎಸೆತಗಳಿಂದಾಗಿ ಸುಮಾರು ಎಂಟು ಬಾರಿ ಪೆಟ್ಟು ತಿಂದರು. ತೋಳು ಮುಂಗೈ ಹೊಟ್ಟೆಯ ಗಾರ್ಡ್ ಹೆಲ್ಮೆಟ್ ಗ್ರಿಲ್ ಮತ್ತು ತೋಳುಗಳಿಗೆ ಪೆಟ್ಟು ತಿಂದರು.  ಎರಡೂವರೆ ಗಂಟೆ ಕ್ರೀಸ್‌ನಲ್ಲಿದ್ದ ಅವರು ತಮ್ಮ ದಿಟ್ಟ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಎರಡು ವರ್ಷಗಳ ಹಿಂದೆ ಭೀಕರ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು  ಚೇತರಿಸಿಕೊಂಡಿರುವ ಪಂತ್ ಮಾನಸಿಕವಾಗಿ ಬಹಳ ಗಟ್ಟಿಯಾಗಿದ್ದಾರೆ. 

‘ಬಹುಶಃ ಇದೇ ಮೊದಲ ಸಲ ನಾನು ಇಷ್ಟೊಂದು ಪೆಟ್ಟುಗಳನ್ನು ಅನುಭವಿಸಿದ್ದೇನೆ. ಕ್ರಿಕೆಟ್‌ನಲ್ಲಿ ಯಾವುದೂ ಪೂರ್ವನಿರ್ಧರಿತವಲ್ಲ ಎನ್ನುವುದೂ ನಿಜ’ ಎಂದು ದಿನದಾಟದ ನಂತರ ಸುದ್ದಿಗಾರರಿಗೆ ಹೇಳಿದರು.

‘ಈ ಪೆಟ್ಟುಗಳಿಂದ ಬಹಳಷ್ಟು ನೋವಾಗಿದೆ. ಅದು ಸಹಜ. ತಂಡಕ್ಕಾಗಿ ಇದೆಲ್ಲವೂ ಸಹನೀಯ. ಚೆಂಡು ನನ್ನ ದೇಹದ ಯಾವ ಭಾಗಕ್ಕೆ ಅಪ್ಪಳಿಸುತ್ತದೆ ಎಂಬುದರ ಬಗ್ಗೆ ನನಗೆ ಯೋಚನೆ ಇರಲಿಲ್ಲ. ಆದರೆ ಪ್ರತಿಯೊಂದು ಎಸೆತವನ್ನೂ ಆಡುವತ್ತ ಮಾತ್ರ ಗಮನವಿತ್ತು’ ಎಂದರು.  ‘ಇದು ಕಠಿಣ ಸವಾಲೊಡ್ಡುವ ಪಿಚ್. ಎರಡನೇ ದಿನವೂ ಇದೇ ರೀತಿ ಇರುತ್ತದೆ’ ಎಂದು ಅಭಿಪ್ರಾಯಪಟ್ಟರು. 

ಕ್ಯಾಚ್‌ ಯತ್ನ: ಬ್ಯಾಂಕ್ರಾಫ್ಟ್‌, ಸ್ಯಾಮ್ಸ್‌ ತಲೆಗೆ ಗಾಯ

ಸಿಡ್ನಿ: ಆಸ್ಟ್ರೇಲಿಯಾ ತಂಡದ ಆಟಗಾರರಾದ ಕ್ಯಾಮರಾನ್ ಬ್ಯಾಂಕ್ರಾಫ್ಟ್ ಮತ್ತು ಡೇನಿಯಲ್ ಸ್ಯಾಮ್ಸ್‌ ಅವರು ಬಿಗ್‌ಬ್ಯಾಷ್‌ ಕ್ರಿಕೆಟ್‌ ಲೀಗ್‌ ಪಂದ್ಯದ ವೇಳೆ ಪರಸ್ಪರ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದಾರೆ.  ಇವರಿಬ್ಬರನ್ನು ಒಳಗೊಂಡ ಸಿಡ್ನಿ ಥಂಡರ್‌ ತಂಡ ಶುಕ್ರವಾರ ಪರ್ತ್‌ ಸ್ಕಾರ್ಚರ್ಸ್ ವಿರುದ್ಧ ಆಡುವಾಗ ಈ ಘಟನೆ ನಡೆದಿದೆ.

ಕ್ಯಾಚ್‌ ಹಿಡಿಯಲು ಹೋದಾಗ ಇವರಿಬ್ಬರ ತಲೆ ಪರಸ್ಪರ ಡಿಚ್ಚಿಯಾಯಿತು. ಮೂಗಿನಿಂದ ರಕ್ತ ಸುರಿಯುತ್ತಿದ್ದರೂ ಬ್ಯಾಂಕ್ರಾಫ್ಟ್‌ ನಡೆದುಕೊಂಡು ಕ್ರೀಡಾಂಗಣದಿಂದ ಹೊರಬರುವಲ್ಲಿ ಯಶಸ್ವಿ ಆದರು. 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಪಂದ್ಯದ ವೇಳೆ ಚೆಂಡು ತಿದ್ದಿದ ಆರೋಪದಲ್ಲಿ ಬ್ಯಾಂಕ್ರಾಫ್ಟ್‌ ಮೇಲೆ 9 ತಿಂಗಳ ನಿಷೇಧ ಹೇರಲಾಗಿತ್ತು. 32 ವರ್ಷ ವಯಸ್ಸಿನ ಅವರು 10 ಟೆಸ್ಟ್‌ಗಳನ್ನು ಆಡಿದ್ದಾರೆ.

ಟಿ20 ಅಂತರರಾಷ್ಟ್ರೀಯ 10 ಪಂದ್ಯಗಳನ್ನು ಆಡಿರುವ ಸ್ಯಾಮ್ಸ್‌  ಅವರನ್ನು ಸ್ಟ್ರೆಚರ್‌ನಲ್ಲಿ ಕರೆಯೊಯ್ಯಲಾಯಿತು.

‘ಆಸ್ಪತ್ರೆಗೆ ದಾಖಲಾಗಿರುವ ಇಬ್ಬರೂ ಪ್ರಜ್ಞಾವಸ್ಥೆಯಲ್ಲಿದ್ದು, ಮಾತನಾಡುತ್ತಿದ್ದಾರೆ. ಅವರಿಗೆ ಮೂಳೆ ಮುರಿದಿರುವ ಸಾಧ್ಯತೆ ಇದೆ’ ಎಕ್ಸ್‌ನಲ್ಲಿ ಥಂಡರ್‌ ತಿಳಿಸಿದೆ.

ಸ್ಕೋರ್ ಕಾರ್ಡ್

ಮೊದಲ ಇನಿಂಗ್ಸ್‌; ಭಾರತ 185 (72.2 ಓವರ್‌ಗಳಲ್ಲಿ)

ಜೈಸ್ವಾಲ್‌ ಸಿ ವೆಬ್‌ಸ್ಟರ್‌ ಬಿ ಬೋಲ್ಯಾಂಡ್‌ 10 (26ಎ, 4x1) 

ರಾಹುಲ್‌ ಸಿ ಕಾನ್ಸ್‌ಟೆಸ್‌ ಬಿ ಸ್ಟಾರ್ಕ್‌ 4 (14ಎ)

ಶುಭಮನ್‌  ಸಿ ಸ್ಮಿತ್‌ ಬಿ ಲಯನ್‌ 20 (64ಎ, 4x2)

ಕೊಹ್ಲಿ ಸಿ ವೆಬ್‌ಸ್ಟರ್‌ ಬಿ ಬೋಲ್ಯಾಂಡ್‌ 17 (69ಎ)

ಪಂತ್‌ ಸಿ ಕಮಿನ್ಸ್‌ ಬಿ ಬೋಲ್ಯಾಂಡ್‌ 40 (98ಎ, 4x3, 6x1)

ಜಡೇಜ ಎಲ್‌ಬಿಡಬ್ಲ್ಯು ಬಿ ಸ್ಟಾರ್ಕ್‌ 26 (95ಎ, 4x3)

ನಿತೀಶ್‌ ಸಿ ಸ್ಮಿತ್‌ ಬಿ ಬೋಲ್ಯಾಂಡ್‌ 0 (1ಎ) 

ವಾಷಿಂಗ್ಟನ್‌ ಸಿ ಕ್ಯಾರಿ ಬಿ ಕಮಿನ್ಸ್‌ 14 (30ಎ, 4x3)

ಪ್ರಸಿದ್ಧ ಸಿ ಕಾನ್ಸ್‌ಟೆಸ್‌ ಬಿ ಸ್ಟಾರ್ಕ್‌ 3 (10ಎ)

ಬೂಮ್ರಾ ಸಿ ಸ್ಟಾರ್ಕ್‌ ಬಿ ಕಮಿನ್ಸ್‌ 22 (17ಎ, 4x3, 6x1) 

ಸಿರಾಜ್‌ ಔಟಾಗದೇ 3 (16ಎ)

ಇತರೆ: 26 (ಬೈ 7, ಲೆಗ್‌ಬೈ 13, ನೋಬಾಲ್‌ 6)  

ವಿಕೆಟ್ ಪತನ: 1–11 (ಕೆ.ಎಲ್‌.ರಾಹುಲ್‌, 4.6), 2–17 (ಯಶಸ್ವಿ ಜೈಸ್ವಾಲ್‌, 7.4), 3–57 (ಶುಭಮನ್‌ ಗಿಲ್‌, 24.6), 4–72 (ವಿರಾಟ್‌ ಕೊಹ್ಲಿ, 31.3), 5–120 (ರಿಷಭ್‌ ಪಂತ್‌, 56.4),6–120 (ನಿತೀಶ್‌ ಕುಮಾರ್‌ ರೆಡ್ಡಿ, 56.5), 7–134 (ರವೀಂದ್ರ ಜಡೇಜ, 62.4), 8–148 (ವಾಷಿಂಗ್ಟನ್‌ ಸುಂದರ್‌, 65.5 ) 9–168 (ಪ್ರಸಿದ್ಧ ಕೃಷ್ಣ, 68.2), 10–185 (ಜಸ್‌ಪ್ರೀತ್‌ ಬೂಮ್ರಾ 72.2)  

ಬೌಲಿಂಗ್‌: ಮಿಚೆಲ್‌ ಸ್ಟಾರ್ಕ್‌ 18–5–49–3, ಪ್ಯಾಟ್‌ ಕಮಿನ್ಸ್‌ 15.2–4–37–2, ಸ್ಕಾಟ್‌ ಬೋಲ್ಯಾಂಡ್‌ 20–8–31–4, ಬ್ಯೂ ವೆಬ್‌ಸ್ಟರ್‌ 13–4–29–0, ನೇಥನ್‌ ಲಯನ್‌ 6–2–19–1

ಆಸ್ಟ್ರೇಲಿಯಾ 1ಕ್ಕೆ 9 (3 ಓವರ್‌ಗಳಲ್ಲಿ)

ಕಾನ್ಸ್‌ಟೆಸ್‌  ಔಟಾಗದೇ  7 (8ಎ, 4x1) 

ಖ್ವಾಜಾ ಸಿ ರಾಹುಲ್‌ ಬಿ ಬೂಮ್ರಾ 2 (10ಎ)

ವಿಕೆಟ್ ಪತನ: 1–9 (ಉಸ್ಮಾನ್‌ ಖ್ವಾಜಾ, 2.6)

ಬೌಲಿಂಗ್‌: ಬೌಲಿಂಗ್‌: ಬೂಮ್ರಾ 2–0–7–1; ಸಿರಾಜ್‌ 1–0–2–0

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.