ADVERTISEMENT

IND vs AUS | ಮೊದಲ ಟೆಸ್ಟ್‌ಗೆ ಆಡುವ 11ರ ಬಳಗ ಅಂತಿಮಗೊಳಿಸಲಾಗಿದೆ: ಬೂಮ್ರಾ

ಪಿಟಿಐ
Published 21 ನವೆಂಬರ್ 2024, 5:29 IST
Last Updated 21 ನವೆಂಬರ್ 2024, 5:29 IST
<div class="paragraphs"><p>ಬಾರ್ಡರ್-ಗವಾಸ್ಕರ್ ಟ್ರೋಫಿ ಜತೆ ಪ್ಯಾಟ್ ಕಮಿನ್ಸ್ ಹಾಗೂ ಜಸ್‌ಪ್ರೀತ್ ಬೂಮ್ರಾ</p></div>

ಬಾರ್ಡರ್-ಗವಾಸ್ಕರ್ ಟ್ರೋಫಿ ಜತೆ ಪ್ಯಾಟ್ ಕಮಿನ್ಸ್ ಹಾಗೂ ಜಸ್‌ಪ್ರೀತ್ ಬೂಮ್ರಾ

   

(ಚಿತ್ರ ಕೃಪೆ: X@ICC)

ಪರ್ತ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಆಡುವ ಹನ್ನೊಂದರ ಬಳಗವನ್ನು ಅಂತಿಮಗೊಳಿಸಲಾಗಿದೆ ಎಂದು ಟೀಮ್ ಇಂಡಿಯಾದ ಉಸ್ತುವಾರಿ ನಾಯಕ ಜಸ್‌ಪ್ರೀತ್ ಬೂಮ್ರಾ ತಿಳಿಸಿದ್ದಾರೆ.

ADVERTISEMENT

ಆದರೆ ಈ ಕುರಿತು ಪರ್ತ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದ ಟಾಸ್ ವೇಳೆಯಷ್ಟೇ ಬಹಿರಂಗಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಪರ್ತ್‌ನಲ್ಲಿ ನಾಳೆ (ನವೆಂಬರ್ 22) ಆರಂಭವಾಗಲಿದೆ.

ಈ ಪಂದ್ಯಕ್ಕೆ ಎರಡನೇ ಮಗುವಿನ ಜನನದ ಹಿನ್ನೆಲೆಯಲ್ಲಿ ನಾಯಕ ರೋಹಿತ್ ಶರ್ಮಾ ಅಲಭ್ಯರಾಗಿದ್ದಾರೆ. ರೋಹಿತ್ ಎರಡನೇ ಪಂದ್ಯದ ವೇಳೆ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.

ಖಾಯಂ ನಾಯಕ ರೋಹಿತ್ ಅನುಪಸ್ಥಿತಿಯಲ್ಲಿ ಉಪನಾಯಕ ಜಸ್‌ಪ್ರೀತ್ ಬೂಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ.

ಇತ್ತೀಚೆಗೆ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 0-3 ಅಂತರದ ಕ್ಲೀನ್-ಸ್ವೀಪ್ ಮುಖಭಂಗಕ್ಕೊಳಗಾಗಿತ್ತು.

ಆದರೆ ಈ ಟೆಸ್ಟ್ ಸರಣಿಯು ಆಸೀಸ್ ವಿರುದ್ಧದ ಸರಣಿಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಬೂಮ್ರಾ ಹೇಳಿದ್ದಾರೆ.

'ಯಾವುದೇ ಪಂದ್ಯ ಗೆದ್ದಾಗಲೂ ಶೂನ್ಯದಿಂದಲೇ ಪ್ರಾರಂಭಿಸುತ್ತೇವೆ. ಪಂದ್ಯ ಸೋತಾಗಲೂ ಶೂನ್ಯದಿಂದಲೇ ಆರಂಭಿಸುತ್ತೇವೆ. ನ್ಯೂಜಿಲೆಂಡ್ ಸರಣಿಯಲ್ಲಿ ಮಾಡಿದ ತಪ್ಪಿನಿಂದ ಪಾಠಗಳನ್ನು ಕಲಿತಿದ್ದೇವೆ. ಆದರೆ ಇಲ್ಲಿನ ಪರಿಸ್ಥಿತಿ ಭಿನ್ನವಾಗಿದೆ. ಇಲ್ಲಿ ನಮ್ಮ ಫಲಿತಾಂಶವೂ ವಿಭಿನ್ನವಾಗಿದೆ' ಎಂದು ಹೇಳಿದ್ದಾರೆ.

ರೋಹಿತ್ ಅನುಪಸ್ಥಿತಿಯಲ್ಲಿ ಯಶಸ್ವಿ ಜೈಸ್ವಾಲ್ ಜೊತೆ ಕರ್ನಾಟಕದ ಕೆ.ಎಲ್. ರಾಹುಲ್ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ. ಆದರೆ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಶುಭಮನ್ ಗಿಲ್ ಪಂದ್ಯಕ್ಕೆ ಲಭ್ಯರಾಗಲಿದ್ದಾರೆಯೇ ಎಂಬುದು ಇನ್ನೂ ಖಚಿತಗೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.