ADVERTISEMENT

ಅಂತಿಮ ಟೆಸ್ಟ್‌ನಲ್ಲಿ ಬೂಮ್ರಾ ಆಡುವರೇ? ವಿಕ್ರಂ ರಾಥೋಡ್ ಏನಂತಾರೆ?

ಏಜೆನ್ಸೀಸ್
Published 14 ಜನವರಿ 2021, 9:56 IST
Last Updated 14 ಜನವರಿ 2021, 9:56 IST
ಜಸ್‌ಪ್ರೀತ್ ಬೂಮ್ರಾ
ಜಸ್‌ಪ್ರೀತ್ ಬೂಮ್ರಾ   

ಬ್ರಿಸ್ಬೇನ್‌: ಗಾಬಾದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮುಂಚೂಣಿಯ ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಆಡುವರೇ ಎಂಬುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿರುವ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್, ಶುಕ್ರವಾರ ಬೆಳಗ್ಗೆಯಷ್ಟೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.

ಜಸ್‌ಪ್ರೀತ್ ಬೂಮ್ರಾ ಫಿಟ್ನೆಸ್ ಮರಳಿ ಪಡೆಯುವ ನಿಟ್ಟಿನಲ್ಲಿ ಬಿಸಿಸಿಐ ವೈದ್ಯಕೀಯ ತಂಡದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದವರು ತಿಳಿಸಿದರು.

ವೈದ್ಯಕೀಯ ಸಿಬ್ಬಂದಿಗಳ ನೆರವಿನಿಂದ ಗಾಯದ ಸಮಸ್ಯೆಯನ್ನು ಪರಿಶೀಲಿಸಲಾಗುತ್ತಿದೆ. ಅವರು ಎಲ್ಲ ಆಟಗಾರರೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಜಸ್‌ಪ್ರೀತ್ ಬೂಮ್ರಾ ಲಭ್ಯವಾಗುವರೇ ಎಂಬುದಕ್ಕೆ ಸಂಬಂಧಿಸಿದಂತೆ ಕಾಮೆಂಟ್ ನೀಡುವ ಸ್ಥಿತಿಯಲ್ಲಿಲ್ಲ. ಅವರಿಗೆ ಚೇತರಿಸಿಕೊಳ್ಳಲು ಸಾಧ್ಯವಾದಷ್ಟು ಸಮಯವನ್ನು ನೀಡಲು ಬಯಸುತ್ತೇವೆ. ಪಂದ್ಯಾರಂಭವಾಗುವ ದಿನದ ವೇಳೆಯಷ್ಟೇ ಆಡುವ ಬಳಗದ ಬಗ್ಗೆ ಅಂತಿಮ ನಿರ್ಧಾರವಾಗಲಿದೆ ಎಂದು ಹೇಳಿದರು.

ADVERTISEMENT

ಜಸ್‌ಪ್ರೀತ್ ಬೂಮ್ರಾ ಫಿಟ್ನೆಸ್ ಮಟ್ಟ ಮತ್ತು ಅವರುಆಡುತ್ತಾರೆಯೋ ಇಲ್ಲವೋ ಎಂಬುದನ್ನು ತಿಳಿಯಲು ನಾಳೆ (ಶುಕ್ರವಾರ) ಬೆಳಗ್ಗೆಯ ವರೆಗೆ ಕಾಯಬೇಕಾಗಿದೆ. ಅವರು ಫಿಟ್ ಆದರೆ ಆಡುತ್ತಾರೆ. ಫಿಟ್ ಆಗಿಲ್ಲದಿದ್ದರೆ ಖಂಡಿತವಾಗಿಯೂ ಆಡುವುದಿಲ್ಲ ಎಂದು ವಿಕ್ರಂ ರಾಥೋಡ್ ವಿವರಿಸಿದರು.

ಈ ಮೊದಲು ಜಸ್‌ಪ್ರೀತ್ ಬೂಮ್ರಾ ಶೇಕಡಾ 50ರಷ್ಟು ಫಿಟ್ ಆದರೂ ಅಂತಿಮ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಟೀಮ್ ಮ್ಯಾನೇಜ್‌ಮೆಂಟ್ ಹೇಳಿಕೆಯು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಮಾಜಿಗಳಿಂದಲೂ ಟೀಕೆ ವ್ಯಕ್ತವಾಗಿತ್ತು.

ಆಸ್ಟ್ರೇಲಿಯಾ ವಿರುದ್ದ ಮೂರನೇ ಟೆಸ್ಟ್ ಪಂದ್ಯದಲ್ಲಿ ಜಸ್‌ಪ್ರೀತ್ ಬೂಮ್ರಾ ಕಿಬೊಟ್ಟೆಯ ಗಾಯದ ಸಮಸ್ಯೆಗೆ ಸಿಲುಕಿದ್ದರು. ಅಂತಿಮ ಪಂದ್ಯಕ್ಕೆ ಬೂಮ್ರಾ ಅಲಭ್ಯರಾದ್ದಲ್ಲಿ ತಂಡದ ವೇಗದ ಪಡೆಯನ್ನು ಮೊಹಮ್ಮದ್ ಸಿರಾಜ್ ಮುನ್ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.