ಕೆ.ಎಲ್.ರಾಹುಲ್, ರೋಹಿತ್ ಶರ್ಮಾ
(ಚಿತ್ರ ಕೃಪೆ: ಬಿಸಿಸಿಐ, ಪಿಟಿಐ)
ಕ್ಯಾನ್‌ಬೆರಾ: ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಜೊತೆ ಕೆ.ಎಲ್.ರಾಹುಲ್ ಇನಿಂಗ್ಸ್ ಆರಂಭಿಸಬೇಕು ಎಂದು ಭಾರತೀಯ ಕ್ರಿಕೆಟಿಗ ಚೇತೇಶ್ವರ ಪೂಜಾರ ಅಭಿಪ್ರಾಯಪಟ್ಟಿದ್ದಾರೆ.
ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಮೊದಲ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಅಲಭ್ಯರಾಗಿದ್ದರು. ಇದರಿಂದಾಗಿ ಜೈಸ್ವಾಲ್ ಜೊತೆ ರಾಹುಲ್ ಇನಿಂಗ್ಸ್ ಆರಂಭಿಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ ವೈಫಲ್ಯ ಕಂಡಿದ್ದರೂ ಜೈಸ್ವಾಲ್ ಹಾಗೂ ರಾಹುಲ್ ದ್ವಿತೀಯ ಇನಿಂಗ್ಸ್‌ನಲ್ಲಿ ಅಮೂಲ್ಯ ದ್ವಿಶತಕದ ಜೊತೆಯಾಟ ಕಟ್ಟಿದ್ದರು. ಜೈಸ್ವಾಲ್ 161 ಹಾಗೂ ರಾಹುಲ್ 77 ರನ್ ಗಳಿಸಿ ಅಬ್ಬರಿಸಿದ್ದರು.
ಈಗ ರೋಹಿತ್ ಪುನರಾಗಮನದೊಂದಿಗೆ ಅಗ್ರ ಕ್ರಮಾಂಕದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಇದರಿಂದಾಗಿ ರಾಹುಲ್ ಮತ್ತೆ ಮಧ್ಯಮ ಕ್ರಮಾಂಕದಲ್ಲಿ ಆಡಬೇಕಾದ ಪರಿಸ್ಥಿತಿ ಬರಬಹುದು.
ಆದರೆ ರಾಹುಲ್ ಅವರ ಕ್ರಮಾಂಕವನ್ನು ಬದಲಿಸಬಾರದು ಎಂದು ಪೂಜಾರ ಅಭಿಪ್ರಾಯಪಟ್ಟಿದ್ದಾರೆ. 'ನಾವು ಈಗ ಇರುವ ಆರಂಭಿಕ ಜೋಡಿಯೊಂದಿಗೆ ಮುಂದುವರಿಯಬೇಕು. ರೋಹಿತ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ಹಾಗೆಯೇ ಶುಭಮನ್ ಗಿಲ್ ಲಭ್ಯರಾದರೆ ಐದನೇ ಕ್ರಮಾಂಕದಲ್ಲಿ ಆಡಬಹುದು' ಎಂದು ಅವರು ಹೇಳಿದ್ದಾರೆ.
'ಹಾಗೊಂದು ವೇಳೆ ರೋಹಿತ್ ಆರಂಭಿಕನಾಗಿ ಮುಂದುವರಿಯಲು ಬಯಸುವುದಾದರೆ ರಾಹುಲ್ ಮೂರನೇ ಕ್ರಮಾಂಕದಲ್ಲಿ ಆಡಬೇಕು. ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಬರಬಾರದು. ರಾಹುಲ್ ಅಗ್ರ ಕ್ರಮಾಂಕದ ಬ್ಯಾಟರ್ ಆಗಿದ್ದು, ಅವರ ಆಟದ ಶೈಲಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ತಂಡವು ಹೆಚ್ಚಿನ ಪ್ರಯೋಗ ಮಾಡುವುದಿಲ್ಲ ಎಂದು ನಂಬಿದ್ದೇನೆ' ಎಂದು ಅವರು ತಿಳಿಸಿದ್ದಾರೆ.
ಹೆಬ್ಬೆರಳಿನ ಗಾಯದಿಂದಾಗಿ ಶುಭಮನ್ ಗಿಲ್ ಸಹ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು. ಈಗ ಗಾಯಮುಕ್ತಗೊಂಡಿರುವ ಗಿಲ್ ಅಭ್ಯಾಸವನ್ನು ಆರಂಭಿಸಿದ್ದಾರೆ.
'ಐದನೇ ಕ್ರಮಾಂಕ ಗಿಲ್‌ಗೆ ಸೂಕ್ತವೆನಿಸಲಿದೆ. ಒಂದು ವೇಳೆ ಒಂದೆರಡು ವಿಕೆಟ್‌ಗಳನ್ನು ಬೇಗನೇ ಕಳೆದುಕೊಂಡರೂ ಹೊಸ ಚೆಂಡನ್ನು ಸಮರ್ಥವಾಗಿ ನಿಭಾಯಿಸಬಲ್ಲರು. ಹಾಗೆಯೇ 25-30 ಓವರ್‌ಗಳ ಬಳಿಕ ಬಂದರೆ ತಮ್ಮ ಸಹಜ ಶೈಲಿಯಲ್ಲಿ ಬ್ಯಾಟಿಂಗ್ ಮಾಡಬಹುದು' ಎಂದು ಅವರು ಹೇಳಿದರು.
'ಮೂರು ವಿಕೆಟ್ ಬೇಗನೇ ಕಳೆದುಕೊಂಡರೂ ಗಿಲ್ ಆಗಮನದಿಂದ ರಿಷಭ್ ಪಂತ್ ಹೊಸ ಚೆಂಡನ್ನು ಎದುರಿಸಬೇಕಾದ ಪರಿಸ್ಥಿತಿಯನ್ನು ತಪ್ಪಿಸಬಹುದು. ಪಂತ್ ಹೊಸ ಚೆಂಡು ಎದುರಿಸಬಾರದು' ಎಂದು ಪೂಜಾರ ಅಭಿಪ್ರಾಯಪಟ್ಟಿದ್ದಾರೆ.
ಟೆಸ್ಟ್ ವೃತ್ತಿ ಜೀವನದಲ್ಲಿ ಆರಂಭಿಕನಾಗಿ ಗುರುತಿಸಿಕೊಂಡಿದ್ದ ಗಿಲ್ ಬಳಿಕ ಮೂರನೇ ಕ್ರಮಾಂಕದಲ್ಲಿ ಆಡಲು ಉತ್ಸುಕತೆ ತೋರಿದ್ದರು.
ರೋಹಿತ್ ಹಾಗೂ ಗಿಲ್ ಆಗಮನದೊಂದಿಗೆ ಅಡಿಲೇಡ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೆಲವೊಂದು ಬದಲಾವಣೆ ಕಂಡುಬರುವ ನಿರೀಕ್ಷೆಯಿದೆ. ಮೊದಲ ಪಂದ್ಯದಲ್ಲಿ ಪ್ರಭಾವಿ ಎನಿಸಿಕೊಳ್ಳುವಲ್ಲಿ ವಿಫಲರಾಗಿದ್ದ ದೇವದತ್ತ ಪಡಿಕ್ಕಲ್ ಹಾಗೂ ಧ್ರುವ್ ಜುರೇಲ್ ಅವಕಾಶ ವಂಚಿತರಾಗುವ ಸಾಧ್ಯತೆಯಿದೆ.
ಡಿಸೆಂಬರ್ 6ರಂದು ಅಡಿಲೇಡ್‌ನಲ್ಲಿ ಆರಂಭವಾಗಲಿರುವ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ಎರಡು ದಿನಗಳ (ನ.30-ಡಿ.01) ಅಭ್ಯಾಸ ಪಂದ್ಯದಲ್ಲಿ ಭಾಗವಹಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.