ADVERTISEMENT

IND vs BAN 1st Test | ಬಾಂಗ್ಲಾ 150ಕ್ಕೆ ಆಲೌಟ್; ಭಾರತಕ್ಕೆ ಇನಿಂಗ್ಸ್ ಮುನ್ನಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2022, 8:34 IST
Last Updated 24 ಡಿಸೆಂಬರ್ 2022, 8:34 IST
   

ಚಿತ್ತಗಾಂಗ್: ಭಾರತ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ಬಾಂಗ್ಲಾದೇಶ ತಂಡ ಕೇವಲ 150 ರನ್‌ಗಳಿಗೆ ಆಲೌಟ್‌ ಆಗಿದ್ದು, 254ರನ್‌ ಹಿನ್ನಡೆ ಅನುಭವಿಸಿದೆ.

ಬುಧವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಅನುಭವಿ ಚೇತೇಶ್ವರ ಪೂಜಾರ (90), ಯುವ ಆಟಗಾರ ಶ್ರೇಯಸ್‌ ಅಯ್ಯರ್‌ (86), ಆಲ್ರೌಂಡರ್‌ ಆರ್.ಅಶ್ವಿನ್‌ (58) ಗಳಿಸಿದ ಅರ್ಧಶತಕ ಹಾಗೂ ಸ್ಪಿನ್ನರ್‌ ಕುಲದೀಪ್‌ ಯಾದವ್‌ (40) ಅವರ ಉಪಯಕ್ತ ಬ್ಯಾಟಿಂಗ್‌ ಬಲದಿಂದ 404 ರನ್‌ ಗಳಿಸಿತ್ತು.

ಬಳಿಕ ಬ್ಯಾಟಿಂಗ್ ಆರಂಭಿಸಿದ ಆತಿಥೇಯರು, ಭಾರತದ ಬೌಲರ್‌ಗಳೆದುರು ನಿರುತ್ತರರಾದರು. ಎರಡನೇ ದಿನದಾಟದ ಅಂತ್ಯಕ್ಕೆ44 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿದ್ದ ಬಾಂಗ್ಲಾ ಪಡೆ, ಆ ಮೊತ್ತಕ್ಕೆ 17 ರನ್‌ ಸೇರಿಸಿ ಮೂರನೇ ದಿನದ ಮೊದಲ ಅವಧಿಯಲ್ಲೇ ಸರ್ವಪತನ ಕಂಡಿತು.

ADVERTISEMENT

ವಿಕೆಟ್‌ಕೀಪರ್‌–ಬ್ಯಾಟರ್‌ ಮುಷ್ಫಿಕುರ್‌ ರಹೀಂ 28 ರನ್‌ಗಳಿಸಿದ್ದೇ ಆ ತಂಡದ ಬ್ಯಾಟರ್‌ಗಳಿಂದ ಬಂದ ವೈಯಕ್ತಿಕ ಗರಿಷ್ಠ ಮೊತ್ತ. ಐದು ಮಂದಿ ಎರಡಂಕಿಯ ರನ್‌ ಸಹ ಗಳಿಸಲಿಲ್ಲ.

ಭಾರತ ಪರ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ 'ಚೈನಾಮನ್‌' ಕುಲದೀಪ್‌ ಯಾದವ್‌ 5 ವಿಕೆಟ್‌ ಗೊಂಚಲು ಪಡೆದು ಕಾಟ ಕೊಟ್ಟರು.

ಉಳಿದಂತೆ ಯುವ ವೇಗಿ ಮೊಹಮ್ಮದ್‌ ಸಿರಾಜ್‌ ಪ್ರಮುಖ ಮೂರು ವಿಕೆಟ್‌ಗಳನ್ನು ಪಡೆದರು. ಉಮೇಶ್‌ ಯಾದವ್‌ ಹಾಗೂ ಅಕ್ಷರ್‌ ಪಟೇಲ್ ತಲಾ ಒಂದು ವಿಕೆಟ್‌ ಕಿತ್ತರು.

ಸದ್ಯ ಎರಡನೇ ಇನಿಂಗ್ಸ್‌ ಆರಂಭಿಸಿರುವ ಭಾರತ ವಿಕೆಟ್‌ ನಷ್ಟವಿಲ್ಲದೆ 26 ರನ್‌ ಗಳಿಸಿ, 280ರನ್‌ಗಳ ಮುನ್ನಡೆ ಸಾಧಿಸಿದೆ. ನಾಯಕ ಕೆ.ಎಲ್‌. ರಾಹುಲ್‌ (11) ಮತ್ತು ಶುಭಮನ್‌ ಗಿಲ್‌ (14) ಕ್ರೀಸ್‌ನಲ್ಲಿದ್ದಾರೆ.

ಇನ್ನೂ ಎರಡು ದಿನಗಳ ಆಟ ಬಾಕಿ ಇದೆ. ಹೀಗಾಗಿ ಸ್ಪಷ್ಟ ಫಲಿತಾಂಶ ನಿರೀಕ್ಷಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.