ADVERTISEMENT

IND vs BAN Pink test | ಭಾರತಕ್ಕೆ ಮುನ್ನಡೆ, ಕೊಹ್ಲಿ ಹೆಸರಿಗೆ ಮತ್ತೊಂದು ದಾಖಲೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 16:06 IST
Last Updated 22 ನವೆಂಬರ್ 2019, 16:06 IST
ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ವೈಖರಿ. (ಒಳ ಚಿತ್ರದಲ್ಲಿ ಭಾರತ ತಂಡದ ಆಟಗಾರರು)
ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ವೈಖರಿ. (ಒಳ ಚಿತ್ರದಲ್ಲಿ ಭಾರತ ತಂಡದ ಆಟಗಾರರು)   

ಕೋಲ್ಕತ್ತ:ಟೆಸ್ಟ್‌ ಸರಣಿಯಎರಡನೇ ಹಾಗೂ ಅಂತಿಮ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬಾಂಗ್ಲಾದೇಶ 106 ರನ್‌ಗಳಿಗೆ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿರುವ ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡ, ಮೊದಲ ದಿನದಾಟದ ಅಂತ್ಯಕ್ಕೆ 46 ಓವರ್‌ಗಳಲ್ಲಿಮೂರು ವಿಕೆಟ್‌ ಕಳೆದುಕೊಂಡು174 ರನ್‌ ಕಲೆ ಹಾಕಿದೆ. ಇದರೊಂದಿಗೆ 68 ರನ್‌ಗಳ ಮುನ್ನಡೆ ಸಾಧಿಸಿದ್ದು, ಪಿಂಕ್‌ಬಾಲ್‌ ಟೆಸ್ಟ್‌ನಲ್ಲಿಬೃಹತ್‌ ಮೊತ್ತ ಕಲೆಹಾಕುವತ್ತ ಮುನ್ನಡೆದಿದೆ.

ಟೆಸ್ಟ್‌ ಪಂದ್ಯವನ್ನು ಭಾರತದಲ್ಲಿ ಇದೇ ಮೊದಲ ಬಾರಿಗೆ ಹಗಲು ರಾತ್ರಿ ಆಯೋಜಿಸಲಾಗುತ್ತಿದೆ. ಹಾಗಾಗಿ ಕ್ರಿಕೆಟ್‌ ಜಗತ್ತನ್ನು ತನ್ನತ್ತ ಸೆಳೆದಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದ ಪ್ರವಾಸಿ ಪಡೆ,ಅಲ್ಪಮೊತ್ತಕ್ಕೆ ಕುಸಿದಿತ್ತು. ತ್ರಿವಳಿ ವೇಗಿಗಳಾದ ಇಶಾಂತ್‌ ಶರ್ಮಾ (5), ಉಮೇಶ್‌ ಯಾದವ್‌ (3) ಹಾಗೂ ಮೊಹಮದ್‌ ಶಮಿಅತ್ಯುತ್ತಮವಾಗಿ ಬೌಲಿಂಗ್‌ ದಾಳಿ ಸಂಘಟಿಸಿ, ಪ್ರವಾಸಿ ಬಳಗದ ಎಲ್ಲ ವಿಕೆಟ್‌ಗಳನ್ನೂ ಕಬಳಿಸಿದ್ದರು.

ಮೊತ್ತ ಹಿಂಬಾಲಿಸಿದ ಭಾರತಕ್ಕೂ ಆರಂಭಿಕ ಆಘಾತ ಎದುರಾಯಿತು. ಕನ್ನಡಿಗ ಮಯಂಕ್‌ ಅಗರವಾಲ್‌ (14) ಹಾಗೂ ರೋಹಿತ್‌ ಶರ್ಮಾ (21) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ವಿಫಲವಾದರು. ಮೂರನೇ ವಿಕೆಟ್‌ಗೆ ಟೆಸ್ಟ್‌ ಪರಿಣಿತ ಚೇತೇಶ್ವರ ಪೂಜಾರ (55) ಹಾಗೂ ನಾಯಕ ವಿರಾಟ್‌ ಕೊಹ್ಲಿ 94 ರನ್‌ಗಳ ಜೊತೆಯಾಟವಾಡಿದರು.

ಸದ್ಯ ಉಪನಾಯಕ ಅಜಿಂಕ್ಯ ರಹಾನೆ ಹಾಗೂ ಕೊಹ್ಲಿ ಕ್ರೀಸ್‌ನಲ್ಲಿದ್ದಾರೆ.93 ಎಸೆತಗಳಲ್ಲಿ8 ಬೌಂಡರಿ ಸಹಿತ59 ರನ್‌ ಕಲೆಹಾಕಿರುವ ಕೊಹ್ಲಿ ತಾಳ್ಮೆಯ ಆಟ ಮುಂದುವರಿಸಿದ್ದಾರ. 22 ಎಸೆತಗಳಲ್ಲಿ 23 ರನ್‌ ಗಳಿಸಿರುವ ರಹಾನೆ, ಕೊಹ್ಲಿಗೆ ತಕ್ಕ ಸಾಥ್‌ ನೀಡುತ್ತಿದ್ದಾರೆ.

ವೇಗವಾಗಿ ಐದು ಸಾವಿರ ರನ್ ಕಲೆಹಾಕಿದ ನಾಯಕ ಕೊಹ್ಲಿ

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಯಕರಾಗಿ ವೇಗವಾಗಿ ಐದು ಸಾವಿರ ರನ್‌ ಪೂರೈಸಿದ ಆಟಗಾರ ಎಂಬ ಶ್ರೇಯಕ್ಕೆ ಭಾಜನರಾದರು.

ನಾಯಕರಾಗಿ ಇದುವರೆಗೆ 53 ಪಂದ್ಯಗಳಲ್ಲಿ ತಂಡ ಮುನ್ನಡೆಸಿರುವ ಅವರು, 86 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು. ಈ ದಾಖಲೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಹೆಸರಲ್ಲಿಈವರೆಗೆ ಇತ್ತು. ಪಾಂಟಿಂಗ್‌ 97ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು.

ಹೆಚ್ಚು ರನ್‌ ಗಳಿಸಿದ ನಾಯಕರ ಪಟ್ಟಿಯಲ್ಲಿ ಕೊಹ್ಲಿ ಸದ್ಯ ಆರನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್‌ ಸ್ಮಿತ್‌ ಅಗ್ರ ಸ್ಥಾನದಲ್ಲಿದ್ದಾರೆ. ಅವರು 109 ಪಂದ್ಯಗಳ 193 ಇನಿಂಗ್ಸ್‌ಗಳಿಂದ ಒಟ್ಟು 8,659 ರನ್‌ ಕಲೆಹಾಕಿದ್ದಾರೆ. ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ಅಲನ್‌ ಬಾರ್ಡರ್‌ ಇದ್ದು, ಅವರು 93 ಪಂದ್ಯಗಳ 154 ಇನಿಂಗ್ಸ್‌ನಿಂದ 6,623 ರನ್‌ ಬಾರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.