ADVERTISEMENT

IND vs ENG 2nd Test: ಬೂಮ್ರಾಗೆ 5 ವಿಕೆಟ್: ರಾಹುಲ್ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 18:10 IST
Last Updated 11 ಜುಲೈ 2025, 18:10 IST
<div class="paragraphs"><p>ಭಾರತದ ಆಟಗಾರರ ಸಂಭ್ರಮ &nbsp;</p></div>

ಭಾರತದ ಆಟಗಾರರ ಸಂಭ್ರಮ  

   

ಪಿಟಿಐ ಚಿತ್ರಗಳು

ಲಂಡನ್: ಅಭಿಮಾನಿಗಳಿಂದ ಮೆಚ್ಚುಗೆ ಮತ್ತು ಮೆರಿಲ್‌ಬೊನ್ ಕ್ರಿಕೆಟ್ ಕ್ಲಬ್ ಸದಸ್ಯರ ಶ್ಲಾಘನೆಯ ಚಪ್ಪಾಳೆಗಳು ಲಾರ್ಡ್ಸ್ ಡ್ರೆಸಿಂಗ್‌ ಕೋಣೆಗೆ ಹೋಗುವ ಲಾಂಗ್‌ ರೂಮ್‌ನಲ್ಲಿ ಪ್ರತಿಧ್ವನಿಸಿದವು. ಆ ಸಂಭ್ರಮದ ವಾತಾವರಣದ ಮಧ್ಯೆ ಹೆಜ್ಜೆ ಹಾಕುವ ಮತ್ತು ಹಳೆಯ ಹಲಗೆಯ ಫಲಕದ ಮೇಲೆ ಅಮೊಘ ಸಾಧಕರ ಸಾಲಿನಲ್ಲಿ ಜಾಗ ಪಡೆದ ಸಾರ್ಥಕತೆಯು ಭಾರತದ ಜಸ್‌ಪ್ರೀತ್ ಬೂಮ್ರಾ ಅವರದ್ದಾಯಿತು. 

ADVERTISEMENT

ಪ್ರಸ್ತುತ ಕ್ರಿಕೆಟ್ ಕ್ಷೇತ್ರದಲ್ಲಿ ಶ್ರೇಷ್ಠ ವೇಗದ ಬೌಲರ್ ಆಗಿರುವ ಬೂಮ್ರಾ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಅವರ ಹೆಸರಿನಲ್ಲಿ ಹತ್ತಾರು ಸಾಧನೆಗಳಿವೆ. ಇದೀಗ ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿಯೂ ಅವರ ಹೆಸರು ಅಚ್ಚಾಯಿತು. ಇಲ್ಲಿ ಇದೇ ಮೊದಲ ಸಲ ಐದು ವಿಕೆಟ್‌ಗಳ ಗೊಂಚಲು ಪಡೆದ ಅವರ ಸಾಧನೆ ಸುವರ್ಣಾಕ್ಷರವಾಯಿತು. 2021ರಲ್ಲಿ ಅವರು ಇಂತಹದೇ ಒಂದು ಅವಕಾಶವನ್ನು ಕೈತಪ್ಪಿಸಿಕೊಂಡಿದ್ದರು. ಆಗ ಭಾರತ ತಂಡವು ಇದೇ ಕ್ರೀಡಾಂಗಣದಲ್ಲಿ 151 ರನ್‌ ಗೆಲುವು ಸಾಧಿಸಿತ್ತು. ಅದರಲ್ಲಿ ಬೂಮ್ರಾ ಮೂರು ವಿಕೆಟ್‌ ಗಳಿಸಿದ್ದರು.

ಆದರೆ ಶುಕ್ರವಾರ ದಿನವು ಅವರದ್ದಾಗಿತ್ತು. ಇಂಗ್ಲೆಂಡ್ ಎದುರಿನ ಮೂರನೇ ಪಂದ್ಯದ ಎರಡನೇ ದಿನದಾಟದಲ್ಲಿ ಅವರು (74ಕ್ಕೆ5) ತಮ್ಮ ಮಾಂತ್ರಿಕತೆ ಮೆರೆದರು. ಇದರಿಂದಾಗಿ  ಆತಿಥೇಯ ತಂಡವು ಮೊದಲ ಇನಿಂಗ್ಸ್‌ನಲ್ಲಿ 112.3 ಓವರ್‌ಗಳಲ್ಲಿ 387 ರನ್‌ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.  ಅದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಪ್ರವಾಸಿ ತಂಡವು  ದಿನದಾಟದ ಮುಕ್ತಾಯಕ್ಕೆ 43 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 145 ರನ್ ಗಳಿಸಿತು. ಮೊದಲ ಇನಿಂಗ್ಸ್ ಲೆಕ್ಕ ಚುಕ್ತಾಗೊಳಿಸಲು ಭಾರತ ತಂಡಕ್ಕೆ ಇನ್ನೂ 242 ರನ್‌ಗಳು ಬೇಕು. ಕ್ರೀಸ್‌ನಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ (ಬ್ಯಾಟಿಂಗ್ 53) ಮತ್ತು ರಿಷಭ್ ಪಂತ್ (ಬ್ಯಾಟಿಂಗ್‌ 19) ಇದ್ದಾರೆ. 

ಯಶಸ್ವಿ ಜೈಸ್ವಾಲ್ ಅವರು ಬೇಗನೆ ನಿರ್ಗಮಿಸಿದರು. ಅದರಿಂದಾಗಿ ಮೂಡಿದ್ದ ಆತಂಕವನ್ನು ದೂರಗೊಳಿಸುವ ಪ್ರಯತ್ನವನ್ನು ರಾಹುಲ್ ಮಾಡಿದರು. ಅವರು ಕರುಣ್ ನಾಯರ್ (40 ರನ್) ಜೊತೆಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 61 ರನ್ ಸೇರಿಸಿದರು. ಅರ್ಧಶತಕದ ಹಾದಿಯಲ್ಲಿದ್ದ ನಾಯರ್ ಅವರನ್ನು ಸ್ಟೋಕ್ಸ್ ಅವರು ಔಟ್ ಮಾಡಿ ಜೊತೆಯಾಟ ಮುರಿದರು. ಎರಡನೇ ಟೆಸ್ಟ್‌ನಲ್ಲಿ ದ್ವಿಶತಕ ಮತ್ತು ಶತಕ ಹೊಡೆದಿದ್ದ ಶುಭಮನ್ ಗಿಲ್ (16 ರನ್) ಅವರನ್ನು ಕಟ್ಟಿಹಾಕುವಲ್ಲಿ ಕ್ರಿಸ್ ವೋಕ್ಸ್ ಯಶಸ್ವಿಯಾದರು. 

ಬೂಮ್ರಾ ಬಿರುಗಾಳಿ: ಮೊದಲ ದಿನದಾಟದಲ್ಲಿ ಇಂಗ್ಲೆಂಡ್ 4 ವಿಕೆಟ್‌ಗಳಿಗೆ 251 ರನ್ ಗಳಿಸಿತ್ತು. 99 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಜೋ ರೂಟ್  ಎರಡನೇ ದಿನ ಬೆಳಿಗ್ಗೆ ಶತಕ ಪೂರೈಸಿಕೊಂಡರು. ಕೆಳಮಟ್ಟದಲ್ಲಿ ಪುಟಿದೆದ್ದು ಬರುತ್ತಿದ್ದ ಎಸೆತಗಳನ್ನು ಅವರು ತಾಳ್ಮೆಯಿಂದ ಎದುರಿಸಿ ನಿಂತರು. ಇನ್ನೊಂದು ಬದಿಯಲ್ಲಿ ನಾಯಕ ಬೆನ್ ಸ್ಟೋಕ್ಸ್ ಕೂಡ ದೊಡ್ಡ ಜೊತೆಯಾಟ ಬೆಳೆಸುವ ಯೋಚನೆಯಲ್ಲಿದ್ದರು. 

ಕೆ.ಎಲ್‌. ರಾಹುಲ್‌ ಹಾಗೂ ಕರುಣ್‌ ನಾಯರ್‌ ಜೊತೆಯಾಟ  

ಆದರೆ ಬೂಮ್ರಾ ಲೆಕ್ಕಾಚಾರ ಬೇರೆಯೇ ಆಗಿತ್ತು. ಇನಿಂಗ್ಸ್‌ನ 86ನೇ ಓವರ್‌ನಲ್ಲಿ ಬೂಮ್ರಾ ಎಸೆತದ ಚಲನೆ ಯನ್ನು ಗುರುತಿಸುವಷ್ಟರಲ್ಲಿಯೇ ಸ್ಟೋಕ್ಸ್‌ ಅವರ ಆಫ್‌ಸ್ಟಂಪ್‌ಗೆ ಚೆಂಡು ಅಪ್ಪಳಿಸಿತ್ತು. ಇಂಗ್ಲೆಂಡ್ ನಾಯಕ ಅಚ್ಚರಿಯೊಂದಿಗೆ ಪೆವಿಲಿಯನ್‌ಗೆ ಮರಳಿದರು.  

ಟೆಸ್ಟ್‌ ಕ್ರಿಕೆಟ್‌ನಲ್ಲಿ 37ನೇ ಶತಕ ಪೂರೈಸಿ ಆಡುತ್ತಿದ್ದ ಮತ್ತು ಉತ್ತಮ ಲಯದಲ್ಲಿದ್ದ ರೂಟ್ ಅವರಿಗೂ ಬೂಮ್ರಾ ಆಘಾತ ನೀಡಿದರು. ಆಫ್‌ಸ್ಂಪ್‌ ನೇರಕ್ಕೆ ಪುಟಿದೆದ್ದ ಚೆಂಡು ಬ್ಯಾಟ್‌ ಒಳಂಚು ಸವರಿಹೋಗಿ ಮಧ್ಯದ ಸ್ಟಂಪ್‌ ಉರುಳಿಸಿತ್ತು.  ರೂಟ್ ಆಘಾತದೊಂದಿಗೆ ಮರಳಿದರು. ನಂತರದ ಎಸೆತದಲ್ಲಿ  ಕ್ರಿಸ್ ವೋಕ್ಸ್ ಅವರು ಬೂಮ್ರಾ ಎಸೆತವನ್ನು ಕಟ್ ಮಾಡಲು ಹೋಗಿ ವಿಕೆಟ್‌ಕೀಪರ್ (ಬದಲೀ) ಧ್ರುವ ಜುರೇಲ್‌ಗೆ ಸುಲಭದ ಕ್ಯಾಚ್ ಆದರು. ಬೂಮ್ರಾ ಮೊದಲ ಸ್ಪೆಲ್ (5–1–23–3) ದಾಳಿಗೆ ಇಂಗ್ಲೆಂಡ್ ಬಹುತೇಕ ತತ್ತರಿಸಿತು. ಇನಿಂಗ್ಸ್‌ಗೆ ಬೇಗ ತೆರೆಬೀಳುವ ಭರವಸೆ ಮೂಡಿತ್ತು. ಇಂಗ್ಲೆಂಡ್ 271 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. 

ಆದರೆ ಸ್ಲಿಪ್‌ ಫೀಲ್ಡರ್‌ಗಳು ಕ್ಯಾಚ್‌ಗಳನ್ನು ಕೈಚೆಲ್ಲಿದ ಪರಿಣಾಮವು ದುಬಾರಿಯಾಯಿತು.  ಸ್ಲಿಪ್‌ನಲ್ಲಿದ್ದ ಕೆ.ಎಲ್. ರಾಹುಲ್ ಅವರು ಸಿರಾಜ್ ಬೌಲಿಂಗ್‌ನಲ್ಲಿ ಜೆಮಿ ಸ್ಮಿತ್ ಅವರ ಕ್ಯಾಚ್ ಬಿಟ್ಟರು. ಆಗ 5 ರನ್ ಗಳಿಸಿದ್ದ ಸ್ಮಿತ್ ನಂತರ ಅರ್ಧಶತಕ ಬಾರಿಸಿದರು. ಬ್ರೈಡನ್ ಕರ್ಸ್ ಅವರಿಗೆ ವಿಕೆಟ್‌ಕೀಪರ್ ನೀಡಿದ ಜೀವದಾನದಿಂದ ತಂಡದ ಮೊತ್ತ ಬೆಳೆಯಿತು. ಸ್ಮಿತ್ ಮತ್ತು ಬ್ರೈಡನ್ ಅವರು ಎಂಟನೇ ವಿಕೆಟ್ ಜೊತೆಯಾಟದಲ್ಲಿ 84 (114 ಎಸೆತ) ರನ್ ಸೇರಿಸಿದರು. 

ಕಡೆಗೂ ಸಿರಾಜ್ ಅವರು ಸ್ಮಿತ್ ವಿಕೆಟ್ ಪಡೆಯುವಲ್ಲಿ ಸಫಲರಾದರು. ಬೂಮ್ರಾ ಅವರು ತಮ್ಮ ಐದನೇ ವಿಕೆಟ್ ರೂಪದಲ್ಲಿ ಜೋಫ್ರಾ ಆರ್ಚರ್ ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.