ಅಭಿಷೇಕ್ ಶರ್ಮಾ
ಪಿಟಿಐ ಚಿತ್ರ
ಮುಂಬೈ: ಇಂಗ್ಲೆಂಡ್ ವಿರುದ್ಧದ ಟಿ20 ಕ್ರಿಕೆಟ್ ಸರಣಿಯ 5ನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ತಂಡ ಬಿರುಸಿನ ಆರಂಭ ಕಂಡಿದೆ.
ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಸ್ಫೋಟಕ ಅರ್ಧಶತಕದ ಬಲದಿಂದ ಮೊದಲ ಆರು ಓವರ್‌ಗಳಲ್ಲಿ 1 ವಿಕೆಟ್‌ಗೆ 95 ರನ್ ಕಲೆಹಾಕಿದೆ. ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡ ಪವರ್ ಪ್ಲೇ ಅವಧಿಯಲ್ಲಿ ಗಳಿಸಿದ ಗರಿಷ್ಠ ಮೊತ್ತ ಇದಾಗಿದೆ.
2021ರಲ್ಲಿ ಸ್ಕಾಟ್ಲೆಂಡ್ ವಿರುದ್ಧ ದುಬೈನಲ್ಲಿ ಹಾಗೂ 2024ರಲ್ಲಿ ಬಾಂಗ್ಲಾದೇಶ ವಿರುದ್ಧ ಢಾಕಾದಲ್ಲಿ 82 ರನ್ ಗಳಿಸಿದ್ದು ಈ ವರೆಗೆ ದಾಖಲೆಯಾಗಿತ್ತು.
ಅದಕ್ಕೂ ಮೊದಲು, 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್‌ಬರ್ಗ್‌ನಲ್ಲಿ 78 ರನ್ ಕಲೆಹಾಕಿತ್ತು.
ಆಸ್ಟ್ರೇಲಿಯಾ ತಂಡ 2024ರಲ್ಲಿ ಸ್ಕಾಟ್ಲೆಂಡ್ ಎದುರು 113 ರನ್ ಗಳಿಸಿರುವುದು ಒಟ್ಟಾರೆ ದಾಖಲೆಯಾಗಿದೆ.
ಸದ್ಯ 10 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಭಾರತ ತಂಡ 2 ವಿಕೆಟ್‌ಗೆ 143 ರನ್ ಗಳಿಸಿದೆ. ಅಭಿಷೇಕ್ ಶರ್ಮಾ 36 ಎಸೆತಗಳಲ್ಲಿ 99 ರನ್ ಗಳಿಸಿದ್ದಾರೆ. 7 ಎಸೆತಗಳಲ್ಲಿ 16 ರನ್ ಗಳಿಸಿದ ಸಂಜು ಸ್ಯಾಮ್ಸನ್ ಮತ್ತು 15 ಎಸೆತಗಳಲ್ಲಿ 25 ರನ್ ಬಾರಿಸಿದ ತಿಲಕ್ ವರ್ಮಾ ಔಟಾಗಿದ್ದಾರೆ.
ವೇಗದ ಅರ್ಧಶತಕ
ಆರಂಭದಿಂದಲೇ ಬೀಸಾಟಕ್ಕೆ ಒತ್ತು ನೀಡಿದ ಅಭಿಷೇಕ್ ಶರ್ಮಾ, ಕೇವಲ 17 ಎಸೆತಗಳಲ್ಲೇ ಅರ್ಧಶತಕದ ಗಡಿ ದಾಟಿದರು. ಇದು ಟೀಂ ಇಂಡಿಯಾ ಪರ ಎರಡನೇ ಅತಿವೇಗದ ಅರ್ಧಶತಕವಾಗಿದೆ. ಯುವರಾಜ್ ಸಿಂಗ್ ಅವರು 2007ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 12 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿರುವುದು ಅಂ.ರಾ. ಟಿ20ಯಲ್ಲಿ ದಾಖಲೆಯಾಗಿದೆ.
ಅಭಿಷೇಕ್ ನಂತರದ ಸ್ಥಾನದಲ್ಲಿ ಕೆ.ಎಲ್. ರಾಹುಲ್ (18 ಎಸೆತ) ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.