ADVERTISEMENT

ಅಶ್ವಿನ್‌ಗೆ 6 ವಿಕೆಟ್, ಇಂಗ್ಲೆಂಡ್ 178ಕ್ಕೆ ಆಲೌಟ್; ಭಾರತಕ್ಕೆ 420 ರನ್ ಗುರಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 11:48 IST
Last Updated 8 ಫೆಬ್ರುವರಿ 2021, 11:48 IST
ಆರು ವಿಕೆಟ್ ಕಬಳಿಸಿದ ಆರ್. ಅಶ್ವಿನ್
ಆರು ವಿಕೆಟ್ ಕಬಳಿಸಿದ ಆರ್. ಅಶ್ವಿನ್   

ಚೆನ್ನೈ: ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (61ಕ್ಕೆ 6 ವಿಕೆಟ್) ಮಾರಕ ದಾಳಿಗೆ ಸಿಲುಕಿರುವ ಇಂಗ್ಲೆಂಡ್, ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 178 ರನ್‌ಗಳಿಗೆ ಆಲೌಟ್ ಆಗಿದೆ.

ಆದರೂ ಭಾರತದ ಗೆಲುವಿಗೆ 420 ರನ್‌ಗಳ ಬೃಹತ್ ಗುರಿಯನ್ನು ಒಡ್ಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವು 241 ರನ್‌ಗಳ ಭಾರಿ ಮುನ್ನಡೆ ಗಳಿಸಿತ್ತು.

ಬಳಿಕ 420 ರನ್‌ಗಳ ಬೃಹತ್ ಗುರಿ ಹಿಂಬಾಲಿಸುತ್ತಿರುವ ಟೀಮ್ ಇಂಡಿಯಾ ನಾಲ್ಕನೇ ದಿನದಾಟದ ಮುಕ್ತಾಯಕ್ಕೆ 13 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿದೆ. ಅಲ್ಲದೆ ಅಂತಿಮ ದಿನದಾಟದಲ್ಲಿ ಇನ್ನು ಒಂಬತ್ತು ವಿಕೆಟ್ ಬಾಕಿ ಉಳಿದಿರುವಂತೆಯೇ ಅಸಾಧ್ಯ ಗುರಿ 381 ರನ್ ಗಳಿಸಬೇಕಾದ ಅಗತ್ಯವಿದೆ.

ADVERTISEMENT

ಇದರೊಂದಿಗೆ ಆಸ್ಟ್ರೇಲಿಯಾದ ಗಾಬಾದಂತಹ ರೋಚಕ ಸ್ಥಿತಿ ಎದುರಾಗಿದೆ. ರೋಹಿತ್ ಶರ್ಮಾ (12) ವಿಕೆಟ್ ಕಳೆದುಕೊಂಡಿದ್ದು, ಶುಭಮನ್ ಗಿಲ್ (15*) ಹಾಗೂ ಚೇತೇಶ್ವರ ಪೂಜಾರ (12*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್ ಓಟಕ್ಕೆ ಕಡಿವಾಣ ಹಾಕಿದ ರವಿಚಂದ್ರನ್ ಅಶ್ವಿನ್ 61 ರನ್ ತೆತ್ತು ಆರು ವಿಕೆಟ್ ಕಬಳಿಸಿ ಮಿಂಚಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 28ನೇ ಬಾರಿಗೆ ಇನ್ನಿಂಗ್ಸ್‌ವೊಂದರಲ್ಲಿ ಐದು ವಿಕೆಟ್ ಸಾಧನೆ ಮಾಡಿದರು.

ಭಾರತಕ್ಕೆ ಫಾಲೋಆನ್ ಹೇರದೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಆಂಗ್ಲರ ಪಡೆಗೆ ಭಾರತೀಯ ಬೌಲರ್‌ಗಳು ತಿರುಗೇಟು ನೀಡಿದರು. ಅಲ್ಲದೆ 101 ರನ್ ಗಳಿಸುವಷ್ಟರಲ್ಲಿ ಐದು ಮಂದಿ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪೆರೇಡ್ ನಡೆಸಿದರು.

ಮೊದಲ ಎಸೆತದಲ್ಲಿ ರೋರಿ ಬರ್ನ್ಸ್ (0) ಹೊರದಬ್ಬಿದ ರವಿಚಂದ್ರನ್ ಅಶ್ವಿನ್ ಮೊದಲ ಆಘಾತ ನೀಡಿದರು. ಡಾಮಿನಿಕ್ ಸಿಬ್ಲಿ (16) ಹಾಗೂ ಬೆನ್ ಸ್ಟೋಕ್ಸ್ (7) ಕೂಡಾ ಅಶ್ವಿನ್ ಬಲೆಗೆ ಬಿದ್ದರು.

ಈ ನಡುವೆ ಡ್ಯಾನಿಯಲ್ ಲಾರೆನ್ಸ್ (18) ವಿಕೆಟ್ ಪಡೆದ ಇಶಾಂತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್ ಸಾಧನೆ ಮಾಡಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಸಾಧನೆ ಮಾಡಿರುವ ಜೋ ರೂಟ್ (40) ದ್ವಿತೀಯ ಇನ್ನಿಂಗ್ಸ್‌ನಲ್ಲೂ ಆತಿಥೇಯರನ್ನು ಕಾಡಿದರು. ಆದರೆ ರೂಟ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದ ಜಸ್‌ಪ್ರೀತ್ ಬೂಮ್ರಾ ಭಾರತಕ್ಕೆ ನೆರವಾದರು.

ಟೀ ವಿರಾಮದ ಬಳಿಕವೂ ಆಂಗ್ಲರ ಯೋಜನೆಯನ್ನು ಅಶ್ವಿನ್ ವಿಫಲಗೊಳಿಸಿದರು. ಪರಿಣಾಮ 178 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಇನ್ನುಳಿದಂತೆ ಒಲ್ಲಿ ಪಾಪ್ (28), ಜೋಸ್ ಬಟ್ಲರ್ (24), ಡಾಮ್ ಬೆಸ್ (25), ಜೋಫ್ರಾ ಆರ್ಚರ್ (5), ಜ್ಯಾಕ್ ಲೀಚ್ (8) ಹಾಗೂ ಜೇಮ್ಸ್ ಆಂಡ್ರೆಸನ್ (0) ರನ್ ಗಳಿಸಿದರು.

ಅಶ್ವಿನ್‌ಗೆ ತಕ್ಕ ಬೆಂಬಲ ನೀಡಿದ ಶಹಬಾಜ್ ನದೀಂ ಎರಡು ಮತ್ತು ಜಸ್‌ಪ್ರೀತ್ ಬೂಮ್ರಾ ಹಾಗೂ ಇಶಾಂತ್ ಶರ್ಮಾ ತಲಾ ಒಂದು ವಿಕೆಟನ್ನು ಪೆಡದರು.

ಸುಂದರ್ ಅಜೇಯ 85*;ಭಾರತ 337ಕ್ಕೆ ಆಲೌಟ್...
ಈ ಮೊದಲು 6 ವಿಕೆಟ್ ನಷ್ಟಕ್ಕೆ 257 ಎಂಬ ಮೊತ್ತದಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತ ವಾಷಿಂಗ್ಟನ್ ಸುಂದರ್ ಅಜೇಯ ಅರ್ಧಶತಕದ (85*) ನೆರವಿನಿಂದ 337 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಮೂಲಕ ಎದುರಾಳಿ ತಂಡಕ್ಕೆ 241 ರನ್‌ಗಳ ಬೃಹತ್ ಮುನ್ನಡೆಯನ್ನು ಬಿಟ್ಟುಕೊಟ್ಟಿತು.

138 ಎಸೆತಗಳನ್ನು ಎದುರಿಸಿದ ಸುಂದರ್ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿದ್ದವು. ಆದರೆ ವಿಕೆಟ್‌ನ ಇನ್ನೊಂದು ತುದಿಯಿಂದ ಸೂಕ್ತ ಬೆಂಬಲ ಸಿಗದೇ ಚೊಚ್ಚಲ ಶತಕ ಬಾರಿಸುವ ಅವಕಾಶದಿಂದ ವಂಚಿತವಾದರು.

ರವಿಚಂದ್ರನ್ ಅಶ್ವಿನ್ 31 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು. ಅಲ್ಲದೆ ಸುಂದರ್ ಜೊತೆಗೆ 80 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಇನ್ನುಳಿದಂತೆ ಶಹಬಾಜ್ ನದೀಂ (0), ಇಶಾಂತ್ ಶರ್ಮಾ (4) ಹಾಗೂ ಜಸ್‌ಪ್ರೀತ್ ಬೂಮ್ರಾ (0) ರನ್ ಗಳಿಸಿದರು. ಇಂಗ್ಲೆಂಡ್ ಪರ ಡಾಮ್ ಬೆಸ್ ನಾಲ್ಕು ಮತ್ತು ಜೇಮ್ಸ್ ಆಂಡ್ರೆಸನ್, ಜೋಫ್ರಾ ಆರ್ಚರ್ ಹಾಗೂ ಜ್ಯಾಕ್ ಲೀಚ್ ತಲಾ ನಾಲ್ಕು ವಿಕೆಟ್‌‍ಗಳನ್ನು ಕಬಳಿಸಿದರು.

ನಾಯಕ ಇಂಗ್ಲೆಂಡ್ ಅಮೋಘ ದ್ವಿಶತಕದ (218) ನೆರವಿನೊಂದಿಗೆ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 578 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಡಾಮಿನಿಕ್ ಸಿಬ್ಲಿ (87) ಹಾಗೂ ಬೆನ್ ಸ್ಟೋಕ್ಸ್ (82) ಆಕರ್ಷಕ ಅರ್ಧಶತಕ ಬಾರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.