ADVERTISEMENT

ಮತ್ತೆ ಅವಕಾಶ ವಂಚಿತ ಕುಲ್‌ದೀಪ್ ಯಾದವ್; ನದೀಂಗೆ ಸುವರ್ಣಾವಕಾಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಫೆಬ್ರುವರಿ 2021, 4:56 IST
Last Updated 5 ಫೆಬ್ರುವರಿ 2021, 4:56 IST
   

ಚೆನ್ನೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಇಲ್ಲಿನ ಚೆಪಾಕ್ ಮೈದಾನದಲ್ಲಿ ನಡೆಯತ್ತಿರುವ ಮೊದಲ ಟೆಸ್ಟ್ ಪಂದ್ಯಕ್ಕೂ ಎಡಗೈ ರಿಸ್ಟ್ ಸ್ಪಿನ್ನರ್ ಕುಲ್‌ದೀಪ್ ಯಾದವ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ.

ತವರಿನ ಪರಿಸ್ಥಿತಿಯಲ್ಲಿ ಉಪಯುಕ್ತ ಎನಿಸಿದರೂ ಕುಲ್‌ದೀಪ್ ಅವರನ್ನು ಕಡೆಗಣಿಸಲಾಗಿದೆ. ಕುಲ್‌ದೀಪ್ ಬದಲಿಗೆ ಎಡಗೈ ಸ್ಪಿನ್ನರ್ ಶಹಬಾಜ್ ನದೀಂ ಆಯ್ಕೆ ಮಾಡಲಾಗಿದೆ.

2019ನೇ ಇಸವಿಯಲ್ಲಿ ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಪದಾರ್ಪಣಾ ಟೆಸ್ಟ್ ಪಂದ್ಯದಲ್ಲಿ ಒಟ್ಟು ನಾಲ್ಕು ವಿಕೆಟ್‌ಗಳನ್ನು ಕಬಳಿಸಿರುವ ನದೀಂ ಪ್ರಭಾವಿ ಎನಿಸಿಕೊಂಡಿದ್ದರು. ಈಗ ಮಗದೊಂದು ಸುವರ್ಣಾವಕಾಶ ಪಡೆದಿದ್ದಾರೆ.

ADVERTISEMENT

ಆಂಗ್ಲ ಪಡೆಯಬ್ಯಾಟಿಂಗ್ ರಣತಂತ್ರವನ್ನು ಕಟ್ಟಿ ಹಾಕಲು ನದೀಂ ಆಯ್ಕೆ ಮಾಡಿರಬಹುದು ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಗಾಯದ ತೊಂದರೆಗೆ ಸಿಲುಕಿರುವ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಸೇವೆಯಿಂದ ಭಾರತ ವಂಚಿತವಾಗಿದೆ. ಆದರೆ ಎಡಗೈ ರಿಸ್ಟ್ ಸ್ಪಿನ್ನರ್ ಆಗಿರುವ ಹೊರತಾಗಿಯೂ ಕುಲ್‌ದೀಪ್ ಅವರನ್ನು ಯಾಕೆ ಆಯ್ಕೆ ಪರಿಗಣಿಸಲಾಗಿಲ್ಲ ಎಂಬುದು ಅಭಿಮಾನಿಗಳಲ್ಲಿ ಗೊಂದಲಕ್ಕೀಡು ಮಾಡಿದೆ.

ಏತನ್ಮಧ್ಯೆ ಪಂದ್ಯ ಆರಂಭಕ್ಕೂ ಮೊದಲು ಅಕ್ಷರ್ ಪಟೇಲ್ ಸಹ ಮೊಣಕಾಲಿನ ಗಾಯದಿಂದಾಗಿ ಮೊದಲ ಟೆಸ್ಟ್‌ಗೆ ಅಲಭ್ಯವಾಗಿದ್ದರು. ಇದರಿಂದಾಗಿ ನದೀಂ ಅವರಿಗೆ ಅದೃಷ್ಟ ಒಲಿದಿದೆ.

ಅತ್ತ ಆರು ಟೆಸ್ಟ್ ಪಂದ್ಯಗಳನ್ನು ಆಡಿರುವ ಕುಲ್‌ದೀಪ್ ಯಾದವ್, 24 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಜೀವನಶ್ರೇಷ 5/57 ಬೌಲಿಂಗ್ ಪ್ರದರ್ಶನವೂ ಸೇರಿದೆ.

ಗಾಬಾ ಸ್ಟಾರ್ ಸಿರಾಜ್, ಶಾರ್ದೂಲ್ ಅವಕಾಶ ವಂಚಿತ...
ಈ ಮಧ್ಯೆ ಗಾಬಾದಲ್ಲಿ 32 ವರ್ಷಗಳ ಬಳಿಕ ಆಸ್ಟ್ರೇಲಿಯಾ ಭದ್ರಕೋಟೆಯನ್ನು ಭೇದಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಭಾರತೀಯ ಬೌಲರ್‌ ಮೊಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ಸಹ ಅವಕಾಶ ವಂಚಿತವಾಗಿದ್ದಾರೆ.

ಸುದೀರ್ಘ ಅವಧಿಯ ಬಳಿಕ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ ತಂಡವನ್ನು ಸೇರ್ಪಡೆಗೊಂಡಿದ್ದಾರೆ. ಇವರಿಗೆ ಸಿರಾಜ್ ತಮ್ಮ ಸ್ಥಾನ ಬಿಟ್ಟು ಕೊಟ್ಟಿದ್ದಾರೆ. ಇನ್ನು ಭಾರತ ತಂಡವು ಮೂವರು ಸ್ಪಿನ್ನರ್‌ಗಳ ತಂತ್ರಕ್ಕೆ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ಶಾರ್ದೂಲ್ ಠಾಕೂರ್ ಸಹ ಬೆಂಚ್ ಕಾಯಬೇಕಾದ ಪರಿಸ್ಥಿತಿ ಬಂದಿದೆ.

ಮಯಂಕ್, ಸಹಾ, ಪಾಂಡ್ಯ ಔಟ್...
ಆಸ್ಟ್ರೇಲಿಯಾ ನೆಲದಲ್ಲಿ ಪದಾರ್ಪಣಾ ಸರಣಿಯಲ್ಲಿ ಪ್ರಭಾವಿ ಎನಿಸಿಕೊಂಡಿರುವ ಯುವ ಆರಂಭಿಕ ಶುಭಮನ್ ಗಿಲ್ ಅವರನ್ನು ಓಪನರ್ ಆಗಿ ಕಾಯ್ದುಕೊಳ್ಳಲಾಗಿದೆ. ಇವರಿಗೆ ಅನುಭವಿ ರೋಹಿತ್ ಶರ್ಮಾ ಸಾಥ್ ನೀಡುತ್ತಿದ್ದಾರೆ. ಇದರಿಂದಾಗಿ ಕರ್ನಾಟಕದ ಮಯಂಕ್ ಅಗರವಾಲ್ ಅವಕಾಶ ವಂಚಿತವಾಗಿದ್ದಾರೆ.

ಇನ್ನು ಆಸೀಸ್ ನೆಲದಲ್ಲಿ ಭಾರತದ ಐತಿಹಾಸಿಕ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ರಿಷಭ್ ಪಂತ್ ವಿಕೆಟ್ ಕೀಪರ್ ಆಗಿ ಮುಂದುವರಿದಿದ್ದಾರೆ. ಇದರಿಂದಾಗಿ ತವರಿನ ನೆಲದಲ್ಲಿ ಕೀಪಿಂಗ್ ಮಾಡುವ ಅವಕಾಶದಿಂದ ವೃದ್ಧಿಮಾನ್ ಸಹಾ ವಂಚಿತರಾಗಿದ್ದಾರೆ.

ಬ್ಯಾಟಿಂಗ್ ಸ್ಪೆಷಲಿಸ್ಟ್ ಆಗಿ ಗುರುತಿಸಿರುವ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಈ ನಡುವೆ ಅಕ್ಷರ್ ಪಟೇಲ್ ಗಾಯಗೊಂಡ ಹಿನ್ನೆಲೆಯಲ್ಲಿ ಶಹಬಾಜ್ ನದೀಂ ಜೊತೆಗೆ ರಾಹುಲ್ ಚಹರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.