ADVERTISEMENT

ಸಾಕಷ್ಟು ಸಲ ಎಚ್ಚರಿಕೆ ನೀಡಿದ್ದೆವು: ವಿವಾದಾತ್ಮಕ ರನೌಟ್ ಕುರಿತು ದೀಪ್ತಿ ಹೇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಸೆಪ್ಟೆಂಬರ್ 2022, 11:49 IST
Last Updated 26 ಸೆಪ್ಟೆಂಬರ್ 2022, 11:49 IST
ದೀಪ್ತಿ ಶರ್ಮಾ
ದೀಪ್ತಿ ಶರ್ಮಾ   

ಕೋಲ್ಕತ್ತ: ಇಂಗ್ಲೆಂಡ್‌ನಲ್ಲಿ ಇತ್ತೀಚೆಗೆ ಮುಕ್ತಾಯವಾದ ಏಕದಿನ ಕ್ರಿಕೆಟ್‌ ಸರಣಿಯ ಕೊನೇ ಪಂದ್ಯದ ಬಳಿಕ ಸುದ್ದಿಯಾದ ವಿವಾದಾತ್ಮಕ ರನೌಟ್‌ (ಮಂಕಡಿಂಗ್) ಕುರಿತು ಭಾರತ ತಂಡದ ದೀಪ್ತಿ ಶರ್ಮಾ ಹೇಳಿಕೆ ನೀಡಿದ್ದಾರೆ.

ಇಂಗ್ಲೆಂಡ್‌ನ ಚಾರ್ಲೀ ಡೀನ್‌ ಅವರನ್ನು ರನೌಟ್‌ ಮಾಡುವ ಮುನ್ನ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದೆವು ಎಂದು ಅವರು ತಿಳಿಸಿದ್ದಾರೆ.

ಮೂರು ಪಂದ್ಯಗಳ ಸರಣಿಯ ಅಂತಿಮ ಹಣಾಹಣಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್‌ 24ರಂದು ನಡೆದಿತ್ತು. ಟೂರ್ನಿಯ ಮೊದಲೆರಡೂ ಪಂದ್ಯಗಳನ್ನು ಗೆದ್ದಿದ್ದ ಭಾರತ ಕ್ಲೀನ್‌ ಸ್ವೀಪ್‌ ಸಾಧಿಸುವ ಲೆಕ್ಕಾಚಾರದಲ್ಲಿತ್ತು.

ADVERTISEMENT

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ಭಾರತ ಆರಂಭಿಕ ಬ್ಯಾಟರ್‌ ಸ್ಮೃತಿ ಮಂದಾನ (50 ರನ್) ಮತ್ತು ಮಧ್ಯಮ ಕ್ರಮಾಂಕದ ದೀಪ್ತಿ ಶರ್ಮಾ (68 ರನ್) ಬಾರಿಸಿದ ಅರ್ಧಶತಕಗಳ ಹೊರತಾಗಿಯೂ 169 ರನ್‌ ಗಳಿಗೆ ಆಲೌಟ್‌ ಆಗಿತ್ತು.

ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಆತಿಥೇಯ ಪಡೆ, 118 ರನ್‌ ಆಗುವಷ್ಟರಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಹೀಗಾಗಿ ಸುಲಭ ಜಯದ ನಿರೀಕ್ಷೆಯಲ್ಲಿದ್ದ ಟೀಂ ಇಂಡಿಯಾಗೆ ಚಾರ್ಲೀ ಡೀನ್‌ ಮತ್ತು ಫ್ರೆಯಾ ಡೇವಿಸ್‌ ತೊಡಕಾಗಿದ್ದರು.

ಈ ಜೋಡಿ ಕೊನೇ ವಿಕೆಟ್‌ ಜೊತೆಯಾಟದಲ್ಲಿ 35 ರನ್‌ ಕೂಡಿಸಿ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ದಿತ್ತು.

ಇಂಗ್ಲೆಂಡ್‌ನಇನಿಂಗ್ಸ್‌ನ 44ನೇ ಓವರ್‌ನಲ್ಲಿದೀಪ್ತಿ ಶರ್ಮಾ ಬೌಲಿಂಗ್‌ಗೆ ಬಂದರು. ಡೀನ್‌ ಮೊದಲ ಎಸೆತದಲ್ಲಿ ಒಂದು ರನ್‌ ಕದ್ದರು. ಡೇವಿಸ್‌ ನಂತರದ ಮೂರು ಎಸೆತಗಳಲ್ಲಿ ರನ್‌ ಗಳಿಸದಿದ್ದರೂ ವಿಕೆಟ್‌ ಬೀಳದಂತೆ ಎಚ್ಚರ ವಹಿಸಿದರು. ಆದರೆ, ಐದನೇ ಎಸೆತ ಮಾಡಲು ದೀಪ್ತಿ ಶರ್ಮಾ ಕ್ರೀಸ್‌ ಬಳಿಗೆ ಬರುತ್ತಿದ್ದಂತೆಯೇ, ಡೀನ್‌ ರನ್‌ಗಾಗಿ ಓಡಲು ಮುಂದಾದರು. ಇದನ್ನು ಗಮನಿಸಿದ ದೀಪ್ತಿ, ರನೌಟ್‌ ಮಾಡಿದರು. ಇದರಿಂದಾಗಿಡೀನ್‌ ಔಟಾಗಿ ಪೆವಿಲಿಯನ್‌ ಸೇರಬೇಕಾಯಿತು. ಈ ಮೂಲಕ ಭಾರತ 16 ರನ್ ಅಂತರದ ಗೆಲುವು ಸಾಧಿಸಿ ಸರಣಿ ಕ್ಲೀನ್‌ ಸ್ವೀಪ್ ಸಾಧನೆ ಮಾಡಿತು.

ಪಂದ್ಯದ ಬಳಿಕ ಈ ರನೌಟ್‌ ಕುರಿತು ಕ್ರಿಕೆಟ್‌ ವಲಯ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆದವು. ಕೆಲವರು ಇದು ಕ್ರೀಡಾಸ್ಫೂರ್ತಿಗೆ ವಿರುದ್ಧವಾದ ವಿವಾದಾತ್ಮಕ ರನೌಟ್‌ ಎಂದು ಟೀಕಿಸಿದರೆ ಮತ್ತೆ ಕೆಲವರು ದೀಪ್ತಿ ಅವರನ್ನು ಬೆಂಬಲಿಸಿದ್ದರು.

ಸದ್ಯ ಈ ಕುರಿತು ಮಾತನಾಡಿರುವ ದೀಪ್ತಿ, 'ನಾವು ಸಾಕಷ್ಟು ಸಲ ನೀಡಿದ ಎಚ್ಚರಿಕೆಯನ್ನು ಪರಿಗಣಿಸದ ಕಾರಣ ಅವರನ್ನು (ಚಾರ್ಲೀ ಡೀನ್‌) ಔಟ್‌ ಮಾಡಲು ಯೋಜಿಸಿದೆವು. ನಾವು ನಿಯಮಗಳನ್ನು ಪಾಲಿಸಿದ್ದೇವೆ' ಎಂದು ಪ್ರತಿಕ್ರಿಯಿಸಿದ್ದಾರೆ.

ಬೌಲಿಂಗ್‌ಗೂ ಮುನ್ನ ಕ್ರೀಸ್‌ನಿಂದ ಹೊರಹೋಗುತ್ತಿರುವ ವಿಚಾರವನ್ನು, ರನೌಟ್‌ ಮಾಡುವುದಕ್ಕೂ ಮೊದಲು ಅಂಪೈರ್‌ಗಳಿಗೆ ತಿಳಿಸಿದ್ದೆವು ಎಂದೂ ದೀಪ್ತಿ ಹೇಳಿದ್ದಾರೆ.

'ನಾವು ಅಂಪೈರ್‌ಗಳಿಗೆ ಮಾಹಿತಿ ನೀಡಿದ್ದೆವು. ಆದಾಗ್ಯೂ ಅವರು (ಚಾರ್ಲೀ ಡೀನ್‌) ಅದೇರೀತಿ ಮುಂದುವರಿದರು. ನಮಗೆ ಬೇರೇನೂ ಮಾಡಲು ಆಗಲಿಲ್ಲ' ಎಂದು ತಿಳಿಸಿದ್ದಾರೆ.

ಜೂಲನ್‌ಗಾಗಿ ಜಯ
ಭಾರತ ಕ್ರಿಕೆಟ್‌ ತಂಡದ ಅನುಭವಿ ವೇಗಿ ಜೂಲನ್‌ ಗೋಸ್ವಾಮಿ ಅವರಿಗೆ ಇದು ವಿದಾಯದ ಟೂರ್ನಿಯಾಗಿತ್ತು. ಈ ಕುರಿತೂ ಹೇಳಿರುವ ದೀಪ್ತಿ, 'ಯಾವುದೇ ತಂಡ ಗೆಲುವಿಗಾಗಿ ಎದುರು ನೋಡುತ್ತದೆ. ಒಂದು ತಂಡವಾಗಿ ನಾವೂ ಜೂಲನ್‌ಗಾಗಿ ಸರಣಿ ಗೆಲ್ಲಲು ಸಾಧ್ಯವಾದಷ್ಟು ಉತ್ತಮ ಪ್ರಯತ್ನ ಮಾಡಿದ್ದೇವೆ' ಎಂದು ಹೇಳಿದ್ದಾರೆ.

39 ವರ್ಷದ ಜೂಲನ್‌ ಇಂಗ್ಲೆಂಡ್‌ ವಿರುದ್ಧದ ಸರಣಿ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತರಾಗಿದ್ದಾರೆ. ಅವರು ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಒಟ್ಟು 355 ವಿಕೆಟ್‌ ಕಬಳಿಸಿದ್ದಾರೆ.

ಇಂಗ್ಲೆಂಡ್‌ ನೆಲದಲ್ಲಿ ಭಾರತ ಕ್ಲೀನ್ ಸ್ವೀಪ್‌ ಸಾಧಎ ಮಾಡಿದ್ದು ಇದೇ ಮೊದಲು ಎಂಬುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.