ADVERTISEMENT

IND vs NZ: ಗಿಲ್ ಚೊಚ್ಚಲ ದ್ವಿಶತಕ; ಭಾರತ 349/8

ಪ್ರಜಾವಾಣಿ ವಿಶೇಷ
Published 18 ಜನವರಿ 2023, 13:17 IST
Last Updated 18 ಜನವರಿ 2023, 13:17 IST
ಶುಭಮನ್ ಗಿಲ್ ಸಂಭ್ರಮ
ಶುಭಮನ್ ಗಿಲ್ ಸಂಭ್ರಮ   

ಹೈದರಾಬಾದ್: ಉದಯೋನ್ಮುಖ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಚೊಚ್ಚಲ ದ್ವಿಶತಕದ (208) ನೆರವಿನೊಂದಿಗೆ ಟೀಮ್ ಇಂಡಿಯಾ, ಇಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 349 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.

ನ್ಯೂಜಿಲೆಂಡ್ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದ ಗಿಲ್ 145 ಎಸೆತಗಳಲ್ಲಿ ದ್ವಿಶತಕ ಸಾಧನೆ ಮಾಡಿದರು.

ಈ ಮೂಲಕ 23 ವರ್ಷದ ಗಿಲ್, ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಅತಿ ಕಿರಿಯ ಬ್ಯಾಟರ್ ಎನಿಸಿದರು.

ADVERTISEMENT

49ನೇ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಗಿಲ್ 200 ರನ್‌ಗಳ ಗಡಿ ದಾಟಿದರು.

ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ (19 ಇನ್ನಿಂಗ್ಸ್) ಸಾವಿರ ರನ್ ಪೂರೈಸಿದ ಭಾರತೀಯ ಬ್ಯಾಟರ್ ಎಂಬ ಖ್ಯಾತಿಗೂ ಗಿಲ್ ಪಾತ್ರರಾದರು.

149 ಎಸೆತಗಳನ್ನು ಎದುರಿಸಿದ ಗಿಲ್, 19 ಬೌಂಡರಿ ಹಾಗೂ ಒಂಬತ್ತು ಸಿಕ್ಸರ್‌ಗಳ ನೆರವಿನಿಂದ 208 ರನ್ ಗಳಿಸಿದರು.

ಈ ಮೊದಲು ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಅಲ್ಲದೆ ಗಿಲ್ ಜೊತೆಗೆ ಮೊದಲ ವಿಕೆಟ್‌ಗೆ 60 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ರೋಹಿತ್ 34 ರನ್ ಗಳಿಸಿ ಔಟ್ ಆದರು.

ಕಳೆದ ಪಂದ್ಯದ ಶತಕವೀರ ವಿರಾಟ್ ಕೊಹ್ಲಿ 8 ರನ್ ಗಳಿಸಿ ಔಟ್ ಆದರು. ಕಿಶಾನ್ ಕಿಶನ್ ಸಹ (5) ನಿರಾಸೆ ಮೂಡಿಸಿದರು.

ಸೂರ್ಯಕುಮಾರ್ ಯಾದವ್ (31) ಹಾಗೂ ಹಾರ್ದಿಕ್ ಪಾಂಡ್ಯ (28) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಇನ್ನುಳಿದಂತೆ ವಾಷಿಂಗ್ಟನ್ ಸುಂದರ್ (12), ಕುಲದೀಪ್ ಯಾದವ್ 5* ಹಾಗೂ ಮೊಹಮ್ಮದ್ ಶಮಿ 2* ರನ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.