ADVERTISEMENT

IND vs NZ: ಅಂತಿಮ ಏಕದಿನ ಮಳೆಯಿಂದಾಗಿ ರದ್ದು; ನ್ಯೂಜಿಲೆಂಡ್‌ಗೆ ಸರಣಿ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ನವೆಂಬರ್ 2022, 10:01 IST
Last Updated 30 ನವೆಂಬರ್ 2022, 10:01 IST
ಕೇನ್ ವಿಲಿಯಮ್ಸನ್ ಹಾಗೂ ಶಿಖರ್ ಧವನ್
ಕೇನ್ ವಿಲಿಯಮ್ಸನ್ ಹಾಗೂ ಶಿಖರ್ ಧವನ್   

ಕ್ರೈಸ್ಟ್‌ಚರ್ಚ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಅಂತಿಮ ಏಕದಿನ ಪಂದ್ಯವು ಮಳೆಯಿಂದಾಗಿ ರದ್ದುಗೊಂಡಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್, 1-0 ಅಂತರದ ಗೆಲುವು ದಾಖಲಿಸಿದೆ.

ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. ಆದರೆ ಕೊನೆಯ ಎರಡು ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ.

ಕ್ರೈಸ್ಟ್‌ಚರ್ಚ್‌ನಲ್ಲಿ ಇಂದು ನಡೆದ ಅಂತಿಮ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಶಿಖರ್ ಧವನ್ ಪಡೆ ಸಾಧಾರಣ ಮೊತ್ತ ಗಳಿಸಿತು. 47.3 ಓವರ್‌ಗಳಲ್ಲಿ 219 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ADVERTISEMENT

ವಾಷಿಂಗ್ಟನ್ ಸುಂದರ್ ಗರಿಷ್ಠ 51 ರನ್ ಗಳಿಸಿದರು. ಶ್ರೇಯಸ್ ಅಯ್ಯರ್ 49 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು.

ನಾಯಕ ಶಿಖರ್ ಧವನ್ (28), ಶುಭಮನ್ ಗಿಲ್ (13), ರಿಷಭ್ ಪಂತ್ (10), ಸೂರ್ಯಕುಮಾರ್ ಯಾದವ್ (6), ದೀಪಕ್ ಹೂಡಾ (12), ದೀಪಕ್ ಚಾಹರ್ (8), ಯಜುವೇಂದ್ರ ಚಾಹಲ್ (8) ಹಾಗೂ ಆರ್ಷದೀಪ್ ಸಿಂಗ್ (9) ನಿರಾಸೆ ಮೂಡಿಸಿದರು.

ಕಿವೀಸ್ ಪರ ಆ್ಯಡಂ ಮಿಲ್ನೆ ಹಾಗೂ ಡೆರಿಲ್ ಮಿಚೆಲ್ ತಲಾ ಮೂರು ಮತ್ತು ಟಿಮ್ ಸೌಥಿ ಎರಡು ವಿಕೆಟ್ ಗಳಿಸಿ ಮಿಂಚಿದರು.

ಬಳಿಕ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 18 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡಚಣೆಯಾಯಿತು. ಆರಂಭಿಕ ಬ್ಯಾಟರ್ ಫಿನ್ ಅಲೆನ್ 57 ರನ್ ಗಳಿಸಿದರು. ಡೆವೂನ್ ಕಾನ್ವೇ ಅಜೇಯ 38 ಗಳಿಸಿದರು.

ಪಂದ್ಯದಲ್ಲಿ ಫಲಿತಾಂಶ ದಾಖಲಾಗಲು ಡಕ್ವರ್ಥ್-ಲೂಯಿಸ್ ನಿಯಮದ ಅನ್ವಯ ನ್ಯೂಜಿಲೆಂಡ್ ಕನಿಷ್ಠ 20 ಓವರ್ ಬ್ಯಾಟಿಂಗ್ ಮಾಡಬೇಕಿತ್ತು. ಆದರೆ ಸತತವಾಗಿ ಮಳೆ ಸುರಿದ ಪರಿಣಾಮ ಪಂದ್ಯ ಮುಂದುವರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಂದ್ಯವನ್ನು ಕೈಬಿಡಲಾಯಿತು.

ನ್ಯೂಜಿಲೆಂಡ್‌ನ ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಲೇಥಮ್ ಸರಣಿಶ್ರೇಷ್ಠ ಪುರಸ್ಕೃತರಾದರು.

ಏಕದಿನ ಸರಣಿಗೂ ಮುನ್ನ ನಡೆದ ಮೂರು ಪಂದ್ಯಗಳ ಟ್ವೆಂಟಿ-20 ಅಂತರರಾಷ್ಟ್ರೀಯ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಅಂತರದ ಗೆಲುವು ದಾಖಲಿಸಿತ್ತು. ಮೊದಲ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದ್ದರೆ ಎರಡನೇ ಪಂದ್ಯದಲ್ಲಿ ಭಾರತ ಜಯಿಸಿತ್ತು. ಅಂತಿಮ ಪಂದ್ಯಕ್ಕೂ ಮಳೆ ಅಡಚಣೆಯಾದಾಗ ಡಕ್ವರ್ಥ್-ಲೂಯಿಸ್ ನಿಮಯದನ್ವಯ 'ಟೈ' ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.