ADVERTISEMENT

IND vs NZ T20: ಗೆಲುವಿನ ಓಟ ಮುಂದುವರಿಸುವತ್ತ ಭಾರತದ ಚಿತ್ತ

ಲಯಕ್ಕೆ ಮರಳುವ ಪ್ರಯತ್ನದಲ್ಲಿ ಸಂಜು

ಪಿಟಿಐ
Published 22 ಜನವರಿ 2026, 23:30 IST
Last Updated 22 ಜನವರಿ 2026, 23:30 IST
ಸೂರ್ಯಕುಮಾರ್ ಯಾದವ್ 
ಸೂರ್ಯಕುಮಾರ್ ಯಾದವ್    

ರಾಯ್ಪುರ್: ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್‌ ಬಲದಿಂದ ಭಾರತ ತಂಡವು ನ್ಯೂಜಿಲೆಂಡ್ ಎದುರಿನ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. 

ಶುಕ್ರವಾರ ನಡೆಯಲಿರುವ ಸರಣಿಯ ಎರಡನೇ ಪಂದ್ಯದಲ್ಲಿಯೂ ಗೆಲುವಿನ ಓಟ ಮುಂದುವರಿಸುವ ಛಲದಲ್ಲಿ ಆತಿಥೇಯ ಬಳಗವಿದೆ. 

ಕಳೆದ ಕೆಲವು ದಿನಗಳಿಂದ ರನ್‌ಗಳ ಬರ ಎದುರಿಸುತ್ತಿರುವ ನಾಯಕ ಸೂರ್ಯಕುಮಾರ್ ಯಾದವ್ ಬುಧವಾರದ ಪಂದ್ಯದಲ್ಲಿ ಲಯ ಕಂಡುಕೊಂಡಿದ್ದರು. ರಿಂಕು ಸಿಂಗ್ ಕೂಡ ಅಮೋಘ ಆಟವಾಡಿದರು. ಸಂಜು ಅವರ ಬ್ಯಾಟ್‌ನಿಂದ ರನ್‌ಗಳು ಹರಿಯಲಿಲ್ಲ. ಅಷ್ಟೇ ಅಲ್ಲ ಅವರು ಸುಲಭವಾಗಿ ವಿಕೆಟ್  ಒಪ್ಪಿಸುತ್ತಿರುವುದು ಚಿಂತೆಯ ವಿಷಯವಾಗಿದೆ. ಆದರೆ ಅವರ ಕೀಪಿಂಗ್ ಚೆನ್ನಾಗಿತ್ತು. ಆದ್ದರಿಂದ ಅವರಿಗೆ ಇನ್ನೊಂದು ಅವಕಾಶ ಸಿಗಲಿದೆ. ಮೊದಲ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅವರ ಬದಲಿಗೆ ಸ್ಥಾನ ಪಡೆದಿದ್ದ ಇಶಾನ್ ಕಿಶನ್ ಕೂಡ ತಮ್ಮ ಲಯಕ್ಕೆ ಮರಳಬೇಕಿದೆ. ಅವರು ಮೂರನೇ ಕ್ರಮಾಂಕದಲ್ಲಿ ಆಡಿದ್ದರು. 

ADVERTISEMENT

ಮುಂಬರುವ ಟಿ20 ವಿಶ್ವಕಪ್ ಟೂರ್ನಿಯ ಪೂರ್ವಾಭ್ಯಾಸದ ಕಣವೆಂದೇ ಈ ಸರಣಿ ಬಿಂಬಿತವಾಗಿದೆ. ಆದ್ದರಿಂದ ಎಲ್ಲ ಆಟಗಾರರಿಗೂ ಲಯ ಸಾಧಿಸಲು ಉತ್ತಮ ಅವಕಾಶವೂ ಆಗಿದೆ. ಅಭಿಷೇಕ್ ಅವರ ಆಕ್ರಮಣಶೈಲಿಯ ಬ್ಯಾಟಿಂಗ್ ಈಗ ಎದುರಾಳಿ ಬೌಲರ್‌ಗಳಿಗೆ ಕಠಿಣ ಸವಾಲಾಗಿದೆ. ಆದ್ದರಿಂದ ಮೊದಲು ಅವರನ್ನು ಕಟ್ಟಿಹಾಕುವತ್ತಲೇ ಮಿಚೆಲ್ ಸ್ಯಾಂಟನರ್ ಪಡೆಯು ವಿಶೇಷ ತಂತ್ರಗಾರಿಕೆ ಹೆಣೆಯುವುದು ಬಹುತೇಕ ಖಚಿತ. ಅವರು ಬೇಗ ಔಟಾದರೆ ಉಳಿದ ಬ್ಯಾಟರ್‌ಗಳ ಮೇಲೆ ಒತ್ತಡ ಹೆಚ್ಚಲಿದೆ. 

ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್ ಪವರ್‌ಪ್ಲೇ ಅವಧಿಯಲ್ಲಿ ವಿಕೆಟ್ ಗಳಿಸುವ ತಮ್ಮ ಸಾಮರ್ಥ್ಯವನ್ನು ನಾಗ್ಪುರ ಪಂದ್ಯದಲ್ಲಿ ತೋರಿಸಿದ್ದರು. ವರುಣ್ ಚಕ್ರವರ್ತಿ ಕೂಡ ತಮ್ಮ ಮೋಡಿ ಮೆರೆದಿದ್ದರು. ಅವರೊಂದಿಗೆ ಜಸ್‌ಪ್ರೀತ್ ಬೂಮ್ರಾ ಮತ್ತು ಹಾರ್ದಿಕ್ ಪಾಂಡ್ಯ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್ ಮಾಡುವುದು ಮುಖ್ಯವಾಗಲಿದೆ. 

ನ್ಯೂಜಿಲೆಂಡ್ ತಂಡದ ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಡೆವೊನ್ ಕಾನ್ವೆ ಮತ್ತು ರಚಿನ್ ರವೀಂದ್ರ ಅವರು ರನ್‌ಗಳ ಹೊಳೆ ಹರಿಸಬಲ್ಲ ಸಮರ್ಥರು. ಅವರನ್ನು ನಿಯಂತ್ರಿಸುವುದು ಭಾರತದ ಬೌಲರ್‌ಗಳ ಮುಂದಿರುವ ಪ್ರಮುಖ ಸವಾಲು.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಫೋರ್ಟ್ಸ್, ಜಿಯೊಹಾಟ್‌ಸ್ಟಾರ್ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.