ದಕ್ಷಿಣ ಆಫ್ರಿಕಾದ ಏಡನ್ ಮರ್ಕರಂ
ಕೃಪೆ: X / @ProteasMenCSA
ಗುವಾಹಟಿ: ಆತಿಥೇಯ ಭಾರತದ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಬರೋಬ್ಬರಿ 9 ಕ್ಯಾಚ್‌ಗಳನ್ನು ಪಡೆಯುವ ಮೂಲಕ ದಕ್ಷಿಣ ಆಫ್ರಿಕಾದ ಏಡನ್ ಮರ್ಕರಂ ವಿಶ್ವದಾಖಲೆ ಬರೆದರು.
ಗುವಾಹಟಿಯ ಬರ್ಸಪರ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕ್ಷೇತ್ರರಕ್ಷಣೆ ವೇಳೆ ಅಮೋಘ ಸಾಮರ್ಥ್ಯ ತೋರಿದ ಅವರು, ಮೊದಲ ಇನಿಂಗ್ಸ್‌ನಲ್ಲಿ 5 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 4 ಕ್ಯಾಚ್‌ಗಳನ್ನು ಪಡೆದರು. ಇದರೊಂದಿಗೆ ಅವರು, ವಿಕೆಟ್ ಕೀಪರ್ ಹೊರತುಪಡಿಸಿ, ಒಂದೇ ಪಂದ್ಯದಲ್ಲಿ ಅತಿಹೆಚ್ಚು ಕ್ಯಾಚ್ ಪಡೆದ ಆಟಗಾರ ಎನಿಸಿದರು.
ಇದುವರೆಗೆ ಆ ದಾಖಲೆ ಭಾರತದವರೇ ಆದ ಅಜಿಂಕ್ಯ ರಹಾನೆ ಅವರ ಹೆಸರಿನಲ್ಲಿತ್ತು. ಅವರು, 2015ರಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 8 ಕ್ಯಾಚ್ ಪಡೆದಿದ್ದರು.
ಆಸ್ಟ್ರೇಲಿಯಾದ ಗ್ರೇಗ್ ಚಾಪೆಲ್ (1974ರಲ್ಲಿ ಇಂಗ್ಲೆಂಡ್ ವಿರುದ್ಧ), ಭಾರತದ ಯಜುರ್‌ವಿಂದ್ರ ಸಿಂಗ್ (1977ರಲ್ಲಿ ಇಂಗ್ಲೆಂಡ್ ವಿರುದ್ಧ), ಶ್ರೀಲಂಕಾದ ಹಷನ್ ತಿಲಕರತ್ನೆ (1992ರಲ್ಲಿ ನ್ಯೂಜಿಲೆಂಡ್ ವಿರುದ್ಧ), ನ್ಯೂಜಿಲೆಂಡ್‌ನ ಸ್ಟೀಫನ್ ಫ್ಲೆಮಿಂಗ್ (1997ರಲ್ಲಿ ಜಿಂಬಾಬ್ವೆ ವಿರುದ್ಧ), ಆಸ್ಟ್ರೇಲಿಯಾದ ಮ್ಯಾಥ್ಯೂ ಹೈಡನ್ (2004ರಲ್ಲಿ ಶ್ರೀಲಂಕಾ ವಿರುದ್ಧ), ಭಾರತದ ಕೆ.ಎಲ್. ರಾಹುಲ್ (2018ರಲ್ಲಿ ಇಂಗ್ಲೆಂಡ್ ವಿರುದ್ಧ) ತಲಾ ಏಳು ಕ್ಯಾಚ್‌ಗಳನ್ನು ಪಡೆದಿದ್ದಾರೆ.
ಮರ್ಕರಂ ಪೆವಿಲಿಯನ್‌ಗೆ ಅಟ್ಟಿದ ಬ್ಯಾಟರ್‌ಗಳು
ಮೊದಲ ಇನಿಂಗ್ಸ್
ಕೆ.ಎಲ್. ರಾಹುಲ್
ನಿತೀಶ್ ರೆಡ್ಡಿ
ರವೀಂದ್ರ ಜಡೇಜ
ವಾಷಿಂಗ್ಟನ್ ಸುಂದರ್
ಕುಲದೀಪ್ ಯಾದವ್
ಎರಡನೇ ಇನಿಂಗ್ಸ್
ಧ್ರುವ ಜುರೇಲ್
ರಿಷಭ್ ಪಂತ್
ಸಾಯಿ ಸುದರ್ಶನ್
ವಾಷಿಂಗ್ಟನ್ ಸುಂದರ್
25 ವರ್ಷದ ನಂತರ ಭಾರತದಲ್ಲಿ ಸರಣಿ ಜಯ
ಸಂಘಟಿತ ಪ್ರದರ್ಶನ ತೋರಿದ ದಕ್ಷಿಣ ಆಫ್ರಿಕಾ ತಂಡ, ಗುವಾಹಟಿ ಟೆಸ್ಟ್ ಪಂದ್ಯವನ್ನು 408 ರನ್ ಅಂತರದಿಂದ ಗೆದ್ದು ಬೀಗಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ತೆಂಬಾ ಬವುಮಾ ಪಡೆ, ಪ್ರಥಮ ಇನಿಂಗ್ಸ್‌ನಲ್ಲಿ 489 ರನ್ ಗಳಿಸಿ ಆಲೌಟ್ ಆಗಿತ್ತು. ಇದುಕ್ಕುತ್ತರವಾಗಿ ಭಾರತದ ಬ್ಯಾಟರ್‌ಗಳು 201 ರನ್ ಗಳಿಸುವಷ್ಟರಲ್ಲೇ ಪೆವಿಲಿಯನ್ ಸೇರಿಕೊಂಡರು.
288 ರನ್‌ಗಳ ಬೃಹತ್ ಮುನ್ನಡೆ ಪಡೆದ ಪ್ರವಾಸಿ ಪಡೆ, ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 260 ರನ್ ಗಳಿಸಿದ್ದಾಗ ಡಿಕ್ಲೇರ್ ಘೋಷಿಸಿತು. ಆ ಮೂಲಕ, 549 ರನ್‌ಗಳ ಅಸಾಧ್ಯ ಗುರಿಯೊಡ್ಡಿತು. ಈ ಮೊತ್ತದೆದುರು ದಿಟ್ಟ ಆಟವಾಡುವಲ್ಲಿ ವಿಫಲವಾದ ಆತಿಥೇಯ ತಂಡ, 140 ರನ್ ಗಳಿಸುವಷ್ಟರಲ್ಲೇ ಸರ್ವಪತನ ಕಂಡು ಹೀನಾಯವಾಗಿ ಸೋಲೊಪ್ಪಿಕೊಂಡಿತು.
ಕೋಲ್ಕತ್ತದಲ್ಲಿ ನಡೆದಿದ್ದ ಮೊದಲ ಪಂದ್ಯವನ್ನೂ ಗೆದ್ದಿದ್ದ ಹರಿಣಗಳು, ಭಾರತದಲ್ಲಿ 25 ವರ್ಷಗಳ ನಂತರ ಟೆಸ್ಟ್ ಸರಣಿ ಜಯಿಸಿದ ಸಾಧನೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.