
ಭಾರತ ತಂಡದ ವೇಗದ ಬೌಲರ್‌ಗಳಾದ ಹಾರ್ದಿಕ್ ಪಾಂಡ್ಯ, ಹರ್ಷಿತ್ ರಾಣಾ ಮತ್ತು ಅರ್ಷದೀಪ್ ಸಿಂಗ್ ಸಂಭ್ರಮ –
ಪಿಟಿಐ ಚಿತ್ರ
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯವನ್ನು ಭಾರತ ಕ್ರಿಕೆಟ್ ತಂಡ ಸುಲಭವಾಗಿ ಗೆಲ್ಲುವ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 2–1ರಿಂದ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶಿಸಿದ ವೇಗಿ ಅರ್ಷದೀಪ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಪಂದ್ಯದ ಬಳಿಕ ಮಾತನಾಡಿದ ಅರ್ಷದೀಪ ಸಿಂಗ್, ‘ನ್ಯೂ ಚಂಡೀಗಢದಲ್ಲಿ ನಡೆದ ಎರಡನೇ ಪಂದ್ಯದ ಕೆಟ್ಟ ಪ್ರದರ್ಶನದಿಂದ ಹೊರಬರಲು ಪ್ರಯತ್ನಿಸಿದೆ. ನೆಟ್ಸ್‌ನಲ್ಲಿ ನಡೆಸಿದ ಅಭ್ಯಾಸದಂತೆ ಮೂಲ ವಿಧಾನಗಳನ್ನು ಅನುಸರಿಸಿ ಬೌಲಿಂಗ್ ಮಾಡಿದೆ’ ಎಂದರು.
‘ನಾನು, ನನ್ನ ಕೌಶಲ್ಯಗಳ ಮೇಲೆ ನಂಬಿಕೆ ಇಟ್ಟಿದ್ದೇನೆ. ಅದರಂತೆ ಮೊದಲೇ ಅಂದುಕೊಂಡಂತೆ ಬೌಲಿಂಗ್ ಮಾಡಿದೆ. ನಾನು ಸರಿಯಾದ ಸ್ಥಳದಲ್ಲಿ ಬೌಲಿಂಗ್ ಮಾಡಿದೆ ಮತ್ತು ಸಾಧ್ಯವಾದಷ್ಟು ವಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದೆ. ವಾತಾವರಣ ಕೂಡ ತಂಪಾಗಿತ್ತು. ಪಿಚ್‌ನಲ್ಲಿ ಸಾಕಷ್ಟು ಸ್ವಿಂಗ್ ಮತ್ತು ಸೀಮ್ ಇತ್ತು. ಅದರ ಲಾಭ ಪಡೆದುಕೊಂಡೆ’ ಎಂದರು.
ಇದೇ ಸಂದರ್ಭದಲ್ಲಿ ಅವರು, ಪೋಷಕರೊಂದಿಗೆ ಕ್ರೀಡಾಂಗಣದಲ್ಲಿದ್ದ ಪಂದ್ಯ ವೀಕ್ಷಿಸುತ್ತಿದ್ದ ತಮ್ಮ 10 ತಿಂಗಳ ಸೊಸೆಗೆ ‘ಪಂದ್ಯಶ್ರೇಷ್ಠ’ ಪ್ರಶಸ್ತಿಯನ್ನು ಅರ್ಪಿಸುವುದಾಗಿ ತಿಳಿಸಿದರು.
‘ನನ್ನ ಸೊಸೆ ಇಲ್ಲಿದ್ದಾಳೆ, ಅವಳಿಗೆ ಈಗ 10 ತಿಂಗಳು. ನಾನು ಈ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಅವಳಿಗೆ ಅರ್ಪಿಸಲು ಬಯಸುತ್ತೇನೆ’ ಎಂದು ನಗುತ್ತ ಹೇಳಿದರು.
ಅರ್ಷದೀಪ್ ಸಿಂಗ್ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 13 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.