ADVERTISEMENT

ಕೋವಿಡ್–19 | ಭಾರತ–ದಕ್ಷಿಣ ಆಫ್ರಿಕಾ ಏಕದಿನ ಕ್ರಿಕೆಟ್ ಸರಣಿ ರದ್ದು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 14:17 IST
Last Updated 13 ಮಾರ್ಚ್ 2020, 14:17 IST
   

ಮುಂಬೈ:ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಏಕದಿನ ಕ್ರಿಕೆಟ್‌ ಸರಣಿಯನ್ನು ರದ್ದು ಪಡಿಸಲು ತೀರ್ಮಾನಿಸಲಾಗಿದ್ದು, ಇನ್ನೊಮ್ಮೆ ಸರಣಿ ಆಯೋಜಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.ಕೋವಿಡ್–19 ವೈರಸ್‌ ಭೀತಿಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

‘ಏಕದಿನ ಸರಣಿಯ ವೇಳಾಪಟ್ಟಿಯನ್ನುಬಿಸಿಸಿಐ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ (ಸಿಎಸ್‌ಎ) ಒಟ್ಟಾಗಿ ಮರುಹೊಂದಾಣಿಕೆ ಮಾಡಲಿವೆ. ಮೂರು ಪಂದ್ಯಗಳ ಸರಣಿ ಆಡಲು ದಕ್ಷಿಣ ಆಫ್ರಿಕಾ ಮತ್ತೆ ಭಾರತಕ್ಕೆ ಬರಲಿದೆ’ ಎಂದು ಬಿಸಿಸಿಐ ಅಧಿಕೃತ ಹೇಳಿಕೆ ನೀಡಿದೆ.

ಧರ್ಮಶಾಲಾದಲ್ಲಿ ಆಯೋಜನೆಯಾಗಿದ್ದ ಮೊದಲ ಏಕದಿನಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಎರಡು ಮತ್ತು ಮೂರನೇ ಪಂದ್ಯಗಳು ಕ್ರಮವಾಗಿಲಖನೌ ಹಾಗೂ ಕೋಲ್ಕತ್ತದಲ್ಲಿ ನಿಗದಿಯಾಗಿದ್ದವು.

ADVERTISEMENT

ಲಖನೌ ಹಾಗೂ ಕೋಲ್ಕತ್ತದಲ್ಲಿ ಪಂದ್ಯಗಳನ್ನು ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬರುವುದಕ್ಕೆ ಅವಕಾಶ ನಿರಾಕರಿಸಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಗುರುವಾರ ಬಿಸಿಸಿಐ ಹೇಳಿತ್ತು. ಆದರೆ, ಇದೀಗ ಸರಣಿಯನ್ನು ರದ್ದುಪಡಿಸಲಾಗಿದೆ.

ಈ ನಿರ್ಧಾರಕ್ಕೂ ಮುನ್ನ ಬಿಸಿಸಿಐ, ಇದೇ ತಿಂಗಳು 29 ದಿಂದ ಆರಂಭವಾಗಬೇಕಿದ್ದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯನ್ನು ಏಪ್ರಿಲ್‌ 15ಕ್ಕೆ ಮುಂದೂಡಿತ್ತು.

ಪ್ರಪಂಚದಾದ್ಯಂತ 1 ಲಕ್ಷಕ್ಕೂ ಹೆಚ್ಚು ಜನರಲ್ಲಿ ಕಾಣಿಸಿಕೊಂಡಿರುವ ಕೋವಿಡ್‌–19 ಸೋಂಕು ಭಾರತದಲ್ಲಿಸುಮಾರು 80ಕ್ಕೂ ಹೆಚ್ಚು ಮಂದಿಯಲ್ಲಿ ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.