ADVERTISEMENT

IND vs SA 1st Test: ಭಾರತದ ಬ್ಯಾಟರ್‌ಗಳಿಗೆ 'ಸ್ಪಿನ್ ಟೆಸ್ಟ್'

ವಿಶ್ವ ಚಾಂಪಿಯನ್ ತಂಡದ ಗಿಲ್ ನಾಯಕತ್ವದ ಪರೀಕ್ಷೆ

ಪಿಟಿಐ
Published 13 ನವೆಂಬರ್ 2025, 22:58 IST
Last Updated 13 ನವೆಂಬರ್ 2025, 22:58 IST
<div class="paragraphs"><p>ಭಾರತ ತಂಡದ ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ತಾಲೀಮು&nbsp;</p></div>

ಭಾರತ ತಂಡದ ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ತಾಲೀಮು 

   

ಪಿಟಿಐ ಚಿತ್ರ

ಕೋಲ್ಕತ್ತ: ಆತಿಥೇಯ ಭಾರತ ತಂಡದ ಬ್ಯಾಟಿಂಗ್ ಶಕ್ತಿಗೆ ದಕ್ಷಿಣ ಆಫ್ರಿಕಾದ ಉತ್ತಮ ಸ್ಪಿನ್ನರ್‌ಗಳು ಸವಾಲೊಡ್ಡಲು ಸಿದ್ಧರಾಗಿದ್ದಾರೆ. 

ADVERTISEMENT

ಈಡನ್ ಗಾರ್ಡನ್‌ನಲ್ಲಿ ಶುಕ್ರವಾರ ಆರಂಭವಾಗಲಿರುವ ಉಭಯ ತಂಡಗಳ ಮೊದಲ ಟೆಸ್ಟ್ ಪಂದ್ಯವು ಆತಿಥೇಯರ ಬ್ಯಾಟರ್‌ಗಳಿಗೆ ಸತ್ವಪರೀಕ್ಷೆಯ ವೇದಿಕೆಯಾಗಲಿದೆ. 

ಭಾರತ ತಂಡವು ತನ್ನ ತವರಿನ ಅಂಗಳಲ್ಲಿ ವಿದೇಶಿ ತಂಡಗಳ ಸ್ಪಿನ್ನರ್‌ಗಳ ಎದುರು ಈ ಹಿಂದೆಯೂ ಪರದಾಡಿದ ನಿದರ್ಶನಗಳಿವೆ. ಹೋದವರ್ಷ ನ್ಯೂಜಿಲೆಂಡ್ ಎದುರು ತವರಿನಲ್ಲಿಯೇ ಸರಣಿ ಸೋತಿತ್ತು. ಕಿವೀಸ್ ಬಳಗದ ಮಿಚೆಲ್ ಸ್ಯಾಂಟನರ್, ಅಜಾಜ್ ಪಟೇಲ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ಸ್ಪಿನ್ ದಾಳಿಯ ಎದುರು ಕುಸಿದಿತ್ತು. ಮೂರು ಟೆಸ್ಟ್‌ಗಳ ಸರಣಿಯನ್ನು ಕಿವೀಸ್ ಕ್ಲೀನ್‌ಸ್ವೀಪ್ ಮಾಡಿತ್ತು. 

ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ತಂಡದಲ್ಲಿ ಪ್ರಸ್ತುತ ಉತ್ತಮ ಸ್ಪಿನ್ನರ್‌ಗಳಿದ್ದಾರೆ. ಈ ಹಿಂದೆ ತನ್ನ ವೇಗದ ಬೌಲಿಂಗ್ ಶಕ್ತಿಯ ಮೂಲಕ ಎದುರಾಳಿಗಳನ್ನು ಕಂಗೆಡಿಸಿದ್ದ ತಂಡ ಸ್ಪಿನ್‌ ಬೌಲಿಂಗ್‌ನಲ್ಲಿಯೂ ಪರಿಣತಿ ಸಾಧಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ತಂಡವು ಇತ್ತೀಚೆಗೆ ಪಾಕಿಸ್ತಾನದಲ್ಲಿ ಸರಣಿಯನ್ನು 1–1ರಿಂದ ಸಮಬಲಗೊಳಿಸಿಕೊಂಡು ಇಲ್ಲಿಗೆ ಬಂದಿದೆ. ಆ ಸರಣಿಯಲ್ಲಿ ತೆಂಬಾ ಬವುಮಾ ಇರಲಿಲ್ಲ. ಭಾರತದ ಎದುರು ಅವರು ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸುವರು. 

ಈಚೆಗೆ ಭಾರತ ಎ ತಂಡದ ವಿರುದ್ಧ ಅವರು ದಕ್ಷಿಣ ಆಫ್ರಿಕಾ ಎ ತಂಡವನ್ನು ಪ್ರತಿನಿಧಿಸಿದ್ದರು. ಆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎ ತಂಡವು ದೊಡ್ಡ ಮೊತ್ತವನ್ನು ಬೆನ್ನಟ್ಟಿ ಜಯಿಸಿತ್ತು. ತಮ್ಮ ತಂಡದ ಆಟಗಾರರು ಕೊನೆಯ ಹಂತದವರೆಗೂ ಹುರಿದುಂಬಿಸುವ ತೆಂಬಾ ಅವರ ಗುಣವೂ ಭಾರತಕ್ಕೆ ಕಠಿಣ ಸವಾಲಾಗಬಹುದು. ಏಡನ್ ಮರ್ಕರಂ, ಟ್ರಿಸ್ಟನ್ ಸ್ಟಬ್ಸ್, ಜುಬೇರ್ ಹಮ್ಜಾ ಆತಿಥೇಯ ಬ್ಯಾಟರ್‌ಗಳಿಗೆ ಸವಾಲೊಡ್ಡಬಲ್ಲರು. ಎಡಗೈ ವೇಗಿ ಮಾರ್ಕೊ ಯಾನ್ಸೆನ್, ಕಗಿಸೊ ರಬಾಡ ಅವರು ಐಪಿಎಲ್‌ನಲ್ಲಿ ಆಡಿದ ಅನುಭವಿಗಳು. ಆದ್ದರಿಂದ ಅವರಿಗೆ ಭಾರತದ ಪಿಚ್‌ಗಳ ಕುರಿತು ಚೆನ್ನಾಗಿ ಅರಿವಿದೆ. ಸ್ಪಿನ್ನರ್ ಕೇಶವ್ ಮಹಾರಾಜ್ ಕೂಡ ತಮ್ಮ ಕೈಚಳಕ ಮೆರೆಯಲು ಉತ್ಸುಕರಾಗಿದ್ದಾರೆ. 

ಇದರಿಂದಾಗಿ ಭಾರತ ತಂಡದ ಯುವನಾಯಕ ಶುಭಮನ್ ಗಿಲ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ವಿಭಿನ್ನ ತಂತ್ರಗಾರಿಕೆಯೊಂದಿಗೆ ಕಣಕ್ಕಿಳಿಯುವುದು ಅನಿವಾರ್ಯ. 

ಈ ಸರಣಿಯಲ್ಲಿ ಇಬ್ಬರು ವಿಕೆಟ್‌ಕೀಪರ್‌ಗಳಾದ ರಿಷಭ್ ಪಂತ್ ಮತ್ತು ಧ್ರುವ ಜುರೇಲ್ ಅವರಿಬ್ಬರೂ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಇದರಿಂದಾಗಿ ಬ್ಯಾಟಿಂಗ್‌ ಶಕ್ತಿ ವೃದ್ಧಿಸಲಿದೆ. ರಿಷಭ್ ಇಂಗ್ಲೆಂಡ್‌ನಲ್ಲಿ  ಆಡಿದ್ದ ಟೆಸ್ಟ್‌ನಲ್ಲಿ ಗಾಯಗೊಂಡಿದ್ದರು. ಅದರಿಂದಾಗಿ ಅವರು ಈಚೆಗೆ ವೆಸ್ಟ್ ಇಂಡೀಸ್ ಎದುರಿನ ಸರಣಿಯಲ್ಲಿ ಆಡಿರಲಿಲ್ಲ. 

ಸ್ಪಿನ್ ವಿಭಾಗದಲ್ಲಿ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಕುಲದೀಪ್ ಯಾದವ್ ಅವರೂ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.  ಅಕ್ಷರ್ ಪಟೇಲ್ ಅವರಿಗೆ ಅವಕಾಶ ಸಿಕ್ಕರೆ ಯಾದವ್ ವಿಶ್ರಾಂತಿ ಪಡೆಯಬಹುದು. 

ಶುಭಮನ್ ಗಿಲ್ ಬ್ಯಾಟಿಂಗ್‌ನಲ್ಲಿ ತಮ್ಮ ಲಯಕ್ಕೆ ಮರಳಿದರೆ ಅಗ್ರಕ್ರಮಾಂಕದಲ್ಲಿ ಸ್ಥಿರತೆ ಮೂಡಲಿದೆ. ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್ ಅವರು ಉತ್ತಮ ಲಯದಲ್ಲಿದ್ದಾರೆ. ಸಾಯಿ ಸುದರ್ಶನ್ ಅವರಿಗೆ ಮೂರನೇ ಕ್ರಮಾಂಕದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಲು ಮತ್ತೊಂದು ಅವಕಾಶ ಸಿಗುವ ನಿರೀಕ್ಷೆ ಇದೆ. 

ಬಲಾಬಲ

ಪಂದ್ಯ; 44

ಭಾರತ ಜಯ; 16

ದ.ಆಫ್ರಿಕಾ ಜಯ;18

ಡ್ರಾ;10

ತಂಡ ಇಂತಿವೆ

ಭಾರತ: ಶುಭಮನ್ ಗಿಲ್ (ನಾಯಕ) ಕೆ.ಎಲ್. ರಾಹುಲ್ ಯಶಸ್ವಿ ಜೈಸ್ವಾಲ್ ಸಾಯಿ ಸುದರ್ಶನ್ ರಿಷಭ್ ಪಂತ್ (ವಿಕೆಟ್‌ಕೀಪರ್/ಉಪನಾಯಕ) ಧ್ರುವ ಜುರೇಲ್ (ವಿಕೆಟ್‌ಕೀಪರ್) ರವೀಂದ್ರ ಜಡೇಜ ವಾಷಿಂಗ್ಟನ್ ಸುಂದರ್ ಜಸ್‌ಪ್ರೀತ್ ಬೂಮ್ರಾ ಆಕಾಶದೀಪ್ ಮೊಹಮ್ಮದ್ ಸಿರಾಜ್ ಕುಲದೀಪ್ ಯಾದವ್ ಅಕ್ಷರ್ ಪಟೇಲ್ ದೇವದತ್ತ ಪಡಿಕ್ಕಲ್

ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ) ಏಡನ್ ಮರ್ಕರಂ ರಿಯಾನ್ ರಿಕೆಲ್ಟನ್ ಟ್ರಿಸ್ಟನ್ ಸ್ಟಬ್ಸ್ ಕೈಲ್ ವೆರೆಯೆನ್ ಡಿವಾಲ್ಡ್ ಬ್ರೆವಿಸ್ ಜುಬೇರ್ ಹಮ್ಜಾ ಟೋನಿ ಡಿ ಝಾರ್ಜಿ ಕಾರ್ಬಿನ್ ಬಾಷ್ ವಿಯಾನ್ ಮಲ್ದರ್ ಮಾರ್ಕೊ ಯಾನ್ಸೆನ್ ಕೇಶವ್ ಮಹಾರಾಜ್ ಸೆನುರನ್ ಮುತ್ತು ಸಾಮಿ ಕಗಿಸೊ ರಬಾಡ ಸಿಮೊನ್ ಹಾರ್ಮೆರ್.

ಪಂದ್ಯ ಆರಂಭ: ಬೆಳಿಗ್ಗೆ 9.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.