ADVERTISEMENT

IND vs SL: ಲಂಕಾ ವಿರುದ್ಧ 5 ವಿಕೆಟ್ ಪಡೆದ ಜಸ್‌ಪ್ರೀತ್ ಬೂಮ್ರಾ ಸ್ಮರಣೀಯ ಸಾಧನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮಾರ್ಚ್ 2022, 11:28 IST
Last Updated 13 ಮಾರ್ಚ್ 2022, 11:28 IST
ರೋಹಿತ್ ಶರ್ಮಾ ಹಾಗೂ ಜಸ್‌ಪ್ರೀತ್ ಬೂಮ್ರಾ
ರೋಹಿತ್ ಶರ್ಮಾ ಹಾಗೂ ಜಸ್‌ಪ್ರೀತ್ ಬೂಮ್ರಾ   

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ, ತವರು ನೆಲದಲ್ಲಿ ಚೊಚ್ಚಲ ಬಾರಿಗೆ ಐದು ವಿಕೆಟ್ ಸಾಧನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ (ಭಾನುವಾರ) 24 ರನ್ ತೆತ್ತು ಐದು ವಿಕೆಟ್ ಕಬಳಿಸಿದ ಬೂಮ್ರಾ, ಸ್ಮರಣೀಯ ಸಾಧನೆ ಮಾಡಿದರು.

ಒಟ್ಟಾರೆಯಾಗಿ ತಮ್ಮ 29ನೇ ಟೆಸ್ಟ್ ಪಂದ್ಯದಲ್ಲಿ ಎಂಟನೇ ಬಾರಿಗೆ ಐದು ವಿಕೆಟ್ ಕಬಳಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಮೂಲಕ ಭಾರತದ ಮಾಜಿ ಕಪ್ತಾನ ಕಪಿಲ್ ದೇವ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ADVERTISEMENT

ಹಾಗೆಯೇ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಸಾಧನೆ ಮಾಡಿದ ಭಾರತದ ನಾಲ್ಕನೇ ಬೌಲರ್ ಎನಿಸಿದ್ದಾರೆ. ಇದಕ್ಕೂ ಮೊದಲೂ ಉಮೇಶ್ ಯಾದವ್, ಇಶಾಂತ್ ಶರ್ಮಾ ಹಾಗೂ ಅಕ್ಷರ್ ಪಟೇಲ್ (ಎರಡು ಬಾರಿ) ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಐದು ವಿಕೆಟ್ ಗಳಿಸಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಲಂಕಾ ವಿರುದ್ಧ ಭಾರತೀಯ ವೇಗದ ಬೌಲರ್‌ನ ಶ್ರೇಷ್ಠ ಪ್ರದರ್ಶನ ಕೂಡ ಇದಾಗಿದೆ. ಈ ಪಟ್ಟಿಯಲ್ಲಿ ಇಶಾಂತ್ ಶರ್ಮಾ ಸಾಧನೆಯನ್ನು ಬೂಮ್ರಾ ಮೀರಿದ್ದಾರೆ. 2015ರ ಕೊಲಂಬೊ ಟೆಸ್ಟ್ ಪಂದ್ಯದಲ್ಲಿ ಇಶಾಂತ್ 54 ರನ್ ತೆತ್ತು ಐದು ವಿಕೆಟ್ ಕಬಳಿಸಿದ್ದರು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬೂಮ್ರಾ ದಾಳಿಗೆ ತತ್ತರಿಸಿದ ಲಂಕಾ ಕೇವಲ 109 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 143 ರನ್‌ಗಳ ಮಹತ್ವದ ಮುನ್ನಡೆ ಪಡೆದುಕೊಂಡಿತ್ತು.

ಜಸ್‌ಪ್ರೀತ್ ಬೂಮ್ರಾ, ವೆಸ್ಟ್‌ಇಂಡೀಸ್, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನೆಲದಲ್ಲಿ ತಲಾ ಎರಡು ಮತ್ತು ಆಸ್ಟ್ರೇಲಿಯಾದಲ್ಲಿ ಒಂದು ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.