ADVERTISEMENT

ನನ್ನ ಪ್ರಕಾರ ನಿಜವಾದ ಕ್ರಿಕೆಟ್‌ ಎಂದರೆ ಟೆಸ್ಟ್ ಕ್ರಿಕೆಟ್‌: ವಿರಾಟ್ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮಾರ್ಚ್ 2022, 10:54 IST
Last Updated 3 ಮಾರ್ಚ್ 2022, 10:54 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಮೊಹಾಲಿ: ಟೆಸ್ಟ್ ಕ್ರಿಕೆಟ್‌ನಲ್ಲಿ ನೂರು ಪಂದ್ಯಗಳನ್ನು ಆಡಲು ನನಗೆ ಸಾಧ್ಯವಾಗುತ್ತದೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ.ನನ್ನ ಪ್ರಕಾರ ನಿಜವಾದ ಕ್ರಿಕೆಟ್‌ ಎಂದರೆಟೆಸ್ಟ್ ಕ್ರಿಕೆಟ್‌ ಎಂದು ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಶ್ರೀಲಂಕಾ ವಿರುದ್ಧ ಭಾರತದಲ್ಲಿ ಆಯೋಜನೆಯಾಗಿರುವ ಎರಡು ಪಂದ್ಯಗಳ ಸರಣಿಯ ಮೊದಲ ಪಂದ್ಯವು ವಿಶ್ವ ಕ್ರಿಕೆಟ್‌ನ 'ಕಿಂಗ್' ಕೊಹ್ಲಿ ಪಾಲಿಗೆ ಸ್ಮರಣೀಯವಾಗಲಿದೆ. ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅವರು, ದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ 100 ಪಂದ್ಯಗಳನ್ನಾಡಿದ ಆಟಗಾರರ ಸಾಲಿಗೆ ಸೇರ್ಪಡೆಯಾಗಲಿದ್ದಾರೆ. ಮೊಹಾಲಿಯಲ್ಲಿರುವ ಪಂಜಾಬ್ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಮಾರ್ಚ್‌ 04ರಿಂದಮಾರ್ಚ್‌ 08ರವರೆಗೆ ಈ ಸೆಣಸಾಟ ನಡೆಯಲಿದೆ. ಆಸನ ಸಾಮರ್ಥ್ಯದ ಶೇ 50 ಜನರಿಗೆ ಕ್ರೀಡಾಂಗಣ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸಾಧನೆ ಕುರಿತು ಕೊಹ್ಲಿ ಮಾತನಾಡಿರುವ ವಿಡಿಯೊವೊಂದನ್ನು ಬಿಸಿಸಿಐ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. 'ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ನಾನು 100 ಟೆಸ್ಟ್ ಪಂದ್ಯಗಳನ್ನು ಆಡುತ್ತೇನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಇದು ಸುದೀರ್ಘ ಪ್ರಯಾಣವಾಗಿತ್ತು. ಈ ನೂರು ಟೆಸ್ಟ್‌ಗಳಲ್ಲಿ ಸಾಕಷ್ಟು ಕ್ರಿಕೆಟ್‌ ಆಡಿದ್ದೇನೆ. ಇಷ್ಟು ಪಂದ್ಯಗಳನ್ನಾಡಲು ಸಾಧ್ಯವಾಗಿದ್ದಕ್ಕೆ ಕೃತಜ್ಞನಾಗಿದ್ದೇನೆ. ದೇವರ ದಯೆ ನನ್ನ ಮೇಲಿದೆ. ಫಿಟ್‌ನೆಸ್ ಕಾಪಾಡಿಕೊಳ್ಳಲು ಪರಿಶ್ರಮ ಹಾಕಿದ್ದೇನೆ. ನನ್ನ ಪಾಲಿಗೆ, ನನ್ನ ಕುಟುಂಬ ಮತ್ತು ತರಬೇತುದಾರರ ಪಾಲಿಗೆ ಇದು ಬಹುದೊಡ್ಡ ಕ್ಷಣ. ತುಂಬಾ ವಿಶೇಷವಾದ ಸಂದರ್ಭವಿದು' ಎಂದು ಅವರು ಹೇಳಿಕೊಂಡಿದ್ದಾರೆ.

ADVERTISEMENT

'ಸ್ವಲ್ಪ ರನ್ ಗಳಿಸಬೇಕು ಎಂದು ಯಾವತ್ತೂ ಅಂದುಕೊಂಡಿಲ್ಲ. ಹೆಚ್ಚು ರನ್ ಗಳಿಸಬೇಕೆಂಬುದೇ ನನ್ನ ಆಲೋಚನೆಯಾಗಿರುತ್ತಿತ್ತು. ಜೂನಿಯರ್‌ ಕ್ರಿಕೆಟ್‌ನಲ್ಲಿ ಸಾಕಷ್ಟು ದ್ವಿಶತಕಗಳನ್ನು ಗಳಿಸಿದ್ದೇನೆ. ಹೆಚ್ಚು ಕಾಲ ಕ್ರೀಸ್‌ನಲ್ಲಿ ಉಳಿಯಬೇಕು ಎಂಬುದೇ ನನ್ನ ಆಲೋಚನೆಯಾಗಿರುತ್ತಿತ್ತು ಮತ್ತು ಆ ಕೆಲಸವನ್ನು ಆನಂದಿಸುತ್ತಾ ಮಾಡಿದ್ದೇನೆ. ಈ ವಿಚಾರಗಳು (ಆಲೋಚನೆಗಳು) ನಿಮ್ಮಿಂದ ಸಾಕಷ್ಟನ್ನು ಹೊರಗೆಳೆಯುತ್ತವೆ ಮತ್ತು ನಿಮ್ಮ ನೈಜ ಸಾಮರ್ಥ್ಯವನ್ನು ತೋರ್ಪಡಿಸುತ್ತವೆ. ಟೆಸ್ಟ್‌ ಕ್ರಿಕೆಟ್‌ ಅಸ್ತಿತ್ವದಲ್ಲಿರಬೇಕಾದ ಅಗತ್ಯವಿದೆ. ನನ್ನ ಪ್ರಕಾರ ಇದೇ (ಟೆಸ್ಟ್ ಕ್ರಿಕೆಟ್‌) ನಿಜವಾದ ಕ್ರಿಕೆಟ್‌' ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವರ್ಷ (2021ರಲ್ಲಿ) ದುಬೈನಲ್ಲಿ ನಡೆದ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪ್ರಶಸ್ತಿ ಜಯಿಸಲು ವಿಫಲವಾದ ಬಳಿಕ ವಿರಾಟ್ ಚುಟುಕು ಮಾದರಿಯ ನಾಯಕತ್ವ ತೊರೆದಿದ್ದರು. ಅದಾದ ಬಳಿಕ ಬಿಸಿಸಿಐ, ಏಕದಿನ ತಂಡದ ನಾಯಕತ್ವದಿಂದಲೂ ಅವರನ್ನು ಕೆಳಗಿಳಿಸಿತ್ತು. ಇದೀಗ ಕೊಹ್ಲಿ, ಟೆಸ್ಟ್ ನಾಯಕತ್ವವನ್ನೂ ಬಿಟ್ಟಿದ್ದಾರೆ.ಈ ಮೂರೂ ಮಾದರಿಯಲ್ಲಿ ತಂಡ ಮುನ್ನಡೆಸುವ ಹೊಣೆಯನ್ನು ರೋಹಿತ್ ಶರ್ಮಾ ಹೊತ್ತುಕೊಂಡಿದ್ದಾರೆ.

ನಾಯಕನಾಗಿ ಕೊಹ್ಲಿ ಸಾಧನೆ
ಹೆಚ್ಚು ಟೆಸ್ಟ್ ಪಂದ್ಯದಲ್ಲಿ ತಂಡಮುನ್ನಡೆಸಿದ ಹಾಗೂ ಹೆಚ್ಚು ಗೆಲುವು ತಂದುಕೊಟ್ಟ ಭಾರತದ ನಾಯಕ ಎಂಬ ಖ್ಯಾತಿ ಕೊಹ್ಲಿ ಅವರದ್ದು. ಅವರು 68 ಪಂದ್ಯಗಳಲ್ಲಿ ನಾಯಕರಾಗಿದ್ದು, 40 ಜಯ ತಂದುಕೊಟ್ಟಿದ್ದಾರೆ. ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ (109 ಟೆಸ್ಟ್‌ಗಳಲ್ಲಿ 53), ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (77 ಟೆಸ್ಟ್‌ಗಳಲ್ಲಿ 48) ಮತ್ತು ಸ್ಟೀವ್‌ ವಾ (57 ಟೆಸ್ಟ್‌ಗಳಲ್ಲಿ 41) ಮಾತ್ರವೇದೀರ್ಘ ಮಾದರಿಯಲ್ಲಿ ಕೊಹ್ಲಿಗಿಂತ ಹೆಚ್ಚು ಗೆಲುವು ಕಂಡಿದ್ದಾರೆ.

ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವು ಸತತ 42 ಟೆಸ್ಟ್‌ ಪಂದ್ಯಗಳಲ್ಲಿ (2016ರ ಅಕ್ಟೋಬರ್‌ನಿಂದ 2020ರ ಮಾರ್ಚ್‌ ವರೆಗೆ)ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿ ಉಳಿದಿತ್ತು.

ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕನಾಗಿ ಹೆಚ್ಚು (7) ದ್ವಿಶತಕ ಸಿಡಿಸಿದ ಆಟಗಾರ ಎನಿಸಿರುವ ಕೊಹ್ಲಿ, ಭಾರತ ಪರನಾಯಕನಾಗಿ ಹೆಚ್ಚು (20) ಶತಕ ಸಿಡಿಸಿದ ಶ್ರೇಯವನ್ನೂ ಹೊಂದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ 2014ರಲ್ಲಿ ಮೊದಲ ಬಾರಿಗೆ ನಾಯಕತ್ವದ ಹೊಣೆ ಹೊತ್ತಿದ್ದ ಕೊಹ್ಲಿ, ಇದೇ ವರ್ಷ (2022) ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೇ ಸಲ ತಂಡ ಮುನ್ನಡೆಸಿದ್ದರು.

ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಖರಿ

ಭಾರತ ಪರ ನೂರಕ್ಕಿಂತ ಹೆಚ್ಚು ಟೆಸ್ಟ್ ಆಡಿದವರು
ಸಚಿನ್ ತೆಂಡೂಲ್ಕರ್ – 200ಪಂದ್ಯ
ರಾಹುಲ್ ದ್ರಾವಿಡ್ – 164ಪಂದ್ಯ
ವಿವಿಎಸ್ ಲಕ್ಷ್ಮಣ್ – 134ಪಂದ್ಯ
ಅನಿಲ್ ಕುಂಬ್ಳೆ – 132ಪಂದ್ಯ
ಕಪಿಲ್ ದೇವ್ – 131ಪಂದ್ಯ
ಸುನಿಲ್ ಗವಾಸ್ಕರ್ – 125ಪಂದ್ಯ
ವೆಂಗ್ ಸರ್ಕರ್ – 116ಪಂದ್ಯ
ಸೌರವ್ ಗಂಗೂಲಿ – 113ಪಂದ್ಯ
ಇಶಾಂತ್ ಶರ್ಮಾ – 105ಪಂದ್ಯ
ವೀರೇಂದ್ರ ಸೆಹ್ವಾಗ್ – 104ಪಂದ್ಯ
ಹರ್ಭಜನ್ ಸಿಂಗ್ – 103ಪಂದ್ಯ

ವಿರಾಟ್ ಕೊಹ್ಲಿಗೆ ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ (ಬಿಸಿಸಿಐ ಅಧ್ಯಕ್ಷ), ವಿವಿಎಸ್ ಲಕ್ಷ್ಮಣ್, ವೆಂಗ್ ಸರ್ಕರ್, ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್, ಸಹ ಆಟಗಾರ ಜಸ್‌ಪ್ರೀತ್ ಬೂಮ್ರಾ ಹಾಗೂ ಮತ್ತಿತರರುಶುಭ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.