ADVERTISEMENT

ಅಲಿಸಾ ಹೀಲಿ ಕ್ಲೀನ್ ಬೌಲ್ಡ್ ಮಾಡಿದ ಶಿಖಾ ಪಾಂಡೆ; ಇದೇನಾ ಶತಮಾನದ ಎಸೆತ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಅಕ್ಟೋಬರ್ 2021, 12:19 IST
Last Updated 9 ಅಕ್ಟೋಬರ್ 2021, 12:19 IST
ಶಿಖಾ ಪಾಂಡೆ
ಶಿಖಾ ಪಾಂಡೆ   

ಕ್ವೀನ್ಸ್‌ಲ್ಯಾಂಡ್: ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ನಡೆದ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ಭಾರತ ಸೋಲಿಗೆ ಶರಣಾಗಿರಬಹುದು. ಆದರೆ ಶಿಖಾ ಪಾಂಡೆ ಎಸೆದ ಆ ಒಂದು ಎಸೆತವು ಇಡೀ ಕ್ರಿಕೆಟ್ ಲೋಕವನ್ನು ನಿಬ್ಬೆರಗಾಗಿಸಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಭಾರತೀಯ ಮಹಿಳಾ ತಂಡವು ಒಂಬತ್ತು ವಿಕೆಟ್ ನಷ್ಟಕ್ಕೆ 118 ರನ್ ಗಳಿಸಲಷ್ಟೇ ಸಮರ್ಥವಾಯಿತು.

ಬಳಿಕ ಬ್ಯಾಟಿಂಗ್ ನಡೆಸಿದ ಆಸೀಸ್‌ಗೆ ಶಿಖಾ ಪಾಂಡೆ ಎರಡನೇ ಎಸೆತದಲ್ಲಿ ಆಘಾತ ನೀಡಿದರು. ಮೊದಲನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಅಲಿಸಾ ಹೀಲಿ ಅವರನ್ನು ಎರಡನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಮಾಡುವ ಗಮನ ಸೆಳೆದರು.

32 ವರ್ಷದ ಶಿಖಾ ಎಸೆದ ಚೆಂಡು, ನಂಬಲಾಗದ ರೀತಿಯಲ್ಲಿ ಇನ್ ಸ್ವಿಂಗ್ ಆಗಿ ಸ್ಟಂಪ್ ಮೇಲಿದ್ದ ಬೇಲ್ಸ್ ಹಾರಿಸಿತ್ತು. ಇದನ್ನು ಟ್ವೀಟ್ ಮಾಡಿರುವ ಭಾರತದ ಮಾಜಿ ಆಟಗಾರ ವಾಸೀಮ್ ಜಾಫರ್, ಮಹಿಳಾ ಕ್ರಿಕೆಟ್‌ನ 'ಶತಮಾನದ ಎಸೆತ' ಎಂದು ಕೊಂಡಾಡಿದ್ದಾರೆ.

ಆದರೂ ಭಾರತದ ಈ ಸಂಭ್ರಮ ಹೆಚ್ಚು ಹೊತ್ತು ನಿಲ್ಲಲಿಲ್ಲ. ತಹ್ಲಿಯಾ ಮೆಕ್‌ಗ್ರಾಥ್ (42*) ಹಾಗೂ ಬೆತ್ ಮೂನಿ (34) ಸಮಯೋಚಿತ ಆಟದ ನೆರವಿನಿಂದ ಆಸೀಸ್, 19.1 ಓವರ್‌ಗಳಲ್ಲಿ ಗುರಿ ತಲುಪಿತು. ಈ ಮೂಲಕ 1-0 ಅಂತರದ ಮುನ್ನಡೆ ದಾಖಲಿಸಿದೆ. ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.