ADVERTISEMENT

‘ಟೆಸ್ಟ್’ ಪಂದ್ಯ | ಪ್ರಸಿದ್ಧ, ಆಕಾಶ್ ವೇಗದ ಭರಾಟೆ; ಮಾರ್ಕೆಸ್ ಶತಕ

ಗಿರೀಶದೊಡ್ಡಮನಿ
Published 7 ನವೆಂಬರ್ 2025, 18:27 IST
Last Updated 7 ನವೆಂಬರ್ 2025, 18:27 IST
ಬೆಂಗಳೂರಿನ ಹೊರವಲಯದಲ್ಲಿರುವ ಬಿಸಿಸಿಐ–ಸಿಒಇ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಟೆಸ್ಟ್’ ಪಂದ್ಯದಲ್ಲಿ  ವಿಕೆಟ್ ಗಳಿಸಿ  ಭಾರತ ಎ ತಂಡದ ಆಕಾಶ್ ದೀಪ್ ಅವರನ್ನು ಕೆ.ಎಲ್. ರಾಹುಲ್, ಪ್ರಸಿದ್ಧಕೃಷ್ಣ, ರಿಷಭ್ ಪಂತ್ ಮತ್ತಿತರರು ಅಭಿನಂದಿಸಿದರು  –ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಬೆಂಗಳೂರಿನ ಹೊರವಲಯದಲ್ಲಿರುವ ಬಿಸಿಸಿಐ–ಸಿಒಇ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಟೆಸ್ಟ್’ ಪಂದ್ಯದಲ್ಲಿ  ವಿಕೆಟ್ ಗಳಿಸಿ  ಭಾರತ ಎ ತಂಡದ ಆಕಾಶ್ ದೀಪ್ ಅವರನ್ನು ಕೆ.ಎಲ್. ರಾಹುಲ್, ಪ್ರಸಿದ್ಧಕೃಷ್ಣ, ರಿಷಭ್ ಪಂತ್ ಮತ್ತಿತರರು ಅಭಿನಂದಿಸಿದರು  –ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಮಾರ್ಕೆಸ್ ಏಕರ್ಮನ್ ಅವರು ಚೆಂದದ ಶತಕ ಗಳಿಸಿದರೂ ದಕ್ಷಿಣ ಆಫ್ರಿಕಾ ಎ ತಂಡಕ್ಕೆ ಇನಿಂಗ್ಸ್‌ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ.  ನಗರದ ಹೊರವಲಯದಲ್ಲಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನದಲ್ಲಿ ನಡೆಯುತ್ತಿರುವ ‘ಟೆಸ್ಟ್’ ಪಂದ್ಯದ ಎರಡನೇ ದಿನದಾಟದಲ್ಲಿ   ಪ್ರಸಿದ್ಧ ಕೃಷ್ಣ ಮತ್ತು ಆಕಾಶ್ ದೀಪ್ ಅವರ ಅಮೋಘ ದಾಳಿಯ ಬಲದಿಂದ ಭಾರತ ಎ ತಂಡ 34 ರನ್‌ಗಳ ಮುನ್ನಡೆ ಸಾಧಿಸಿತು.

ಎರಡನೇ ಇನಿಂಗ್ಸ್ ಆರಂಭಿಸಿರುವ ರಿಷಭ್ ಪಂತ್ ಬಳಗವು ದಿನದಾಟದ ಮುಕ್ತಾಯಕ್ಕೆ 24 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 78 ರನ್ ಗಳಿಸಿತು. ಒಟ್ಟು 112 ರನ್‌ಗಳ ಮುನ್ನಡೆ ಸಾಧಿಸಿದೆ. ಕೆ.ಎಲ್. ರಾಹುಲ್ (ಬ್ಯಾಟಿಂಗ್ 26) ಮತ್ತು ‘ರಾತ್ರಿ ಕಾವಲುಗಾರ’ ಕುಲದೀಪ್ ಯಾದವ್  ಕ್ರೀಸ್‌ನಲ್ಲಿದ್ದಾರೆ.

ಪಂದ್ಯದ ಮೊದಲ ದಿನವಾದ ಗುರುವಾರ ಸಂಜೆಯ ವೇಳೆಗೆ 255 ರನ್ ಗಳಿಸಿದ್ದ ಭಾರತ ಎ ತಂಡದ ಇನಿಂಗ್ಸ್‌ಗೆ ತೆರೆ ಬಿದ್ದಿತ್ತು. ಧ್ರುವ ಜುರೇಲ್ ಅವರ ಶತಕದ ಬಲದಿಂದ ತಂಡವು ಈ ಮೊತ್ತ ಪೇರಿಸಿತು. ಎರಡನೇ ದಿನ ಬೆಳಿಗ್ಗೆ ಇನಿಂಗ್ಸ್ ಆರಂಭಿಸಿದ ಪ್ರವಾಸಿ ಬಳಗಕ್ಕೆ ಆಕಾಶ್ ದೀಪ್ (10ಕ್ಕೆ2) ಬಲವಾದ ಪೆಟ್ಟುಕೊಟ್ಟರು. ಗಾಯದಿಂದ ಚೇತರಿಸಿಕೊಂಡು ಮರಳಿರುವ ಆಕಾಶ್ ತಮ್ಮ ಮೊದಲ ಓವರ್‌ನಲ್ಲಿ ಲೆಸೆಗೊ ಸೆಂಕೊವಾನೆ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದರು. ಇನ್ನೊಂದು ಬದಿಯಿಂದ ಮೊಹಮ್ಮದ್ ಸಿರಾಜ್ ಅವರು ಜುಬೇರ್ ಹಮ್ಜಾ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು.  

ADVERTISEMENT

ತೆಂಬಾ ಬವುಮಾ ಅವರಿಗೆ ಖಾತೆ ತೆರೆಯುವ ಅವಕಾಶವನ್ನು ಆಕಾಶ್ ನೀಡಲಿಲ್ಲ. ಎಲ್‌ಬಿ ಬಲೆಗೆ ಬೀಳಿಸಿದರು. ಆಗ ತಂಡದ ಸ್ಕೋರ್ ಕೇವಲ 12 ರನ್‌ಗಳಾಗಿತ್ತು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ಮಾರ್ಕೆಸ್‌ (134; 118ಎ, 4X17, 6X5) ಮತ್ತು ಆರಂಭಿಕ ಬ್ಯಾಟರ್ ಜೋರ್ಡಾನ್ ಹರ್ಮನ್ (26; 73ಎ) ವಿಕೆಟ್ ಪತನ ತಡೆದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 64 (107ಎ) ಸೇರಿಸಿದರು.

ಆದರೆ ಊಟದ ವಿರಾಮದ ನಂತರ ‘ಸ್ಥಳೀಯ ಹುಡುಗ’ ಪ್ರಸಿದ್ಧ ಕೃಷ್ಣ ಹಾಕಿದ ಎಸೆತವನ್ನು ಕೆಣಕಿದ ಜೋರ್ಡಾನ್ ಅವರು ಕೆ.ಎಲ್. ರಾಹುಲ್‌ಗೆ ಕ್ಯಾಚ್ ಆದರು. ಅದೇ ಓವರ್‌ನಲ್ಲಿ ಕಾನರ್‌ ಇಸ್ತೇಹುಜೆನ್ ಅವರನ್ನೂ ಪ್ರಸಿದ್ಧ ಎಲ್‌ಬಿ ಬಲೆಗೆ ಕೆಡವಿದರು. ಇದರ ನಂತರ ಉಳಿದ ಬೌಲರ್‌ಗಳು ತಮ್ಮ ದಾಳಿಯನ್ನು ಮತ್ತಷ್ಟು ಮೊನಚುಗೊಳಿಸಿದರು. ವಿಕೆಟ್‌ಗಳು ಉರುಳಲಾರಂಭಿಸಿದವು. 

ಆದರೆ ಮಾರ್ಕೆಸ್ ತಮ್ಮ ಬೀಸಾಟವನ್ನು ಮತ್ತಷ್ಟು ಹೆಚ್ಚಿಸಿದರು. ಸಿರಾಜ್ ಅವರ ಒಂದೇ ಓವರ್‌ನಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್ ಹೊಡೆದರು. 99 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಆದರೂ ತಂಡದ ಇನಿಂಗ್ಸ್ ಹಿನ್ನಡೆ ತಪ್ಪಿಸಲು ಅವರಿಗೆ ಸಾಧ್ಯವಾಗಲಿಲ್ಲ. 

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ ಎ: 77.1 ಓವರ್‌ಗಳಲ್ಲಿ 255. ದಕ್ಷಿಣ ಆಫ್ರಿಕಾ ಎ: 47.3 ಓವರ್‌ಗಳಲ್ಲಿ 221 (ಜೋರ್ಡಾನ್ ಹರ್ಮನ್ 26, ಮಾರ್ಕೆಸ್ ಏಕರ್ಮನ್ 134, ಪ್ರೆರಲನ್ ಸುಬ್ರಾಯನ್ 20, ಮೊಹಮ್ಮದ್ ಸಿರಾಜ್ 61ಕ್ಕೆ2, ಆಕಾಶ್ ದೀಪ್ 28ಕ್ಕೆ2, ಪ್ರಸಿದ್ಧಕೃಷ್ಣ 35ಕ್ಕೆ3)  ಎರಡನೇ ಇನಿಂಗ್ಸ್: ಭಾರತ ಎ: 24 ಓವರ್‌ಗಳಲ್ಲಿ 3ಕ್ಕೆ78 (ಕೆ.ಎಲ್. ರಾಹುಲ್ ಬ್ಯಾಟಿಂಗ್ 26, ಸಾಯಿ ಸುದರ್ಶನ್ 23, ದೇವದತ್ತ ಪಡಿಕ್ಕಲ್ 24, ಒಕುಲೆ ಸಿಲೆ 28ಕ್ಕೆ2, ಟಿಯಾನ್ ವ್ಯಾನ್ ವುರೆನ್ 15ಕ್ಕೆ1)  

ಬೆಂಗಳೂರಿನ ಹೊರವಲಯದಲ್ಲಿರುವ ಬಿಸಿಸಿಐ–ಸಿಒಇ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯದಲ್ಲಿ ಗುರುವಾರ ಭಾರತ ಎ ವಿರುದ್ಧ ಆಫ್ರಿಕಾ ಎ ತಂಡದ ಮಾರ್ಕಸ್ ಅಕ್ಮ್ಯಾನ್ ಶತಕ ಹೊಡೆದು ಸಂಭ್ರಮಿಸಿದರು. . ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.