ಚೆನ್ನೈ: ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪ್ರತಿನಿಧಿಸುವ ಶಿವಂ ದುಬೆ ಅವರು ಉದಯೋನ್ಮುಖ ಅಥ್ಲೀಟ್‌ಗಳಿಗೆ ನೆರವಿನ ಹಸ್ತ ಚಾಚಿದ್ದಾರೆ. ತಮಿಳುನಾಡಿನ 10 ಮಂದಿ ಉದಯೋನ್ಮುಖ ಅಥ್ಲೀಟ್‌ಗಳಿಗೆ ತಲಾ ₹70 ಸಾವಿರ ಪ್ರೋತ್ಸಾಹಧನ ನೀಡುವುದಾಗಿ ದುಬೆ ಘೋಷಿಸಿದ್ದಾರೆ.
ತಮಿಳುನಾಡು ಕ್ರೀಡಾ ಪತ್ರಕರ್ತರ ಸಂಘವು ಆಯೋಜಿಸಿದ್ದ ಕ್ರೀಡಾಪಟುಗಳಿಗೆ ಪ್ರಶಸ್ತಿ ಮತ್ತು ಸ್ಕಾಲರ್‌ಷಿಪ್ ಪ್ರದಾನ ಕಾರ್ಯಕ್ರಮದಲ್ಲಿ ದುಬೆ ಮಾತನಾಡಿದರು. ಸಂಘವು ಕ್ರೀಡಾಪಟುಗಳಿಗೆ ತಲಾ ₹ 30 ಸಾವಿರ ಸ್ಕಾಲರ್‌ಷಿಪ್ ನೀಡಿ ಗೌರವಿಸಿತು. ಇದಲ್ಲದೇ ದುಬೆ ಪ್ರತ್ಯೇಕವಾಗಿ ₹70 ಸಾವಿರ ನೀಡುವುದಾಗಿ ಘೋಷಿಸಿದರು.
‘ನಮ್ಮ ತಂಡವು ಇರುವ ಹೋಟೆಲ್‌ನಿಂದ ಈ ಕಾರ್ಯಕ್ರಮದ ತಾಣಕ್ಕೆ ಬರುವ ಹಾದಿಯಲ್ಲಿ ಡಾ. ಬಾಬಾ (ಟಿಎನ್‌ಸಿಎ ಕಾರ್ಯದರ್ಶಿ) ಅವರು ಹೇಳಿದ ಮಾತು ನನ್ನ ಗಮನ ಸೆಳೆಯಿತು. ಯುವ ಅಥ್ಲೀಟ್‌ಗಳಿಗೆ ಪ್ರೋತ್ಸಾಹ ನೀಡಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂಬ ವಿಷಯ ತಿಳಿಸಿದರು. ₹ 30 ಸಾವಿರ ಸಣ್ಣ ಮೊತ್ತದಂತೆ ಕಾಣಬಹುದು. ಆದರೆ ಅದನ್ನು ಪಡೆದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಚಿಕ್ಕ ವಯಸ್ಸಿನಲ್ಲಿ ಪ್ರತಿಯೊಂದು ಪೈಸೆಯ ಗೌರವವೂ ದೊಡ್ಡದೇ. ಅದರಿಂದ ಪ್ರೇರಣೆಗೊಂಡು ದೊಡ್ಡ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದು ದುಬೆ ಹೇಳಿದರು.
ಕಾರ್ಯಕ್ರಮದಲ್ಲಿ ಪಿ.ಬಿ. ಅಭಿನಂದನ್ (ಟೇಬಲ್ ಟೆನಿಸ್), ಕೆ.ಎಸ್. ವೆನಿಸಾ ಶ್ರೀ (ಆರ್ಚರಿ), ಮುತ್ತುಮೀನಾ ವೆಲ್ಲಾಸಾಮಿ (ಪ್ಯಾರಾ ಅಥ್ಲೆಟಿಕ್ಸ್), ಶಮೀನಾ ರಿಯಾಜ್ (ಸ್ಕ್ವಾಷ್), ಆರ್.ಕೆ. ಜಯಂತ್, ಎಸ್. ನಂದನ್ (ಇಬ್ಬರೂ ಕ್ರಿಕೆಟ್), ಪಿ. ಕಮಲಿ (ಸರ್ಫಿಂಗ್), ಆರ್. ಅಭಿನಯ, ಆರ್.ಸಿ. ಜಿತಿನ್ ಅರ್ಜುನನ್ (ಇಬ್ಬರೂ ಅಥ್ಲೆಟಿಕ್ಸ್), ಎ. ತಕ್ಷಾಂತ್ (ಚೆಸ್).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.