ADVERTISEMENT

ಆಸ್ಟ್ರೇಲಿಯಾ ಏಕದಿನ ಸರಣಿಗೆ ರೋ-ಕೊ: ಬುಮ್ರಾ-ಗಿಲ್‌ಗೆ ವಿಶ್ರಾಂತಿ ಸಾಧ್ಯತೆ

ಪಿಟಿಐ
Published 4 ಅಕ್ಟೋಬರ್ 2025, 7:17 IST
Last Updated 4 ಅಕ್ಟೋಬರ್ 2025, 7:17 IST
ಭಾರತದ ತಂಡದ ವಿರಾಟ್‌ ಕೊಹ್ಲಿ ಮತ್ತು ರೋಹಿತ್ ಶರ್ಮಾ
ಭಾರತದ ತಂಡದ ವಿರಾಟ್‌ ಕೊಹ್ಲಿ ಮತ್ತು ರೋಹಿತ್ ಶರ್ಮಾ   

ನವದೆಹಲಿ: ಪರ್ತ್‌ನಲ್ಲಿ‌ ಅಕ್ಟೋಬರ್ 19ರಿಂದ ಪ್ರಾರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದ್ದು, ಈ ಇಬ್ಬರು ಆಸ್ಟ್ರೇಲಿಯಾ ಪ್ರವಾಸಕ್ಕೆ ವಿಮಾನ ಏರಲು ಸಿದ್ಧರಾಗಿದ್ದಾರೆ. ಇವರನ್ನು ಹೊರತುಪಡಿಸಿ ಟೀಂ ಇಂಡಿಯಾದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ.

ಆಸಿಸ್ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿ, ಅಹಮದಾಬಾದ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೂರನೇ ದಿನ (ಶನಿವಾರ) ಸಭೆ ಸೇರುವ ಸಾಧ್ಯತೆಯಿದೆ. ಆದರೆ ಇಂದೇ ತಂಡ ಘೋಷಣೆ ಮಾಡ್ತಾರಾ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಹಾರ್ದಿಕ್ ಪಾಂಡ್ಯ (ಕ್ವಾಡ್ರೈಸ್ಪ್ಸ್ ಸ್ನಾಯು ಸೆಳೆತ) ಮತ್ತು ರಿಷಭ್ ಪಂತ್ (ಪಾದದ ಮುರಿತ) ಲಭ್ಯವಿರುವುದಿಲ್ಲ ಎಂದು ತಿಳಿದು ಬಂದಿದೆ.

ಇದರ ಜೊತೆಗೆ ಏಷ್ಯಾ ಕಪ್ ಆಡಿದ ಕೇವಲ ಮೂರು ದಿನಗಳಲ್ಲಿ ಆರಂಭವಾಗಿರುವ ಎರಡು ಟೆಸ್ಟ್ ಸರಣಿಯನ್ನು ಆಡುತ್ತಿರುವ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಕೂಡ ತಮ್ಮ ದೇಹದ ಬಗ್ಗೆ ಕಾಳಜಿ ವಹಿಸಬೇಕಾಗಿರುವುದರಿಂದ ಏಕದಿನ ಅಥವಾ ಟಿ20 ಅಥವಾ ಎರಡರಿಂದಲೂ ವಿಶ್ರಾಂತಿ ಪಡೆಯಲು ಆಯ್ಕೆದಾರರನ್ನು ಕೇಳಿಕೊಳ್ಳುವ ಸಾಧ್ಯತೆ ಇದೆ.

ADVERTISEMENT

ಇವರ ಜೊತೆಗೆ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ ಅವರು ಕೂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ವಿಶ್ರಾಂತಿ ಬಯಸಿ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ. ಅವರು ಸದ್ಯ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ 2ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದರೂ ಕೂಡ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಪ್ರಮುಖ ಆಟಗಾರರಾಗಿರುವುದರಿಂದ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ.

ಮಾರ್ಚ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಗೆಲುವಿನ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ 7 ತಿಂಗಳ ಕಾಲ ತಂಡದಿಂದ ಹೊರಗುಳಿದಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ತಂಡಕ್ಕೆ ವಾಪಾಸ್ಸಾಗಲು ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ರೋಹಿತ್ ಶರ್ಮಾ ಅವರನ್ನು ಏಕದಿನ ತಂಡದ ನಾಯಕತ್ವದಲ್ಲಿ ಮುಂದುವರೆಸುವ ಸಾಧ್ಯತೆ ಇದ್ದು, ಅವರು ಬ್ಯಾಟಿಂಗ್‌ನತ್ತ ಗಮನಹರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.