ಜಸ್‌ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ
ದುಬೈ: ಬಾಂಗ್ಲಾದೇಶ ತಂಡ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಸೋಲಿಸಲು 9 ಪಂದ್ಯಗಳವರೆಗೆ ಕಾಯಬೇಕಾಯಿತು. ದೆಹಲಿಯಲ್ಲಿ 2019ರ ನವೆಂಬರ್‌ನಲ್ಲಿ ನಡೆದ ಆ ಪಂದ್ಯದಲ್ಲಿ ಬಾಂಗ್ಲಾ ಜಯಗಳಿಸಿತ್ತು. ಆದರ ನಂತರದ ಪಂದ್ಯಗಳಲ್ಲೆಲ್ಲಾ ಮತ್ತೆ ಭಾರತದ್ದೇ ದಂಡಯಾತ್ರೆ.
16–1 ಗೆಲುವಿನ ದಾಖಲೆ, ಅದರಲ್ಲೂ ಕೊನೆಯ ಸಲ– 2024ರ ಅಕ್ಟೋಬರ್‌ನಲ್ಲಿ ತವರಿನಲ್ಲಿ ಮೂರು ಪಂದ್ಯಗಳಲ್ಲಿ ಭರ್ಜರಿ ಗೆಲುವು. ಈ ಅಂಕಿಅಂಶಗಳು ಬಾಂಗ್ಲಾದೇಶ ವಿರುದ್ಧ ಭಾರತ ತಂಡದ ಪ್ರಶ್ನಾತೀತ ಆಧಿಪತ್ಯಕ್ಕೆ ಕನ್ನಡಿಯಾಗಿದೆ. ಕೊನೆಯ ಬಾರಿ ಹೈದರಾಬಾದಿನಲ್ಲಿ ಇವೆರಡು ತಂಡಗಳು ಮುಖಾಮುಖಿಯಾದಾಗ ಸೂರ್ಯಕುಮಾರ್ ಯಾದವ್ ಸಾರಥ್ಯದ ಪಡೆ ಆಕ್ರಮಣಕಾರಿಯಾಗಿ ಆಡಿ 6 ವಿಕೆಟ್‌ಗೆ 297 ರನ್ ಕಲೆಹಾಕಿತ್ತು. ಇದು ಚುಟುಕು ಕ್ರಿಕೆಟ್‌ನಲ್ಲಿ ಭಾರತದ ಅತ್ಯಧಿಕ ಮೊತ್ತ. ಸಂಜು ಸ್ಯಾಮ್ಸನ್ ಆ ಇನಿಂಗ್ಸ್‌ನಲ್ಲಿ ಬಿರುಸಿನ 111 ರನ್ ಸಿಡಿಸಿದ್ದರು.
ಬುಧವಾರ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಎರಡು ತಂಡಗಳು ಸೂಪರ್ ಫೋರ್ ಹಂತದಲ್ಲಿ ಮುಖಾಮುಖಿಯಾಗಲಿವೆ. ಸೂಪರ್ ಫೋರ್‌ನಲ್ಲಿ ಈ ಎರಡೂ ತಂಡಗಳು ಅಜೇಯವಾಗಿವೆ. ‘ಬಿ’ ಗುಂಪಿನಲ್ಲಿ ಲಂಕಾ ಕೈಲಿ ಅನುಭವಿಸಿದ ಸೋಲಿಗೆ ಬಾಂಗ್ಲಾ ತಂಡ ಸೂಪರ್‌ಫೋರ್‌ನಲ್ಲಿ ಬಾಕಿ ತೀರಿಸಿದೆ. ಇದಾಗಿ 24 ಗಂಟೆಗಳ ತರುವಾಯ ಭಾರತವು, ಪಾಕಿಸ್ತಾನ ತಂಡದ ಮೇಲೆ ತನ್ನ ಆಧಿಪತ್ಯ ಮುಂದುವರಿಸಿತು.
ಬಾಂಗ್ಲಾದೇಶ ವಿರುದ್ಧ ಭಾರತದ ಗೆಲುವಿನ ದಾಖಲೆ ಅಮೋಘವಾಗಿ ಕಾಣಿಸುತ್ತಿದೆ. ಆದರೆ ಹಲವು ಬಾರಿ ಬಾಂಗ್ಲಾದೇಶ ತೀವ್ರ ಹೋರಾಟ ಪ್ರದರ್ಶಿಸಿದೆ. ನಿರ್ಣಾಯಕ ಗಳಿಗೆಯಲ್ಲಿ ಎಡವಿ ಸೋಲನುಭವಿಸಿದೆ. ಬೆಂಗಳೂರು (2016) ಮತ್ತು ಅಡಿಲೇಡ್ (2022) ನಲ್ಲಿ ನಡೆದ ವಿಶ್ವಕಪ್ ಪಂದ್ಯಗಳು ಇದಕ್ಕೆ ನಿದರ್ಶನ. ಅನುಭವ ಮತ್ತು ಒತ್ತಡದ ಸಂದರ್ಭವನ್ನು ಎದುರಿಸಿ ನಿಲ್ಲುವ ಸಾಮರ್ಥ್ಯ ಆಗ ಭಾರತದ ನೆರವಿಗೆ ಬಂದಿತ್ತು. ಅದರಲ್ಲೂ ಕೊಲಂಬೊದಲ್ಲಿ ನಡೆದ ನಿದಾಹಾಸ್ ಟ್ರೋಫಿಯ ಫೈನಲ್‌ನಲ್ಲಿ ಸೌಮ್ಯ ಸರ್ಕಾರ್ ಅವರ ಕೊನೆಯ ಎಸೆತದಲ್ಲಿ ದಿನೇಶ್ ಕಾರ್ತಿಕ್ ಎಕ್ಸ್‌ಟ್ರಾ ಕವರ್ ಮೇಲೆ ಎತ್ತಿದ ಸಿಕ್ಸರ್ ಮರೆಯುವ ಹಾಗೇ ಇಲ್ಲ. ಆ ಹೊಡೆತವು, ಭಾರತಕ್ಕೆ ಖಚಿತವಾದಂತೆ ಕಂಡಿದ್ದ ಸೋಲನ್ನು ಗೆಲುವನ್ನಾಗಿ ಪರಿವರ್ತಿಸಿತು.
ಬಾಂಗ್ಲಾದೇಶ ಈಗ ಹಿಂದಿಗಿಂತ ಉತ್ತಮವಾಗಿ ಆಡುತ್ತಿದೆ. ನಾಯಕ ಲಿಟನ್ ದಾಸ್ ಅವರು ಭರವಸೆಯಿಡಬಲ್ಲ ಕೆಲವು ಅನುಭವಿಗಳು ತಂಡದಲ್ಲಿದ್ದಾರೆ. ಮುಸ್ತಫಿಝುರ್ ರೆಹಮಾನ್, ತಸ್ಕಿನ್ ಅಹ್ಮದ್ ಮತ್ತು ಮಹೆದಿ ಹಸನ್ ಅವರಲ್ಲಿ ಒಳಗೊಂಡಿದ್ದಾರೆ. ಆದರೆ ತಂಡದಲ್ಲಿ ಉತ್ಸಾಹಿ ಯುವಮುಖಗಳಿವೆ. ಆದರೆ ಭಾರತದಂಥ ಪ್ರಬಲ ತಂಡವನ್ನು ಅವರೆಲ್ಲ ತಡೆದುನಿಲ್ಲಿಸುವರೇ ಎಂಬುದು ಪ್ರಶ್ನೆ.
ಅಬ್ಬರಿಸದ ಬೂಮ್ರಾ:
ಈ ಟೂರ್ನಿಯ ಏಕೈಕ ಅಜೇಯ ತಂಡವಾಗಿರುವ ಭಾರತಕ್ಕೆ ಇದುವರೆಗಿನ ನಾಲ್ಕು ಪಂದ್ಯಗಳಲ್ಲಿ ಗಂಭೀರ ಸವಾಲು ಎದುರಾಗಿಲ್ಲ. ಸುಧಾರಣೆಗೆ ಸಾಕಷ್ಟು ಅವಕಾಶವಿದೆ ಎಂಬುದೂ ನಿಜ. ಭಾರತ ತಂಡವು ಜಸ್‌ಪ್ರೀತ್ ಬೂಮ್ರಾ ಅವರ ನಿರ್ವಹಣೆಯ ಮೇಲೆ ಕಣ್ಣಿಡಲಿದೆ. 2024ರ ಟಿ20 ವಿಶ್ವಕಪ್ ಗೆದ್ದ ನಂತರ ಮೊದಲ ಬಾರಿ ಈ ಮಾದರಿಯಲ್ಲಿ ಆಡುತ್ತಿರುವ ಬೂಮ್ರಾ ಎಂದಿನ ಲಯದಲ್ಲಿದ್ದಂತೆ ಕಾಣುತ್ತಿಲ್ಲ. ಎಸೆತಗಳ ಮೇಲೆ ಅವರು ಸಾಧಿಸುತ್ತಿದ್ದ ನಿಯಂತ್ರಣ ಇಲ್ಲಿ ಕಾಣುತ್ತಿಲ್ಲ. ಬ್ಯಾಟರ್‌ಗಳು ಆಕ್ರಮಣಕಾರಿ ಆದಾಗ ತಕ್ಷಣವೇ ವಿಕೆಟ್ ಪಡೆಯಲೂ ಆಗಿಲ್ಲ. ಪಾಕಿಸ್ತಾನ ತಂಡದ ಆರಂಭ ಆಟಗಾರ ಸಾಹಿಬ್‌ಝಾದ ಫರ್ಹಾನ್ ಅವರು ಎರಡೂ ಬಾರಿ ಅವರೆದುರು ಆಕ್ರಮಣದ ಆಟವಾಡಿದ್ದರು.
ಬೂಮ್ರಾ 11 ಓವರುಗಳಲ್ಲಿ ಕೇವಲ ಮೂರು ವಿಕೆಟ್ ಪಡೆದಿದ್ದಾರೆ. ಅದಕ್ಕಿಂತ ಗಮನಾರ್ಹ ಎಂದರೆ ಅವರು ಓವರೊಂದಕ್ಕೆ 8.36 ರನ್ ತೆತ್ತು ಧಾರಾಳಿಯಾಗಿರುವುದು. ಭಾನುವಾರ ಅವರು 34 ರನ್ ನೀಡಿದ್ದರು. ಪವರ್‌ಪ್ಲೇಯಲ್ಲೂ ಪರಿಣಾಮಕಾರಿ ಆಗಿರಲಿಲ್ಲ. ಯುಎಇಯ ಆರಂಭ ಆಟಗಾರ ಅಲಿಶಾನ್ ಶರಾಫು ಅವರನ್ನು ಔಟ್ ಮಾಡಿದ ಒಂದು ಯಾರ್ಕರ್ ಬಿಟ್ಟರೆ, ಎಂದಿನ ರೀತಿಯ ಮೊನಚು ಕಾಣಸಿಲ್ಲ. ಟೂರ್ನಿಯು ಕ್ಲೈಮಾಕ್ಸ್ ಹಂತ ತಲುಪಿರುವಾಗ ತಂಡವು ಬೂಮ್ರಾ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಿದೆ. ಅವರು ಯಶ ಪಡೆದರೆ, ಮೂವರು ಸ್ಪಿನ್ನರ್‌ಗಳ ಮೇಲಿನ ಭಾರ ತಗ್ಗಲಿದೆ.
ಬೂಮ್ರಾ ಅವರ ಹಾಗೆ ವರುಣ್ ಚಕ್ರವರ್ತಿ ಸಹ ವಿಕೆಟ್ ಗಳಿಕೆಯಲ್ಲಿ ಹಿಂದೆಬಿದ್ದಿದ್ದಾರೆ. ಅಗ್ರಮಾನ್ಯ ಟಿ20 ಬೌಲರ್‌ನ ಎರಡು ಯಶಸ್ಸು, 30ಕ್ಕಿಂತ ಹೆಚ್ಚಿನ ಸ್ಟ್ರೈಕ್‌ರೇಟ್‌ನಲ್ಲಿ ಬಂದಿದೆ. ಆದರೆ ಅವರು ಓವರಿಗೆ 5.30 ರನ್‌ಅಷ್ಟೇ ಕೊಟ್ಟು ಮಿತವ್ಯಯಿಯಾಗಿದ್ದಾರೆ. ಮಧ್ಯಮ ಹಂತದ ಓವರುಗಳಲ್ಲಿ ಅವರು ಕುಲದೀಪ್ ಯಾದವ್ ಜೊತೆ ವಿಕೆಟ್ ಕೀಳುವ ಬೌಲರ್ ಆಗಿ ಹೆಸರು ಮಾಡಿದವರು. ಹೀಗಾಗಿ ಬುಧವಾರದ ಪಂದ್ಯದಲ್ಲಿ ಬೂಮ್ರಾ ಮತ್ತು ಚಕ್ರವರ್ತಿ ಅವರ ಬೌಲಿಂಗ್ ಮೇಲೆ ಭಾರತ ಹೆಚ್ಚಿನ ಗಮನವಿಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.