ADVERTISEMENT

4 ರಾಷ್ಟ್ರಗಳ ಟೂರ್ನಿಗೆ ಸಿದ್ಧತೆ: ಐಸಿಸಿಗೆ ಮನವಿ ಮಾಡಲಿವೆ ಬಿಸಿಸಿಐ, ಇಸಿಬಿ, ಸಿಎ

ಏಜೆನ್ಸೀಸ್
Published 24 ಡಿಸೆಂಬರ್ 2019, 6:43 IST
Last Updated 24 ಡಿಸೆಂಬರ್ 2019, 6:43 IST
   

ಚೆನ್ನೈ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ), ಇಂಗ್ಗೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಮತ್ತು ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ನಾಲ್ಕು ರಾಷ್ಟ್ರಗಳ ‘ಸೂಪರ್ ಸೀರೀಸ್‌’ ಟೂರ್ನಿ ಆಯೋಜನೆಯ ಯೋಜನೆಯಲ್ಲಿವೆ. ಈ ಸಂಬಂಧ ಅನುಮತಿ ಕೋರಿಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಎದುರು ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಿವೆ.

ಕಳೆದವಾರ ಲಂಡನ್‌ ಪ್ರವಾಸ ಕೈಗೊಂಡಿದ್ದ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಕಾರ್ಯದರ್ಶಿ ಜಯ್‌ ಶಾ ಹಾಗೂ ಖಜಾಂಚಿ ಅರುಣ್‌ ಧುಮಾಲ್‌ ಅವರು ಇಸಿಬಿ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಇಸಿಬಿ, ‘ಕ್ರೀಡೆಗೆ ಸಂಬಂಧಿಸಿದ ಹಲವು ವಿಚಾರಗಳ ಚರ್ಚೆಗಾಗಿ ಕ್ರಿಕೆಟ್‌ ಆಡುವ ಪ್ರಮುಖ ದೇಶಗಳ ನಾಯಕರೊಂದಿಗೆ ನಿಯಮಿತವಾಗಿ ಸಭೆ ನಡೆಸುತ್ತಿರುತ್ತೇವೆ. ಬಿಸಿಸಿಐ ಜೊತೆಗಿನ ಕಳೆದ ಸಭೆಯಲ್ಲಿ‘ಸೂಪರ್ ಸೀರೀಸ್‌’ ನಡೆಸಬಹುದೇ ಎಂಬ ಚರ್ಚೆ ನಡೆಯಿತು. ಹೀಗಾಗಿ ನಾವು ಈ ಯೋಜನೆಯನ್ನು ಅಭಿವೃದ್ಧಿಪಡಿಸಲು ಐಸಿಸಿಯ ಇತರ ಸದಸ್ಯ ರಾಷ್ಟ್ರಗಳೊಂದಿಗೂ ಮಾತನಾಡಲು ಸಿದ್ಧರಿದ್ದೇವೆ’ ಎಂದು ತಿಳಿಸಿದೆ.

ADVERTISEMENT

ಮಾತುಕತೆಗೆ ಸಂಬಂಧಿಸಿದಂತೆ ಕೋಲ್ಕತ್ತದಲ್ಲಿ ಮಾತನಾಡಿರುವ ಗಂಗೂಲಿ, ‘ಭಾರತ, ಇಂಗ್ಲೆಂಡ್‌, ಆಸ್ಟ್ರೇಲಿಯಾ ಜೊತೆಗೆ ಮತ್ತೊಂದು ಪ್ರಮುಖ ದೇಶವು 2021ರಲ್ಲಿ ಆರಂಭವಾಗಲಿರುವ ಸೂಪರ್ ಸೀರೀಸ್‌ನಲ್ಲಿ ಭಾಗವಹಿಸಲಿದೆ. ಈ ಸರಣಿಯ ಮೊದಲ ಆವೃತ್ತಿಯನ್ನು ಭಾರತದಲ್ಲಿ ಆಯೋಜಿಸಲು ಯೋಜಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಮುಂದಿನ ತಿಂಗಳು ಭಾರತ–ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್ ಸರಣಿ ವೇಳೆ ಕ್ರಿಕೆಟ್‌ ಆಸ್ಟ್ರೇಲಿಯಾ ಸಿಇಒ ಕೆವಿನ್‌ ರಾಬರ್ಟ್ಸ್‌ ಜೊತೆಗೂ ಮಾತುಕತೆ ನಡೆಯಲಿದೆ. ಒಂದು ವೇಳೆ ಅಂದುಕೊಂಡಂತೆ ನಡೆದರೆ 2021ರ ಟಿ20 ವಿಶ್ವಕಪ್‌ಗೂ ಮೊದಲು ಈ ಟೂರ್ನಿ ನಡೆಯಲಿದೆ.

ಅಕ್ಟೋಬರ್‌ನಲ್ಲಿ ನಡೆದ ಸಭೆಯಲ್ಲಿ,ಎಂಟು ವರ್ಷದ ಅವಧಿಯ (2023–2031ರವರೆಗೆ) ‘ಸದಸ್ಯರ ಪಾಲ್ಗೊಳ್ಳುವಿಕೆಯ ಒಪ್ಪಂದ ಯೋಜನೆ ರೂಪಿಸುವ ಸಂಬಂಧ ಐಸಿಸಿ ಪ್ರಸ್ತಾಪಿಸಿತ್ತು. ಅದರಂತೆಪ್ರತಿವರ್ಷವೂ ಒಂದು ಜಾಗತಿಕ ಟೂರ್ನಿ, ಎರಡು ಏಕದಿನ ವಿಶ್ವಕಪ್‌, ನಾಲ್ಕು ಟಿ20 ವಿಶ್ವಕಪ್‌ ಮತ್ತು ಎರಡು ಏಕದಿನ ಟೂರ್ನಿಗಳನ್ನು ಆಯೋಜಿಸಲು ಉದ್ದೇಶಿಸಿತ್ತು. ಆದರೆ, ಇದನ್ನು ವಿರೋಧಿಸಿದ್ದಬಿಸಿಸಿಐ ಮತ್ತು ಇಸಿಬಿ, ಈ ಯೋಜನೆಯು ದ್ವಿಪಕ್ಷೀಯ ಸರಣಿಗಳ ಮೇಲೆ ಮತ್ತು ಮಂಡಳಿಗಳ ಆದಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರತಿಪಾದಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.