ADVERTISEMENT

ಮೊದಲ ಏಕದಿನ ಪಂದ್ಯ: ಚೆಪಾಕ್‌ನಲ್ಲಿ ಚಕ್ರಾಧಿಪತ್ಯ ಸ್ಥಾಪಿಸುವುದೇ ಭಾರತ?

ಕೊಹ್ಲಿ ಬಳಗಕ್ಕೆ ಕೆರಿಬಿಯನ್ನರ ಸವಾಲು; ಕರ್ನಾಟಕದ ಮಯಂಕ್‌ ಅಗರವಾಲ್‌ಗೆ ಅವಕಾಶ ಸಾಧ್ಯತೆ

ಪಿಟಿಐ
Published 14 ಡಿಸೆಂಬರ್ 2019, 22:00 IST
Last Updated 14 ಡಿಸೆಂಬರ್ 2019, 22:00 IST
ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ   

ಚೆನ್ನೈ: ಮಾದರಿ ಯಾವುದೇ ಇರಲಿ, ತವರಿನ ಅಂಗಳದಲ್ಲಿ ತಾನೇ ಸಾಮ್ರಾಟ ಎಂಬುದನ್ನು ಈ ಋತುವಿನಲ್ಲೂ ಸಾಬೀತುಪಡಿಸಿರುವ ಭಾರತ ತಂಡ ಈಗ ಮತ್ತೊಂದು ಸರಣಿ ಜಯದ ಖುಷಿಯೊಂದಿಗೆ ಹೊಸ ಸಂವತ್ಸರಕ್ಕೆ ಕಾಲಿಡಲು ಕಾತರವಾಗಿದೆ.

ವೆಸ್ಟ್‌ ಇಂಡೀಸ್‌ ವಿರುದ್ಧ ಈಗಾಗಲೇ ಟ್ವೆಂಟಿ–20 ಸರಣಿ ಜಯಿಸಿ ಬೀಗುತ್ತಿರುವ ವಿರಾಟ್‌ ಕೊಹ್ಲಿ ಬಳಗ, ಈಗ ಅದೇ ತಂಡದ ಎದುರು ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಈ ಋತುವಿನಲ್ಲಿ ಭಾರತ ತಂಡ ತವರಿನಲ್ಲಿ ಆಡುತ್ತಿರುವ ಕೊನೆಯ ಸರಣಿ ಇದಾಗಿದೆ.

ಉಭಯ ತಂಡಗಳ ನಡುವಣ ಮೊದಲ ಹಣಾಹಣಿಗೆ ಇಲ್ಲಿನ ಚೆಪಾಕ್‌ ಅಂಗಳದಲ್ಲಿ ವೇದಿಕೆ ಸಿದ್ಧಗೊಂಡಿದೆ. ಭಾನುವಾರ ನಡೆಯುವ ಈ ಪೈಪೋಟಿ ಯಲ್ಲಿ ಭಾರತವೇ ಗೆಲ್ಲುವ ನೆಚ್ಚಿನ ತಂಡವೆನಿಸಿದೆ.

ADVERTISEMENT

ಆತಿಥೇಯರು ಬ್ಯಾಟಿಂಗ್‌ನಲ್ಲಿ ಬಲಾಢ್ಯರಾಗಿದ್ದಾರೆ. ಕೊಹ್ಲಿ ಜೊತೆಗೆ ಉಪನಾಯಕ ರೋಹಿತ್‌ ಶರ್ಮಾ ಮತ್ತು ಕರ್ನಾಟಕದ ಕೆ.ಎಲ್‌.ರಾಹುಲ್‌ ಅವರು ಟ್ವೆಂಟಿ–20 ಸರಣಿಯಲ್ಲಿ ರನ್‌ ಹೊಳೆ ಹರಿಸಿದ್ದರು.

ಅಮೋಘ ಲಯದಲ್ಲಿರುವ ರೋಹಿತ್‌ ಮತ್ತು ರಾಹುಲ್‌, ಈ ಪಂದ್ಯ ದಲ್ಲೂ ಮೋಡಿ ಮಾಡುವ ನಿರೀಕ್ಷೆ ಇದೆ. ಇವರು ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರೆ, ಅದರ ಮೇಲೆ ಕೊಹ್ಲಿ ‘ರನ್‌ ಸೌಧ’ ಕಟ್ಟಬಲ್ಲರು.

ನಾಲ್ಕನೇ ಕ್ರಮಾಂಕದಲ್ಲಿ ಯಾರು ಬ್ಯಾಟಿಂಗ್‌ಗೆ ಬರಬಹುದೆಂಬ ಕುತೂ ಹಲ ಮತ್ತೊಮ್ಮೆ ಗರಿಗೆದರಿದೆ. ಈ ಸ್ಥಾನಕ್ಕಾಗಿ ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ ಮತ್ತು ಶಿವಂ ದುಬೆ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ.

ಕರ್ನಾಟಕದ ಮನೀಷ್‌, ಈ ಬಾರಿಯ ವಿಜಯ್‌ ಹಜಾರೆ ಟ್ರೋಫಿ ಯಲ್ಲಿ ಒಂಬತ್ತು ಇನಿಂಗ್ಸ್‌ಗಳಿಂದ 525 ರನ್‌ ಬಾರಿಸಿದ್ದರು. ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ದಾಖಲಿಸಿದ್ದರು. ಮುಷ್ತಾಕ್‌ ಅಲಿ ಟ್ರೋಫಿಯಲ್ಲೂ ಪರಾಕ್ರಮ ಮೆರೆದಿದ್ದ ಮನೀಷ್‌ 314 ರನ್‌ಗಳನ್ನು ಕಲೆಹಾಕಿದ್ದರು. ಹೀಗಾಗಿ ಅವರ ಮೇಲೆ ತಂಡದ ಆಡಳಿತ ಮಂಡಳಿ ಭರವಸೆ ಇಟ್ಟು ಅವಕಾಶ ನೀಡಬಹುದು.

ಕೊಹ್ಲಿಗೆ ತಲೆಬಿಸಿಯಾಗಿರುವುದು ರಿಷಭ್‌ ಪಂತ್‌ ಅವರ ಫಾರ್ಮ್‌. 22 ವರ್ಷದ ಈ ಆಟಗಾರ ವೈಫಲ್ಯದ ಸುಳಿಯಲ್ಲಿ ಸಿಲುಕಿದ್ದಾರೆ. ರನ್‌ ಗಳಿಸಲು ಪರದಾಡುತ್ತಿರುವ ಅವರು ಕೀಪಿಂಗ್‌ನಲ್ಲೂ ಚುರುಕುತನ ತೋರುತ್ತಿಲ್ಲ. ಹೀಗಿದ್ದರೂ ಅವರಿಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆ ಇದೆ.

ಬೌಲಿಂಗ್‌ನಲ್ಲಿ ಆತಿಥೇಯರು ಇನ್ನಷ್ಟು ಪರಿಣಾಮಕಾರಿ ಸಾಮರ್ಥ್ಯ ತೋರಬೇಕಿದೆ. ಗಾಯದಿಂದಾಗಿ ಭುವನೇಶ್ವರ್‌ ಕುಮಾರ್‌ ಸರಣಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ವೇಗದ ಬೌಲಿಂಗ್‌ ವಿಭಾಗದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಬೇಕಾದ ಸವಾಲು ಈಗ ಮೊಹಮ್ಮದ್‌ ಶಮಿ ಮತ್ತು ದೀಪಕ್‌ ಚಾಹರ್‌ ಅವರ ಎದುರಿಗಿದೆ.

ಚೆಪಾಕ್‌ ಅಂಗಳವು ಸಾಂಪ್ರದಾಯಿ ಕವಾಗಿ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುವ ಕಾರಣ ಯಜುವೇಂದ್ರ ಚಾಹಲ್‌ ಮತ್ತು ಕುಲದೀಪ್‌ ಯಾದವ್‌ ಜೋಡಿಗೆ ಅವಕಾಶ ಸಿಗಬಹುದು.

ತಿರುಗೇಟು ನೀಡಲು ಕಾದಿರುವ ವಿಂಡೀಸ್‌: ಕೀರನ್‌ ಪೊಲಾರ್ಡ್‌ ಸಾರಥ್ಯದ ವೆಸ್ಟ್‌ ಇಂಡೀಸ್‌ ನಿಗದಿ ಓವರುಗಳಲ್ಲಿ ಕಡೆಗಣಿಸುವಂಥ ತಂಡವಲ್ಲ. ಈ ತಂಡದಲ್ಲೂ ಬ್ಯಾಟ್‌ ಬೀಸಬಲ್ಲ ಬಲಾಢ್ಯರಿದ್ದಾರೆ. ಎವಿನ್‌ ಲೂಯಿಸ್‌, ಶಿಮ್ರೊನ್‌ ಹೆಟ್ಮೆಯರ್‌, ನಿಕೋಲಸ್‌ ಪೂರನ್‌ ಮತ್ತು ನಾಯಕ ಪೊಲಾರ್ಡ್‌ ಅವರು ಭಾರತದ ಬೌಲರ್‌ಗಳ ಮೇಲೆ ಸವಾರಿ ಮಾಡಬಲ್ಲರು. ಆಲ್‌ರೌಂಡರ್‌ ರಾಸ್ಟನ್‌ ಚೇಸ್‌ ಮೇಲೂ ಭರವಸೆ ಇಡಬಹುದು.

ವೇಗದ ಬೌಲರ್‌ಗಳಾದ ಶೆಲ್ಡನ್‌ ಕಾಟ್ರೆಲ್‌, ಕೀಮೊ ಪಾಲ್‌ ಮತ್ತು ಜೇಸನ್‌ ಹೋಲ್ಡರ್‌ ಅವರು ಬೆಂಕಿ ಉಗುಳುವ ಎಸೆತಗಳ ಮೂಲಕ ಭಾರತದ ಬ್ಯಾಟ್ಸ್‌ಮನ್‌ಗಳಲ್ಲಿ ‘ಭಯ’ ಹುಟ್ಟಿಸಬಲ್ಲರು. ಹಾಗಾದಾಗ ಮಾತ್ರ ಪೊಲಾರ್ಡ್‌ ಪಡೆಯ ಗೆಲುವಿನ ಕನಸು ಸಾಕಾರಗೊಳ್ಳಬಹುದು.

ಮಳೆಯ ಆತಂಕ
ಚೆನ್ನೈಯಲ್ಲಿ ಎರಡು ದಿನಗಳಿಂದ ಮಳೆ ಸುರಿಯುತ್ತಿದೆ. ಹೀಗಾಗಿ ಭಾನುವಾರದ ಪಂದ್ಯದ ಮೇಲೆ ಆತಂಕದ ಕಾರ್ಮೋಡ ಕವಿದಿದೆ. ಇನ್ನೂ ಐದು ದಿನ ಮಳೆ ಬೀಳುವ ಸಂಭವ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

*
ರಿಷಭ್‌ ಪಂತ್‌ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌. ಹಿಂದೆ ಅನೇಕ ಟೂರ್ನಿಗಳಲ್ಲಿ ಚೆನ್ನಾಗಿ ಆಡಿದ್ದಾರೆ. ಅವರನ್ನು ತಂಡದಿಂದ ಹೊರಗಿಡುವ ಬಗ್ಗೆ ಯೋಚಿಸಿಲ್ಲ.
-ವಿಕ್ರಂ ರಾಥೋಡ್‌, ಭಾರತ ತಂಡದ ಬ್ಯಾಟಿಂಗ್‌ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.