ADVERTISEMENT

ಮತ್ತೆ ಕಣಕ್ಕಿಳಿದ ಸಚಿನ್, ಯುವಿ; ಶ್ರೀಲಂಕಾ ವಿರುದ್ಧ ಭಾರತಕ್ಕೆ ರೋಚಕ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಫೆಬ್ರುವರಿ 2025, 7:48 IST
Last Updated 23 ಫೆಬ್ರುವರಿ 2025, 7:48 IST
<div class="paragraphs"><p>ಇಂಡಿಯಾ ಮಾಸ್ಟರ್ಸ್ ಆಟಗಾರರ ಸಂಭ್ರಮ</p></div>

ಇಂಡಿಯಾ ಮಾಸ್ಟರ್ಸ್ ಆಟಗಾರರ ಸಂಭ್ರಮ

   

(ಚಿತ್ರ ಕೃಪೆ: X/@imlt20official)

ನವಿ ಮುಂಬೈ: ಚೊಚ್ಚಲ ಇಂಟರ್‌ನ್ಯಾಷನಲ್ ಮಾಸ್ಟರ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ನಾಯಕತ್ವದ ಇಂಡಿಯಾ ಮಾಸ್ಟರ್ಸ್ ತಂಡವು ಶ್ರೀಲಂಕಾ ಮಾಸ್ಟರ್ಸ್ ವಿರುದ್ಧ ನಾಲ್ಕು ರನ್ ಅಂತರದ ರೋಚಕ ಜಯ ಗಳಿಸಿದೆ.

ADVERTISEMENT

ನವಿ ಮುಂಬೈಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಡಿಯಾ ಮಾಸ್ಟರ್ಸ್, ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 222 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು.

ಮತ್ತೆ ಕಣಕ್ಕಿಳಿದ ಸಚಿನ್ ಎರಡು ಬೌಂಡರಿ ಗಳಿಸಿದಾದರೂ ಎಂಟು ಎಸೆತಗಳಲ್ಲಿ 10 ರನ್ ಗಳಿಸಿ ಔಟ್ ಆದರು.

ಸ್ಟುವರ್ಟ್ ಬಿನ್ನಿ ಭಾರತದ ಪರ ಟಾಪ್ ಸ್ಕೋರರ್ ಎನಿಸಿದರು. 31 ಎಸೆತಗಳಲ್ಲಿ 68 ರನ್ (7 ಸಿಕ್ಸರ್, 3 ಬೌಂಡರಿ) ಗಳಿಸಿ ಅಬ್ಬರಿಸಿದರು.

ಕೊನೆಯ ಹಂತದಲ್ಲಿ ಯೂಸುಫ್ ಪಠಾಣ್ ಕೇವಲ 22 ಎಸೆತಗಳಲ್ಲಿ (6 ಸಿಕ್ಸರ್, 3 ಬೌಂಡರಿ) ಅಜೇಯ 56 ರನ್ ಗಳಿಸಿ ಅಬ್ಬರಿಸಿದರು.

ಯುವರಾಜ್ ಸಿಂಗ್ ಸಹ 22 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿ (2 ಬೌಂಡರಿ, 2 ಸಿಕ್ಸರ್) ಗಮನ ಸೆಳೆದರು.

ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಬಿರುಸಿನ ಆರಂಭವನ್ನು ಪಡೆಯಿತು. ನಾಯಕ ಕುಮಾರ ಸಂಗಕ್ಕಾರ ಕೇವಲ 30 ಎಸೆತಗಳಲ್ಲಿ 51 ರನ್ (8 ಬೌಂಡರಿ, 1 ಸಿಕ್ಸರ್) ಗಳಿಸಿದರು.

ಲಹಿರು ತಿರಿಮಣ್ಣೆ (24), ಎ. ಗುಣರತ್ನೆ (37), ಜೀವನ್ ಮೆಂಡಿಸ್ (42) ಹಾಗೂ ಇಸುರು ಉದಾನ (23) ಉಪಯುಕ್ತ ಇನಿಂಗ್ಸ್ ಕಟ್ಟಿದರು. ಆದರೆ ನಾಲ್ಕು ರನ್ ಅಂತರದಿಂದ ಸೋಲೊಪ್ಪಿಕೊಂಡಿತು.

ಕೊನೆಯ ಓವರ್‌ನಲ್ಲಿ ಶ್ರೀಲಂಕಾ ಮಾಸ್ಟರ್ಸ್ ಗೆಲುವಿಗೆ ಒಂಬತ್ತು ರನ್‌ಗಳ ಅಗತ್ಯವಿತ್ತು. ಆದರೆ ಇಂಡಿಯಾ ಮಾಸ್ಟರ್ಸ್ ಪರ ಕೊನೆಯ ಓವರ್ ಎಸೆದ ಕರ್ನಾಟಕ ಅಭಿಮನ್ಯು ಮಿಥುನ್ ಕೇವಲ ನಾಲ್ಕು ಮಾತ್ರ ಬಿಟ್ಟುಕೊಟ್ಟು ಎರಡು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಈ ಮೊದಲು ಬಿರುಸಿನ ಅರ್ಧಶತಕ ಗಳಿಸಿದ ಸ್ಟುವರ್ಟ್ ಬಿನ್ನಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಬೌಲಿಂಗ್‌ನಲ್ಲಿ ಮಿಂಚಿದ ಇರ್ಫಾನ್ ಪಠಾಣ್ ಮೂರು ವಿಕೆಟ್ ಗಳಿಸಿದರು.

ಅಭಿಮಾನಿಗಳಿಗಂತೂ ಮತ್ತೆ ತಮ್ಮ ಮೆಚ್ಚಿನ ಆಟಗಾರರ ಆಟವನ್ನು ಕಣ್ತುಂಬಿಕೊಂಡರು. ಈ ಮಧ್ಯೆ ಯುವರಾಜ್ ಸಿಂಗ್ ಅವರ ಅದ್ಭುತ ಕ್ಯಾಚ್ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.