
ಶಶಿ ತರೂರ್
(ಪ್ರಜಾವಾಣಿ ಸಂಗ್ರಹ ಚಿತ್ರ)
ನವದೆಹಲಿ: 2026ರ ಐಸಿಸಿ ಟಿ20 ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ನಡುವೆ ಪಾಕಿಸ್ತಾನ ಕ್ರಿಕೆಟ್ ತಂಡ ಫೆಬ್ರುವರಿ 15ರಂದು ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದೆ. ಪಾಕಿಸ್ತಾನದ ಈ ನಿರ್ಧಾರದ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿವೆ. ಸದ್ಯ, ಇದೇ ವಿಚಾರವಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಉದ್ವಿಗ್ನತೆ ಗಮನಾರ್ಹವಾಗಿ ಹೆಚ್ಚುತ್ತಿರುವುದರ ಕುರಿತು ಪ್ರತಿಕ್ರಿಯೆ ನೀಡಿದ ಸಂಸದ ಶಶಿ ತರೂರ್, ಕ್ರೀಡೆಯನ್ನು ರಾಜಕೀಯದಿಂದ ದೂರವಿಡಬೇಕು ಎಂದು ಪ್ರತಿಪಾದಿಸಿದರು.
‘ಉಭಯ ದೇಶಗಳು ಕ್ರೀಡೆಯನ್ನು ಈ ರೀತಿ ರಾಜಕೀಯಗೊಳಿಸಿರುವುದು ಅತ್ಯಂತ ಅವಮಾನಕರ ಸಂಗತಿ. ಪ್ರಾಮಾಣಿಕವಾಗಿ ಹೇಳಬೇಕೆಂದರೆ. ಮುಸ್ತಫಿಜುರ್ (ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಫಿಜುರ್ ರೆಹಮಾನ್) ಅವರನ್ನು ಕೆಕೆಆರ್ ಫ್ರಾಂಚೈಸಿ ಐಪಿಎಲ್‌ನಿಂದ ಹೊರಹಾಕಬಾರದಿತ್ತು ಎಂದು ನಾನು ಭಾವಿಸುತ್ತೇನೆ’ ಎಂದರು.
‘ಕ್ರೀಡೆಯಲ್ಲಿ ರಾಜಕೀಯದ ಒಳನುಸುಳುವಿಕೆ ದುರದೃಷ್ಟಕರ. ಮುಸ್ತಫಿಜುರ್ ಪ್ರಕರಣದ ಕುರಿತು ಬಾಂಗ್ಲಾದೇಶದ ಪ್ರತಿಕ್ರಿಯೆ ಕೂಡ ಅತಿರೇಕವಾಗಿತ್ತು ಎಂದು ನಾನು ಭಾವಿಸುತ್ತೇನೆ. ಆದರೆ ಬಾಂಗ್ಲಾದೇಶದ ವರ್ತನೆಯನ್ನು ಪ್ರತಿರೋದವೆಂದು ಪರಿಗಣಿಸಬಹುದು. ಪಾಕಿಸ್ತಾನವು ಬಾಂಗ್ಲಾದೇಶದ ಜೊತೆ ತನ್ನ ಒಗ್ಗಟ್ಟನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಿದೆ. ಸದ್ಯ, ಈ ಇಡೀ ಪ್ರಕರಣ ನಿಯಂತ್ರಣ ತಪ್ಪುತ್ತಿದೆ’ ಎಂದು ಶಶಿ ತರೂರ್ ಬೇಸರ ವ್ಯಕ್ತಪಡಿಸಿದ್ದಾರೆ.
‘ಕ್ರಿಕೆಟ್ ಎಲ್ಲರೂ ಇಷ್ಟಪಡುವ ಕ್ರೀಡೆಯಾಗಿದ್ದು, ಹೀಗೆ ಮುಂದುವರಿಯಲು ಬಿಡುವ ಬದಲು, ಕನಿಷ್ಠ ಆಟದ ಮೈದಾನದಲ್ಲಾದರೂ ನಮ್ಮನ್ನು ಒಟ್ಟುಗೂಡಿಸುವ ಒಂದು ಸಾಧನವಾಗಿರಬೇಕು ಎಂಬ ತಿಳುವಳಿಕೆಗೆ ಬರಬೇಕು ಎಂದು ನಾನು ಭಾವಿಸುತ್ತೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆತುರದ ನಿರ್ಧಾರಗಳನ್ನು ತೆಗೆದುಕೊಂಡ ಎಲ್ಲರಿಗೂ ಇದೊಂದು ಎಚ್ಚರಿಕೆಯ ಕರೆಯಾಗಿದೆ. ಇದನ್ನು ಐಸಿಸಿ ಮಧ್ಯಸ್ಥಿಕೆ ವಹಿಸಿ ಬಗೆಹರಿಸಬೇಕು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.