ADVERTISEMENT

ಭಾರತ–ದಕ್ಷಿಣ ಆಫ್ರಿಕಾ ಕ್ರಿಕೆಟ್‌: ಕೋವಿಡ್‌–19 ಭೀತಿ, ಪ್ರೇಕ್ಷಕರಿಗಿಲ್ಲ ಪ್ರವೇಶ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 4:10 IST
Last Updated 13 ಮಾರ್ಚ್ 2020, 4:10 IST
ಭಾರತ ಕ್ರಿಕೆಟ್‌ ತಂಡದ ಅಭಿಮಾನಿ
ಭಾರತ ಕ್ರಿಕೆಟ್‌ ತಂಡದ ಅಭಿಮಾನಿ    

ನವದೆಹಲಿ/ಧರ್ಮಶಾಲಾ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಏಕದಿನ ಕ್ರಿಕೆಟ್‌ ಸರಣಿಯ ಎರಡು ಮತ್ತು ಮೂರನೇ ಪಂದ್ಯಗಳ ವೇಳೆ ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶ ನಿರ್ಬಂಧಿಸಲಾಗಿದೆ.

ಎರಡನೇ ಪಂದ್ಯ ಮಾರ್ಚ್‌ 15ರಂದು ಲಖನೌದಲ್ಲಿ ಮತ್ತು ಮೂರನೇ ಪಂದ್ಯ 18ರಂದು ಕೋಲ್ಕತ್ತದಲ್ಲಿ ನಿಗದಿಯಾಗಿವೆ. ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಈ ಸಲದ ಐಪಿಎಲ್‌ ಪಂದ್ಯಗಳನ್ನು ಖಾಲಿ ಕ್ರೀಡಾಂಗಣದಲ್ಲಿ ಆಯೋಜಿಸುವ ಸಾಧ್ಯತೆ ಇದೆ.

ಶನಿವಾರ ಐಪಿಎಲ್‌ ಆಡಳಿತ ಸಮಿತಿ ಸಭೆಯಲ್ಲಿ ಈ ಕುರಿತು ತೀರ್ಮಾನವಾಗಲಿದೆ.

ADVERTISEMENT

ದೇಶದಲ್ಲಿ ಒಟ್ಟು ಪ್ರಕರಣ 74ಕ್ಕೆ ಏರಿಕೆ

*ದೇಶದಲ್ಲಿ ಕೋವಿಡ್‌–19 ದೃಢಪಟ್ಟ 14 ಹೊಸ ಪ್ರಕರಣಗಳು ಗುರುವಾರ ವರದಿಯಾಗಿವೆ. ಹೀಗಾಗಿ ಪೀಡಿತರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ. ಇದರಲ್ಲಿ ಮಹಾರಾಷ್ಟ್ರದ ಒಂಬತ್ತು, ದೆಹಲಿ, ಲಡಾಖ್‌, ಉತ್ತರ ಪ್ರದೇಶ ಹಾಗೂ ಆಂಧ್ರ ಪ್ರದೇಶದಲ್ಲಿ ತಲಾ ಒಂದೊಂದು ಪ್ರಕರಣಗಳು ವರದಿಯಾಗಿವೆ‌

*ಚೀನಾ, ಅಮೆರಿಕ, ಇಟಲಿ, ದಕ್ಷಿಣ ಕೊರಿಯಾ ಸೇರಿ 15 ದೇಶಗಳ ಪ್ರವಾಸಿಗರು ದೆಹಲಿ ವಿಮಾನ ನಿಲ್ದಾಣದ ಡ್ಯೂಟಿ–ಫ್ರೀ ಮಳಿಗೆಗಳಿಗೆ ಹೋಗುವುದನ್ನು ಭಾರತೀಯ ಕಸ್ಟಮ್ಸ್‌ ನಿಷೇಧಿಸಿದೆ

*ರಾಜತಾಂತ್ರಿಕ, ಉದ್ಯೋಗದಂತಹ ವೀಸಾಗಳನ್ನು ಬಿಟ್ಟು ಉಳಿದೆಲ್ಲ ವೀಸಾಗಳನ್ನು ಕೇಂದ್ರ ಸರ್ಕಾರವು ಅಮಾನತು ಮಾಡಿದೆ. ಏಪ್ರಿಲ್‌ 15ರವರೆಗೆ ಇದು ಜಾರಿಯಲ್ಲಿರುತ್ತದೆ. ಭಾರತಕ್ಕೆ ಈಗಾಗಲೇ ಬಂದಿರುವ ವಿದೇಶಿಯರ ವೀಸಾಗಳಿಗೆ ಮಾನ್ಯತೆ ಇದೆ. ಅನಗತ್ಯ ವಿದೇಶ ಪ್ರವಾಸ ಕೈಬಿಡುವಂತೆ ಭಾರತೀಯರಿಗೆ ಸರ್ಕಾರವು ಸಲಹೆ ನೀಡಿದೆ

*ಸಾಗರೋತ್ತರ ಭಾರತೀಯ ಪೌರರಿಗೆ ನೀಡಲಾಗಿರುವ ವೀಸಾಮುಕ್ತ ಪ್ರಯಾಣ ಸೌಲಭ್ಯವನ್ನೂ ಏ. 15ರವರೆಗೆ ಅಮಾನತಿನಲ್ಲಿ ಇಡಲಾಗಿದೆ. ಅತ್ಯಂತ ಅಗತ್ಯ ಕೆಲಸಗಳಿಗಾಗಿ ವಿದೇಶಕ್ಕೆ ಹೋದ ಭಾರತೀಯರು ಹಿಂದಿರುಗಿದಾಗ ಅವರನ್ನು 14 ದಿನ ಪ್ರತ್ಯೇಕಿಸಲಾದ ನಿಗಾ ವಿಭಾಗದಲ್ಲಿ ಇರಿಸಲಾಗುವುದು

*ಕೇಂದ್ರದ ಸಚಿವರು ವಿದೇಶ ಪ್ರವಾಸಗಳನ್ನು ಕೈಗೊಳ್ಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.