ADVERTISEMENT

ಜಡೇಜ, ಸಿರಾಜ್ ಮ್ಯಾಜಿಕ್: ಇನಿಂಗ್ಸ್ ಮತ್ತು 140 ರನ್‌ಗಳಿಂದ ಗೆದ್ದ ಟೀಂ ಇಂಡಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಅಕ್ಟೋಬರ್ 2025, 9:03 IST
Last Updated 4 ಅಕ್ಟೋಬರ್ 2025, 9:03 IST
<div class="paragraphs"><p>ಚಿತ್ರ ಕೃಪೆ ಪಿಟಿಐ</p></div>

ಚಿತ್ರ ಕೃಪೆ ಪಿಟಿಐ

   

ವಿಂಡೀಸ್ ವಿರುದ್ಧ ಗೆದ್ದ ಟೀಂ ಇಂಡಿಯಾ

ಅಹದಾಬಾದ್​: ಇಲ್ಲಿನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಇನಿಂಗ್ಸ್ ಮತ್ತು140 ರನ್‌ಗಳ ಬೃಹತ್ ಗೆಲುವು ಸಾಧಿಸಿದೆ.

ADVERTISEMENT

286 ರನ್‌ಗಳ ಹಿನ್ನೆಡೆಯೊಂದಿಗೆ 2ನೇ ಇನಿಂಗ್ಸ್‌ ಆರಂಭಿಸಿದ ವಿಂಡೀಸ್ ರವೀಂದ್ರ ಜಡೇಜ ಹಾಗೂ ಮೊಹಮ್ಮದ್ ಸಿರಾಜ್ ಬೌಲಿಂಗ್ ದಾಳಿಗೆ ನಲುಗಿ ಹೋಯಿತು. ವೆಸ್ಟ್ ಇಂಡಿಸ್ ತನ್ನ 2ನೇ ಇನಿಂಗ್ಸ್‌ನಲ್ಲಿ ಕೇವಲ 146 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಇನಿಂಗ್ಸ್‌ ಹಾಗೂ 140 ರನ್‌ಗಳ ಸೋಲು ಅನುಭವಿಸಿತು.

ವಿಂಡೀಸ್ ಪರ ಅಲಿಕ್ ಅಥಾನಾಜೆ 38 ರನ್ ಗಳಿಸಿದ್ದು ವೈಯಕ್ತಿಕ ಗರಿಷ್ಠ ರನ್ ಸ್ಕೋರ್ ಎನಿಸಿಕೊಂಡರೆ, ಜಸ್ಟೀನ್ ಗ್ರೀವ್ಸ್ 25 ರನ್ ಸಿಡಿಸಿ ಕೊಂಚ ಹೋರಾಟ ನಡೆಸಿದರು. ಅಂತಿಮವಾಗಿ ಜೇಡನ್ ಸೀಲ್ಸ್ 22 ರನ್ ಗಳಿಸಿ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು.

ಭಾರತದ ಪರ ರವೀಂದ್ರ ಜಡೇಜಾ 4 ವಿಕೆಟ್ ಪಡೆದು ಮಿಂಚಿದರು. ಮೊಹಮ್ಮದ್ ಸಿರಾಜ್ 3, ಕುಲದೀಪ್ ಯಾದವ್ 2 ಹಾಗೂ ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದು ಮಿಂಚಿದರು. ವೆಸ್ಟ್ ಇಂಡೀಸ್ 3ನೇ ದಿನ ಕೇವಲ 2 ಸೆಷನ್​ಗಳಲ್ಲೇ 45.1 ಓವರ್​ಗಳಲ್ಲಿ 146 ರನ್​ಗಳಿಗೆ ಆಲೌಟ್ ಆಗುವ ಮೂಲಕ ದೊಡ್ಡ ಅಂತರದಿಂದ ಸೋಲು ಕಂಡಿತು.

ಮೊದಲ ಇನಿಂಗ್ಸ್‌ನಲ್ಲಿ 162ಕ್ಕೆ ಆಲೌಟ್

ವೆಸ್ಟ್ ಇಂಡೀಸ್ ತನ್ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 162 ರನ್‌ಗಳಿಗೆ ಆಲೌಟ್ ಆಗುವ ಮೂಲಕ ನಿರಾಸೆ ಅನುಭವಿಸಿತು. ಜಸ್ಟಿನ್ ಗ್ರೀವ್ಸ್ (32), ಶೈ ಹೋಪ್ (26) ಹಾಗೂ ರೋಸ್ಟನ್ ಚೇಸ್ (24) ಕೊಂಚ ಹೋರಾಟ ನೀಡಿದರು. ಭಾರತದ ಪರ ಸಿರಾಜ್ 4, ಜಸ್‌ಪ್ರೀತ್ ಬುಮ್ರಾ 3, ಕುಲದೀಪ್ ಯಾದವ್ 2 ಹಾಗೂ ವಾಷಿಂಗ್‌ಟನ್ ಸುಂದರ್ 1 ವಿಕೆಟ್‌ ಪಡೆದು ಮಿಂಚಿದರು.

ಭಾರತ 448ಕ್ಕೆ 5 ಡಿಕ್ಲೇರ್

ಭಾರತ ಕೆ.ಎಲ್.ರಾಹುಲ್ (100), ಧ್ರುವ್ ಜುರೆಲ್ (125) ಹಾಗೂ ರವೀಂದ್ರ ಜಡೇಜಾ (104 ಅಜೇಯ) ಬ್ಯಾಟಿಂಗ್ ಶತಕಗಳ ನೆರವಿನಿಂದ ಬರೋಬ್ಬರಿ 448 ರನ್‌ ಕಲೆಹಾಕಿ 286 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತು. ವೆಸ್ಟ್ ಇಂಡೀಸ್ ಪರ ರೋಸ್ಟನ್ ಚೇಸ್ 2. ಜೇಡನ್ ಸೀಲ್ಸ್, ವಾರಿಕನ್ ಹಾಗೂ ಪೀರೆ ತಲಾ ಒಂದು ವಿಕೆಟ್ ಪಡೆದುಕೊಂಡರು.

ಅಂತಿಮವಾಗಿ ಟೀಂ ಇಂಡಿಯಾ ಇನಿಂಗ್ಸ್ ಹಾಗೂ 140 ರನ್‌ಗಳ ಜಯ ಸಾಧಿಸಿ ಸರಣಿಯಲ್ಲಿ 1–0 ಮುನ್ನಡೆ ಕಾಯ್ದುಕೊಂಡಿದೆ. ಶತಕ ಹಾಗೂ 4 ವಿಕೆಟ್ ಪಡೆದ ರವೀಂದ್ರ ಜಡೇಜಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.