ADVERTISEMENT

T20 World Cup 2026| ಇಶಾನ್, ರಿಂಕುಗೆ ಅವಕಾಶ; ಗಿಲ್‌ಗೆ ಕೊಕ್: ಹೀಗಿದೆ ತಂಡ

ಟಿ20 ಕ್ರಿಕೆಟ್ ವಿಶ್ವಕಪ್: ಸೂರ್ಯಕುಮಾರ್ ನಾಯಕತ್ವದ ಭಾರತ ತಂಡ ಪ್ರಕಟ

ಪಿಟಿಐ
Published 20 ಡಿಸೆಂಬರ್ 2025, 18:30 IST
Last Updated 20 ಡಿಸೆಂಬರ್ 2025, 18:30 IST
<div class="paragraphs"><p>ಭಾರತ ತಂಡ&nbsp;</p></div>

ಭಾರತ ತಂಡ 

   

–ಪಿಟಿಐ ಚಿತ್ರ

ನವದೆಹಲಿ: ವಿಕೆಟ್‌ಕೀಪರ್ ಇಶಾನ್ ಕಿಶನ್ ಮತ್ತು ಸ್ಫೋಟಕ ಶೈಲಿಯ ಬ್ಯಾಟರ್ ರಿಂಕು ಸಿಂಗ್ ಅವರಿಗೆ ಮುಂದಿನ ಫೆಬ್ರುವರಿಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಆದರೆ ಬ್ಯಾಟಿಂಗ್ ಲಯ ಕಂಡುಕೊಳ್ಳದ ಶುಭಮನ್ ಗಿಲ್ ಅವರಿಗೆ ಕೊಕ್ ನೀಡಲಾಗಿದೆ.

ADVERTISEMENT

ಶನಿವಾರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಸೀನಿಯರ್ ತಂಡದ ಆಯ್ಕೆ ಸಮಿತಿಯು ಪ್ರಕಟಿಸಿರುವ 15 ಆಟಗಾರರ ತಂಡಕ್ಕೆ ಸೂರ್ಯಕುಮಾರ್ ಯಾದವ್ ನಾಯಕರಾಗಿ ಮುಂದುವರಿದಿದ್ದಾರೆ. ಅವರು ಕೂಡ ಬ್ಯಾಟಿಂಗ್ ಲಯಕ್ಕಾಗಿ ಪರದಾಡುತ್ತಿದ್ದಾರೆ. ಆದರೆ ಅವರ ನಾಯಕತ್ವದಲ್ಲಿ ಭಾರತ ತಂಡವು ಏಷ್ಯಾ ಕಪ್ ಮತ್ತು ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಜಯಿಸಿತ್ತು. 

‘ಶುಭಮನ್ ಗಿಲ್ ಅವರು ನಿರೀಕ್ಷೆಗೆ ತಕ್ಕಂತೆ ರನ್ ಗಳಿಸಿಲ್ಲ. ಪ್ರಸ್ತುತ ಅವರು ವಿಶ್ವಕಪ್ ಟೂರ್ನಿಯಲ್ಲಿ ಆಡುವ ತಂಡದಲ್ಲಿ ಸ್ಥಾನ ಪಡೆದಿಲ್ಲ’ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. 

ಕಳೆದೊಂದು ವರ್ಷದಲ್ಲಿ ಯಾವುದೇ ಟೂರ್ನಿಗೂ ಇಶಾನ್ ಕಿಶನ್ ಅವರನ್ನು ಪರಿಗಣಿಸಿರಲಿಲ್ಲ. ಎಡಗೈ ಬ್ಯಾಟರ್ ಮತ್ತು ವಿಕೆಟ್‌ಕೀಪರ್ ಇಶಾನ್ ಅವರ ನಾಯಕತ್ವದಲ್ಲಿ ಈಚೆಗೆ ಜಾರ್ಖಂಡ್ ತಂಡವು ಸೈಯದ್‌ ಮುಷ್ತಾಕ್ ಅಲಿ ಟಿ20 ಟೂರ್ನಿಯ ಚಾಂಪಿಯನ್ ಆಗಿತ್ತು. ಇಶಾನ್ ಅಮೋಘ ಶತಕ ಕೂಡ ಹೊಡೆದಿದ್ದರು. 

ಇಶಾನ್ ಸ್ಥಾನ ಪಡೆದ ಕಾರಣ ಎಡಗೈ ಬ್ಯಾಟರ್‌ ಯಶಸ್ವಿ ಜೈಸ್ವಾಲ್ ಮತ್ತು ವಿಕೆಟ್‌ಕೀಪರ್ ಜಿತೇಶ್ ಶರ್ಮಾ ಅವರಿಗೆ ಸ್ಥಾನ ಕೈತಪ್ಪಿದೆ. ಅಭಿಷೇಕ್ ಶರ್ಮಾ, ಇಶಾನ್, ತಿಲಕ್ ವರ್ಮಾ, ರಿಂಕು ಮತ್ತು ಸೂರ್ಯಕುಮಾರ್ ಯಾದವ್ ಅವರು ಇರುವುದರಿಂದ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಪಡೆಯು ಬಲಾಢ್ಯವಾಗಿದೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರಿಂದಾಗಿ ತಂಡವು ಸಮತೋಲನಗೊಂಡಿದೆ. 

ವೇಗದ ಬೌಲಿಂಗ್ ವಿಭಾಗದಲ್ಲಿ ಅನುಭವಿ ಮತ್ತು ಉದಯೋನ್ಮುಖ ಬೌಲರ್‌ಗಳಿದ್ದಾರೆ. ಕುಲದೀಪ್ ಯಾದವ್ ಸ್ಪಿನ್ ವಿಭಾಗದ ಶಕ್ತಿ ಹೆಚ್ಚಿಸುವ ನಿರೀಕ್ಷೆ ಇದೆ. 

ವಿಶ್ವಕಪ್ ಟೂರ್ನಿಯು ಮುಂಬರುವ ಫೆಬ್ರುವರಿ 7ರಿಂದ ನಡೆಯಲಿದೆ. ಹಾಲಿ ಚಾಂಪಿಯನ್ ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ  ಒಂದು ತಿಂಗಳ ಕಾಲ ಆಯೋಜನೆಗೊಳ್ಳಲಿದೆ.

ತಂಡ:

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ (ಉಪನಾಯಕ), ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ವಾಷಿಂಗ್ಟನ್‌ ಸುಂದರ್, ವರುಣ ಚಕ್ರವರ್ತಿ, ಇಶಾನ್ ಕಿಶನ್ (ವಿಕೆಟ್‌ಕೀಪರ್), ರಿಂಕು ಸಿಂಗ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.