ಭಾರತದ ನಿತೀಶ್ ಕುಮಾರ್ ರೆಡ್ಡಿ ಅವರ ಬ್ಯಾಟಿಂಗ್
ಪಿಟಿಐ ಚಿತ್ರ
ಅಡಿಲೇಡ್: ರೋಹಿತ್ ಶರ್ಮಾ ಟಾಸ್ ಜಯಿಸಿದರು. ಹಗಲು–ರಾತ್ರಿ ಪಂದ್ಯದಲ್ಲಿ ಬಹುತೇಕ ಎಲ್ಲ ತಂಡಗಳ ನಾಯಕರಂತೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ ಮಾಡಲು ಉತ್ತಮ ವಾತಾವರಣವೂ ಇತ್ತು.
ಆದರೆ ಇದಾಗಿ ಆರೂವರೆ ಗಂಟೆಗಳಲ್ಲಿ ಭಾರತದ ಪಾಲಿಗೆ ಕೆಲವು ಉತ್ತಮ ಕ್ಷಣಗಳಿದ್ದವು. ಉಳಿದಂತೆ ಆತಿಥೇಯ ತಂಡದ ವೇಗಿ ಮಿಚೆಲ್ ಸ್ಟಾರ್ಕ್ (48ಕ್ಕೆ6) ಪಿಂಕ್ ಬಾಲ್ ಕ್ರಿಕೆಟ್‌ನಲ್ಲಿ ತಮ್ಮ ಮಾಂತ್ರಿಕ ಬೌಲಿಂಗ್ ಮೆರೆದರು. ಇದರಿಂದಾಗಿ ಭಾರತ ತಂಡ 180 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು.
ಪರ್ತ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ತಡಬಡಾಯಿಸಿದ್ದ ಆಸ್ಟ್ರೇಲಿಯಾ ಬ್ಯಾಟರ್‌ಗಳು ಇಲ್ಲಿ ಸುಧಾರಿತ ಆಟವಾಡಿದರು. ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೊದಲ ದಿನವಾದ ಶುಕ್ರವಾರ ಆಟ ಮುಗಿದಾಗ 1 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದರು. ಭಾರತ ತಂಡದ ಮೊತ್ತ ಚುಕ್ತಾ ಮಾಡಲು ಆಸ್ಟ್ರೇಲಿಯಾಕ್ಕೆ ಇನ್ನೂ 94 ರನ್‌ಗಳು ಬೇಕು. ಉಸ್ಮಾನ್ ಖ್ವಾಜಾ (13 ರನ್) ಮತ್ತು ನೇಥನ್ ಮೆಕ್‌ಸ್ವೀನಿ (ಬ್ಯಾಟಿಂಗ್ 38) ತಾಳ್ಮೆಯುತ ಆರಂಭ ನೀಡಿದರು. ಖ್ವಾಜಾ ಅವರ ವಿಕೆಟ್ ಗಳಿಸುವಲ್ಲಿ ಬೂಮ್ರಾ ಯಶಸ್ವಿಯಾದರು.
ನೇಥನ್ ಜೊತೆಯಾದ ಮಾರ್ನಸ್ ಲಾಬುಷೇನ್ (ಬ್ಯಾಟಿಂಗ್ 20) ತಮ್ಮ ಲಯಕ್ಕೆ ಮರಳುವ ಲಕ್ಷಣ ಗಳನ್ನು ತೋರಿದರು. ಇಬ್ಬರೂ ಸೇರಿ ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ 62 ರನ್ ಸೇರಿಸಿದರು. ಪಿಂಕ್ ಬಾಲ್ ಟೆಸ್ಟ್‌ಗಳಲ್ಲಿ ಮಧ್ಯಾಹ್ನದ ಅವಧಿಯು ಬ್ಯಾಟಿಂಗ್ ಮತ್ತು ಹೊನಲು ಬೆಳಕಿನಲ್ಲಿ ಬೌಲಿಂಗ್ ಮಾಡಲು ಉತ್ತಮ ವೆಂದು ಹೇಳಲಾಗುತ್ತದೆ. ಭಾರತಕ್ಕೆ ಎರಡೂ ಅವಕಾಶಗಳೂ ಸಿಕ್ಕವು. ಸಮರ್ಥ ವಾಗಿ ಬಳಸಿಕೊಳ್ಳಲಿಲ್ಲ. ಪಿಂಕ್ ಬಾಲ್ ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯಾದ ಅನುಭವ ವೇ ಮೇಲುಗೈ ಸಾಧಿಸಿತು. ಭಾರತದ ದೌರ್ಬಲ್ಯಗಳೂ ಬಹಿರಂಗವಾದವು.
ಮಧ್ಯಾಹ್ನ ಆರಂಭವಾದ ಪಂದ್ಯ ವನ್ನು ವೀಕ್ಷಿಸಲು ಕ್ರೀಡಾಂಗಣದ ಗ್ಯಾಲರಿ ಗಳಲ್ಲಿ ಪ್ರೇಕ್ಷಕರು ತುಂಬಿದ್ದರು. ಸ್ಟಾರ್ಕ್ ಅವರು ದಿನದ ಮೊದಲ ಎಸೆತದಲ್ಲಿಯೇ ಯಶಸ್ವಿಯನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಇನ್ನೊಂದು ಬದಿಯಲ್ಲಿದ್ದ ಕೆ.ಎಲ್. ರಾಹುಲ್ ಅವರೊಂದಿಗೆ ಕೆಲಕ್ಷಣ ಮಾತನಾಡಿದ ಯಶಸ್ವಿ, ಡಿಆರ್‌ಎಸ್ ತೆಗೆದುಕೊಳ್ಳದೇ ಪೆವಿಲಿಯನ್‌ನತ್ತ ಹೆಜ್ಜೆಹಾಕಿದರು. ಪರ್ತ್ ಟೆಸ್ಟ್‌ನಲ್ಲಿ ಯಶಸ್ವಿ ಶತಕ ದಾಖಲಿಸಿದ್ದರು.
ರಾಹುಲ್ ಅವರು ಖಾತೆ ತೆರೆಯುವ ಮುನ್ನವೇ ಬೌಲರ್ ಸ್ಕಾಟ್ ಬೊಲ್ಯಾಂಡ್ ಎಸೆತದಲ್ಲಿ ಸ್ಲಿಪ್ ಫೀಲ್ಡರ್‌ಗೆ ಕ್ಯಾಚ್ ಆಗಿದ್ದರು. ಆದರೆ ಆನ್‌ಫೀಲ್ಡ್ ಅಂಪೈರ್ ಆ ಎಸೆತವನ್ನು ನೋಬಾಲ್ ಎಂದರು. ಮರುಪರಿಶೀಲನೆಯಲ್ಲಿಯೂ ಅಂಪೈರ್ ತೀರ್ಪು ಸರಿಯಾಗಿತ್ತು. ರಾಹುಲ್‌ಗೆ ‘ಜೀವದಾನ’ ಲಭಿಸಿತು. ನಂತರದ ಎಸೆತದಲ್ಲಿ ಖಾತೆ ತೆರೆದರು. ಅದು ಅವರು ಎದುರಿಸಿದ 21ನೇ ಎಸೆತವಾಗಿತ್ತು!
ನಂತರದ ಎಸೆತದಲ್ಲಿ ಸ್ಲಿಪ್‌ನಲ್ಲಿದ್ದ ಉಸ್ಮಾನ್ ಖ್ವಾಜಾ ಅವರು ಕ್ಯಾಚ್ ಕೈಚೆಲ್ಲುವ ಮೂಲಕ ರಾಹುಲ್‌ಗೆ ಮತ್ತೊಂದು ಜೀವದಾನ ಸಿಕ್ಕಿತು. ಈ ಅವಕಾಶಗಳನ್ನು ಬಳಸಿಕೊಳ್ಳುವತ್ತ ರಾಹುಲ್ (37; 64ಎ) ಚಿತ್ತಹರಿಸಿದರು. ಇನ್ನೊಂದು ಬದಿಯಲ್ಲಿದ್ದ ಶುಭಮನ್ ಗಿಲ್ (31; 51ಎ)ಅವರು ಆತ್ಮವಿಶ್ವಾಸದಿಂದ ಆಡಿದರು. ಇವರಿಬ್ಬರ ಜೊತೆಯಾಟದಿಂದಾಗಿ ಭಾರತದ ಮೊತ್ತವು 1 ವಿಕೆಟ್‌ಗೆ 69ರವರೆಗೂ ಬೆಳೆಯಿತು.
ಈ ಹಂತ ದಲ್ಲಿ ಮತ್ತೊಂದು ಸ್ಪೆಲ್ ಆರಂ ಭಿಸಿದ ಸ್ಟಾರ್ಕ್ ದೂಳೆಬ್ಬಿಸಿದರು. ಅವರು ಹಾಕಿದ ಬೌನ್ಸ್ ಎಸೆತವನ್ನು ಆಡಬೇಕೊ ಅಥವಾ ಬಿಡಬೇಕೊ ಎಂಬ ಗೊಂದಲದಲ್ಲಿ ಕಟ್ ಮಾಡಿದ ರಾಹುಲ್ ದಂಡ ತೆತ್ತರು. ನಂತರ ವಿರಾಟ್ ಕೊಹ್ಲಿ ಕೂಡ ಅದೇ ಮಾದರಿಯಲ್ಲಿ ಔಟಾದರು. ಸ್ಲಿಪ್ ಫೀಲ್ಡರ್‌ಗೆ ಕ್ಯಾಚಿತ್ತರು.
ಇನ್ನೊಂದೆಡೆ ಶಿಸ್ತಿನ ದಾಳಿ ನಡೆಸಿದ್ದ ಬೊಲ್ಯಾಂಡ್ ಅವರಿಗೆ ಕೊನೆಗೂ ಫಲ ಸಿಕ್ಕಿತು. ಅವರ ಎಸೆತವನ್ನು ಫ್ಲಿಕ್ ಮಾಡಲು ಯತ್ನಿಸಿದ ಗಿಲ್ ಎಲ್‌ಬಿ ಬಲೆಗೆ ಬಿದ್ದರು. ಊಟದ ವೇಳೆಗೆ ಭಾರತ ತಂಡವು 4 ವಿಕೆಟ್‌ಗಳಿಗೆ 82 ರನ್ ಗಳಿಸಿತ್ತು.
ವಿರಾಮದ ನಂತರ ರೋಹಿತ್ ಶರ್ಮಾ ಕೂಡ ಬೊಲ್ಯಾಂಡ್ ಬೌಲಿಂಗ್‌ನಲ್ಲಿ ಔಟಾದಾಗ ಭಾರತದ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ರಿಷಭ್ ಪಂತ್ ಅವರ ಛಲದ ಆಟಕ್ಕೆ ಪ್ಯಾಟ್ ಕಮಿನ್ಸ್ ತಡೆಯೊಡ್ಡಿದರು. ಈ ಹಂತದಲ್ಲಿ ನಿತೀಶ್ ಕುಮಾರ್ ರೆಡ್ಡಿ (42; 54ಎ) ಮತ್ತು ಆರ್. ಆಶ್ವಿನ್ (22; 22ಎ) ಇನಿಂಗ್ಸ್‌ಗೆ ಒಂದಿಷ್ಟು ಜೀವ ತುಂಬಿದರು. ಇಬ್ಬರೂ ಸ್ಕೋರ್ ಹೆಚ್ಚಿಸುವ ಅವಕಾಶಗಳನ್ನು ಅಚ್ಚುಕಟ್ಟಾಗಿ ಬಳಸಿಕೊಂಡರು. 30 ರನ್ ಸೇರಿಸಿದ್ದ ಈ ಜೊತೆಯಾಟವನ್ನೂ ಸ್ಟಾರ್ಕ್ ಮುರಿದರು. ಇನ್‌ಸ್ವಿಂಗ್ ಎಸೆತಕ್ಕೆ ಅಶ್ವಿನ್ ಎಲ್‌ಬಿಡಬ್ಲ್ಯು ಆದರು. ಈ ನಡುವೆಯೂ ನಿತೀಶ್ ಬೀಸಾಟ ಮುಂದುವರಿಯಿತು. ಅರ್ಧಶತಕದತ್ತ ಸಾಗಿದ್ದ ಅವರ ಆಟಕ್ಕೆ ಸ್ಟಾರ್ಕ್ ಅಂತ್ಯ ಹಾಡಿದರು.
ವಿರಾಟ್ ಸರಾಸರಿ 48ಕ್ಕೆ ಕುಸಿತ: ಸಂಜಯ್
ಅಡಿಲೇಡ್ (ಪಿಟಿಐ): ‘ಆಫ್‌ಸ್ಟಂಪ್‌ನಿಂದ ಹೊರಗಿರುವ ಎಸೆತಗಳನ್ನು ಆಡುವಲ್ಲಿ ವೈಫಲ್ಯ ಅನುಭವಿಸುತ್ತಿರುವುದರಿಂದಲೇ ವಿರಾಟ್ ಕೊಹ್ಲಿ ಅವರ ಒಟ್ಟು ರನ್ ಸರಾಸರಿಯು 48ಕ್ಕೆ ಕುಸಿಯಲು ಕಾರಣವಾಗಿದೆ’ ಎಂದು ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೇಕರ್ ಹೇಳಿದ್ದಾರೆ.
ಆಸ್ಟ್ರೇಲಿಯಾ ಎದುರಿನ ಎರಡನೇ ಟೆಸ್ಟ್‌ನಲ್ಲಿ ವಿರಾಟ್ ವೈಫಲ್ಯ ಅನುಭವಿಸಿದ ಬೆನ್ನಲ್ಲೇ ಮಾಂಜ್ರೆಕರ್ ಎಕ್ಸ್‌ನಲ್ಲಿ ಸಂದೇಶ ಹಾಕಿದ್ದಾರೆ.
ವರ್ಷದ ಹಿಂದೆ ಕೊಹ್ಲಿ ಬ್ಯಾಟಿಂಗ್ ಸರಾಸರಿಯು ಟೆಸ್ಟ್ ಕ್ರಿಕೆಟ್‌ನಲ್ಲಿ 50ರಷ್ಟಿತ್ತು. ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ವಿರಾಟ್ ಮೂರು ಪಂದ್ಯಗಳಿಂದ ಕೇವಲ 93 ರನ್ ಗಳಿಸಿದ್ದರು. ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ ಅವರು 15.50ರ ಸರಾಸರಿಯಲ್ಲಿ ರನ್ ಗಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.