ADVERTISEMENT

IND vs AUS Test: ಆಸೀಸ್ ಮಾರಕ ದಾಳಿಗೆ ತತ್ತರಿಸಿದ ಭಾರತ 244ಕ್ಕೆ ಆಲೌಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಡಿಸೆಂಬರ್ 2020, 6:09 IST
Last Updated 18 ಡಿಸೆಂಬರ್ 2020, 6:09 IST
ಆಸ್ಟ್ರೇಲಿಯಾ ಕ್ರಿಕೆಟ್ ತಂಡ
ಆಸ್ಟ್ರೇಲಿಯಾ ಕ್ರಿಕೆಟ್ ತಂಡ   

ಅಡಿಲೇಡ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಅಡಿಲೇಡ್ ಓವಲ್ ಮೈದಾನಲ್ಲಿ ಸಾಗುತ್ತಿರುವ ಮೊದಲ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಟೀಮ್ ಇಂಡಿಯಾ, ನಾಯಕ ವಿರಾಟ್ ಕೊಹ್ಲಿ ಅರ್ಧಶತಕದ (74) ಹೊರತಾಗಿಯೂ 93.1 ಓವರ್‌ಗಳಲ್ಲಿ 244 ರನ್‌ಗಳಿಗೆ ತನ್ನೆಲ್ಲ ವಿಕೆಟ್‌‍ಗಳನ್ನು ಕಳೆದುಕೊಂಡಿದೆ.

233/6 ಎಂಬಲ್ಲಿದ್ದ ಎರಡನೇ ದಿನದಾಟ ಮುಂದುವರಿಸಿದ ಭಾರತ ತಂಡವು, ಮತ್ತಷ್ಟು 11 ರನ್ ಪೇರಿಸುವುದರೊಳಗೆ ಉಳಿದಿರುವ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಆಲೌಟ್ ಆಯಿತು.

25 ಎಸೆತಗಳಲ್ಲೇ ಉಳಿದಿರುವ ನಾಲ್ಕು ವಿಕೆಟ್‌ಗಳನ್ನು ಆಸೀಸ್ ವೇಗಿಗಳು ಕಬಳಿಸಿದರು. ವೃದ್ಧಿಮಾನ್ ಸಹಾ (9), ರವಿಚಂದ್ರನ್ ಅಶ್ವಿನ್ (15), ಉಮೇಶ್ ಯಾದವ್ (6) ಹಾಗೂ ಮೊಹಮ್ಮದ್ ಶಮಿ (0) ನಿರಾಸೆ ಮೂಡಿಸಿದರು. ಇನ್ನುಳಿದಂತೆ ಜಸ್‌ಪ್ರೀತ್ ಬುಮ್ರಾ (4*) ರನ್ ಗಳಿಸಿದರು. ಆಸೀಸ್ ಪರ ಮಿಚೆಲ್ ಸ್ಟಾರ್ಕ್ ನಾಲ್ಕು (53/4) ಮತ್ತು ಪ್ಯಾಟ್ ಕಮಿನ್ಸ್ ಮೂರು ವಿಕೆಟ್ (48/3) ಕಿತ್ತು ಮಿಂಚಿದರು.

ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಬಾರಿಸಿದ್ದರು. ಆದರೆ ರನೌಟ್ ಆಗಿರುವುದು ದೊಡ್ಡ ಮೊತ್ತ ಪೇರಿಸುವ ಭಾರತದ ಇರಾದೆಗೆ ಹಿನ್ನಡೆಯಾಯಿತು. 180 ಎಸೆತಗಳನ್ನು ಎದುರಿಸಿದ ವಿರಾಟ್ ಎಂಟು ಬೌಂಡರಿಗಳಿಂದ 74 ರನ್ ಗಳಿಸಿದರು.

ಚೇತೇಶ್ವರ ಪೂಜಾರ (43) ಹಾಗೂ ಅಜಿಂಕ್ಯ ರಹಾನೆ (42) ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವಾಗಿ ಪರಿವರ್ತಿಸಲಾಗಲಿಲ್ಲ. ಪೃಥ್ವಿ ಶಾ (0), ಮಯಂಕ್ ಅಗರವಾಲ್ (17), ಹನುಮ ವಿಹಾರಿ (16) ರನ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.