
ಆಸ್ಟ್ರೇಲಿಯಾ ತಂಡ
ಚಿತ್ರಕೃಪೆ: ಪಿಟಿಐ
ಸಿಡ್ನಿ: ಸೌತ್ ವೇಲ್ಸ್ ಆಲ್‌ರೌಂಡರ್ ಜಾಕ್ ಎಡ್ವರ್ಡ್ಸ್ ಅವರು ಭಾರತ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಡುವ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅನುಭವಿ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೊನೆಯ ಮೂರು ಪಂದ್ಯಗಳಿಗೆ ಆಯ್ಕೆ ಆಗಿದ್ದಾರೆ.
ಏಕದಿನ ಸರಣಿಯ ನಂತರ ನಡೆಯಲಿರುವ ಟಿ20 ಸರಣಿಯ ಮೊದಲ ಪಂದ್ಯ ಇದೇ 29ರಂದು ಕೆನ್‌ಬೆರಾದಲ್ಲಿ ನಿಗದಿಯಾಗಿದೆ. 37 ವರ್ಷದ ಮ್ಯಾಕ್ಸ್‌ವೆಲ್ ಅವರು ಮಣಿಕಟ್ಟಿನ ಮೂಳೆ ಮುರಿತದಿಂದ ಚೇತರಿಸಿಕೊಂಡಿದ್ದಾರೆ. ಅವರ ಜೊತೆ, 20 ವರ್ಷ ವಯಸ್ಸಿನ ವೇಗಿ ಮಹ್ಲಿ ಬಿಯರ್ಡ್‌ಮನ್ ಅವರೂ ಕೊನೆಯ ಮೂರು ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ. ಬಿಯರ್ಡ್‌ಮನ್ ಅವರು ಬಿಗ್‌ಬ್ಯಾಷ್ ಲೀಗ್‌ನಲ್ಲಿ ಉತ್ತಮ ಸಾಧನೆ ತೋರಿದ್ದರು.
ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಮತ್ತು ಆಲ್‌ರೌಂಡರ್ ಸೀನ್ ಅಬೋಟ್ ಅವರು ಕ್ರಮವಾಗಿ ಮೊದಲ ಎರಡು ಮತ್ತು ಮೂರು ಪಂದ್ಯಗಳನ್ನು ಮಾತ್ರ ಆಡಲಿದ್ದಾರೆ.
ಮ್ಯಾಕ್ಸ್‌ವೆಲ್ ಸೆಪ್ಟೆಂಬರ್ ತಿಂಗಳಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೂ ಮೊದಲು ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವಾಗ ಮಣಿಕಟ್ಟಿನ ಮುರಿತಕ್ಕೆ ಒಳಗಾಗಿದ್ದರು. ಇದೀಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
20 ವರ್ಷದ ಬಿಯರ್ಡ್‌ಮನ್ 5 ಲಿಸ್ಟ್ ಎ ಪಂದ್ಯಗಳು ಮತ್ತು ಎರಡು ಬಿಗ್ ಬ್ಯಾಷ್ ಪಂದ್ಯಗಳಲ್ಲಿ ಆಡಿದ್ದು, ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಹಾಗಾಗಿ ಅವರನ್ನು ಭಾರತ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾಗಿದೆ.
ಮಿಚೆಲ್ ಮಾರ್ಷ್ (ನಾಯಕ), ಸೀನ್ ಅಬೋಟ್ (ಮೊದಲ ಮೂರು ಪಂದ್ಯಕ್ಕೆ), ಕ್ಸೇವಿಯರ್ ಬಾರ್ಟ್ಲೆಟ್, ಟಿಮ್ ಡೇವಿಡ್, ಬೆನ್ ದ್ವಾರ್ಷಿಯಸ್ (4,5ನೇ ಪಂದ್ಯಕ್ಕೆ ಮಾತ್ರ), ನಥಾನ್ ಎಲಿಸ್, ಜೋಶ್ ಹ್ಯಾಜಲ್‌ವುಡ್ (ಮೊದಲ ಎರಡು ಪಂದ್ಯಕ್ಕೆ), ಮಹ್ಲಿ ಬಿಯರ್ಡ್‌ಮನ್ (3,4 ಮತ್ತು 4ನೇ ಪಂದ್ಯಕ್ಕೆ), ಗ್ಲೆನ್ ಮ್ಯಾಕ್ಸ್‌ವೆಲ್ (ಕೊನೆಯ 3 ಪಂದ್ಯಕ್ಕೆ), ಟ್ರಾವಿಸ್ ಹೆಡ್, ಜೋಶ್ ಫಿಲಿಪ್, ಜೋಶ್ ಇಂಗ್ಲಿಸ್ (ಇಬ್ಬರೂ ವಿಕೆಟ್ ಕೀಪರ್ಸ್), ಮ್ಯಾಥ್ಯೂ ಕುನ್ಹೆಮನ್, ಮಿಚೆಲ್ ಒವೆನ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಆ್ಯಡಂ ಜಂಪಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.