ADVERTISEMENT

IND vs AUS: 12ನೇ ಟೆಸ್ಟ್ ಶತಕ ಬಾರಿಸಿ ಸ್ಮರಣೀಯ ದಾಖಲೆ ಬರೆದ ಅಜಿಂಕ್ಯ ರಹಾನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 7:45 IST
Last Updated 27 ಡಿಸೆಂಬರ್ 2020, 7:45 IST
ಅಜಿಂಕ್ಯ ರಹಾನೆ
ಅಜಿಂಕ್ಯ ರಹಾನೆ   

ಮೆಲ್ಬೋರ್ನ್: ಭಾರತ ಕ್ರಿಕೆಟ್ ತಂಡದ ಉಸ್ತುವಾರಿ ನಾಯಕ ಅಜಿಂಕ್ಯ ರಹಾನೆ ಟೆಸ್ಟ್ ಕ್ರಿಕೆಟ್‌ ವೃತ್ತಿ ಜೀವನದಲ್ಲಿ 12ನೇ ಶತಕ ಸಾಧನೆ ಮಾಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಸಾಗುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ನಾಯಕನ ಆಟವಾಡಿದ ರಹಾನೆ ಆಕರ್ಷಕ ಶತಕ ಸಾಧನೆ ಮಾಡಿದರು.

ಆಡಿಲೇಡ್ ಓವಲ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್ನಿಗೆ ಆಲೌಟಾಗಿದ್ದ ಟೀಮ್ ಇಂಡಿಯಾ, ಮುಖಭಂಗಕ್ಕೆ ಒಳಗಾಗಿತ್ತು. ಇದು ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇನ್ನಿಂಗ್ಸ್‌ವೊಂದರಲ್ಲಿ ದಾಖಲಾದ ಅತಿ ಕನಿಷ್ಠ ಮೊತ್ತವಾಗಿತ್ತು.

ADVERTISEMENT

ಪಿತೃತ್ವ ರಜೆಯ ಮೆರೆಗೆ ತವರಿಗೆ ಮರಳಿರುವ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಅಗ್ನಿ ಪರೀಕ್ಷೆಯನ್ನು ಅಜಿಂಕ್ಯ ರಹಾನೆ ಎದುರಿಸಿದ್ದರು.

ಆದರೆ ತಮಗೆ ದೊರಕಿದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿರುವ ರಹಾನೆ, ತಾವು ಏಕೆ ಶ್ರೇಷ್ಠ ಎಂಬುದನ್ನು ನಿರೂಪಿಸಿದರು.

ಮೊದಲು ಆಸ್ಟ್ರೇಲಿಯಾ ತಂಡವನ್ನು 195 ರನ್ನಿಗೆ ನಿಯಂತ್ರಿಸುವ ಮೂಲಕ ನಾಯಕತ್ವ ಕೌಶಲ್ಯ ಮೆರೆದಿರುವ ರಹಾನೆ, ಈಗ ಬ್ಯಾಟಿಂಗ್‌ನಲ್ಲೂ ಮಿಂಚುವ ಮೂಲಕ ಪರಿಪೂರ್ಣ ಟೀಮ್ ಪ್ಲೇಯರ್ ಎನಿಸಿದ್ದಾರೆ.

ಇದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ರಹಾನೆ ಬ್ಯಾಟ್‌ನಿಂದ ಸಿಡಿದ ಎರಡನೇ ಶತಕ ಸಾಧನೆಯಾಗಿದೆ. ಹಾಗೆಯೇ ಟೆಸ್ಟ್ ಶತಕ ಬಾರಿಸಿದ ಭಾರತದ 12ನೇ ಕಪ್ತಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಇನ್ನು ಆಸ್ಟ್ರೇಲಿಯಾ ನೆಲದಲ್ಲಿ ಶತಕ ಬಾರಿಸಿದ ಭಾರತದ ಐದನೇ ನಾಯಕ ಎಂಬ ಹಿರಿಮೆಗೂ ರಹಾನೆ ಭಾಜನವಾಗಿದ್ದಾರೆ. ಈ ಹಿಂದೆ ಮೊಹಮ್ಮದ್ ಅಜರುದ್ದೀನ್ (ಅಡಿಲೇಡ್‌ನಲ್ಲಿ), ಸಚಿನ್ ತೆಂಡೂಲ್ಕರ್ (ಎಂಸಿಜಿ), ಸೌರವ್ ಗಂಗೂಲಿ (ಗಬ್ಬ) ಮತ್ತು ನಾಯಕ ವಿರಾಟ್ ಕೊಹ್ಲಿ ಮೂರು ಬಾರಿ (ಎಸ್‌ಸಿಜಿ, ಪರ್ತ್ ಮತ್ತು ಎಂಸಿಜಿ) ಆಸೀಸ್ ನೆಲದಲ್ಲಿ ಶತಕ ಸಾಧನೆ ಮಾಡಿದ್ದರು.

ಅಜಿಂಕ್ಯ ರಹಾನೆ ಶತಕದ ಮುಖ್ಯಾಂಶಗಳು:

  • 12ನೇ ಟೆಸ್ಟ್ ಶತಕ,
  • ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಾಧನೆ ಮಾಡಿದ ಭಾರತದ 12ನೇ ಕಪ್ತಾನ,
  • ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ 2ನೇ ಶತಕ ಸಾಧನೆ ಮಾಡಿದ ಭಾರತೀಯ ಕ್ರಿಕೆಟಿಗ (ವಿನೂ ಮಂಕಡ್ ಮೊದಲಿಗರು),

ಆಸ್ಟ್ರೇಲಿಯಾ ನೆಲದಲ್ಲಿ ಶತಕ ಬಾರಿಸಿದ ಭಾರತೀಯ ನಾಯಕರ ಪಟ್ಟಿ:

  • ಮೊಹಮ್ಮದ್ ಅಜರುದ್ದೀನ್ 106, ಅಡಿಲೇಡ್, 1991/92,
  • ಸಚಿನ್ ತೆಂಡೂಲ್ಕರ್ 116, ಎಂಸಿಜಿ, 1999/00,
  • ಸೌರವ್ ಗಂಗೂಲಿ 144, ಗಬ್ಬ, 2003/04,
  • ವಿರಾಟ್ ಕೊಹ್ಲಿ 115 & 141, ಅಡಿಲೇಡ್, 2014/15,
  • ವಿರಾಟ್ ಕೊಹ್ಲಿ 147, ಎಸ್‌ಸಿಜಿ, 2014/15,
  • ವಿರಾಟ್ ಕೊಹ್ಲಿ 123, ಪರ್ತ್, 2018/19,
  • ಅಜಿಂಕ್ಯ ರಹಾನೆ 104*, ಎಂಸಿಜಿ, 2020/21,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.