ADVERTISEMENT

ಮೂರನೇ ಟಿ20 ಪಂದ್ಯ: ವಿರಾಟ್ ಆಟಕ್ಕೆ ಬಟ್ಲರ್ ತಿರುಗೇಟು, ಇಂಗ್ಲೆಂಡ್‌ ಜಯಭೇರಿ

ಭಾರತದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ

ಪಿಟಿಐ
Published 16 ಮಾರ್ಚ್ 2021, 21:25 IST
Last Updated 16 ಮಾರ್ಚ್ 2021, 21:25 IST
ಇಂಗ್ಲೆಂಡ್‌ನ ಜೋಸ್ ಬಟ್ಲರ್   –ರಾಯಿಟರ್ಸ್ ಚಿತ್ರ
ಇಂಗ್ಲೆಂಡ್‌ನ ಜೋಸ್ ಬಟ್ಲರ್   –ರಾಯಿಟರ್ಸ್ ಚಿತ್ರ   

ಅಹಮದಾಬಾದ್: ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಭಾರತ ತಂಡದ ಜಯದ ಆಸೆ ಕಮರಿತು. ನಾಯಕ ವಿರಾಟ್ ಕೊಹ್ಲಿಯ ಏಕಾಂಗಿ ಹೋರಾಟವೂ ವೃರ್ಥವಾಯಿತು.

ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಪಂದ್ಯವನ್ನೂ ಜಯಿಸಿತು. 8 ವಿಕೆಟ್‌ಗಳಿಂದ ಜಯಿಸಿದ ಏಯಾನ್ ಮಾರ್ಗನ್ ಬಳಗವು ಐದು ಪಂದ್ಯಗಳ ಸರಣಿಯಲ್ಲಿ 2–1ರಿಂದ ಮುನ್ನಡೆ ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಮತ್ತೊಮ್ಮೆ ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳ ವೈಫಲ್ಯ ಕಾಡಿತು. ಆದರೆ, ನಾಯಕ ವಿರಾಟ್ ಕೊಹ್ಲಿ (ಔಟಾಗದೆ 77; 46 ಎಸೆತ) ಮತ್ತು ಹಾರ್ದಿಕ್ ಪಾಂಡ್ಯ (17 ರನ್) ಇನಿಂಗ್ಸ್‌ನ ಕೊನೆಯ 33 ಎಸೆತಗಳಲ್ಲಿ ಸೇರಿಸಿದ 60 ರನ್‌ಗಳ ಬಲದಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 156 ರನ್ ಗಳಿಸಿತು. ಆದರೆ, ಬಟ್ಲರ್ (ಅಜೇಯ 83; 52ಎಸೆತ) ಆಟವೇ ಮೇಲುಗೈ ಸಾಧಿಸಿತು. 18.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 158 ರನ್ ಗಳಿಸಿದ ಪ್ರವಾಸಿ ಬಳಗ ಸಂಭ್ರಮಿಸಿತು. ಜಾನಿ ಬೆಸ್ಟೊ (ಅಜೇಯ 40) ಕೂಡ ತಮ್ಮ ಕಾಣಿಕೆ ನೀಡಿದರು. ಆತಿಥೇಯರ ಸೋಲಿಗೆ ಫೀಲ್ಡಿಂಗ್‌ ಲೋಪಗಳ ಪಾಲು ಕೂಡ ಇತ್ತು. ಇದರಿಂದಾಗಿ ಬೌಲರ್‌ಗಳ ಪ್ರಯತ್ನಗಳೂ ವ್ಯರ್ಥವಾದವು.

ADVERTISEMENT

ವಿರಾಟ್ ಆಟದ ರಂಗು: ಇಂಗ್ಲೆಂಡ್ ತಂಡದ ವೇಗಿ ಮಾರ್ಕ್‌ವುಡ್ (31ಕ್ಕೆ3) ಮತ್ತು ಕ್ರಿಸ್ ಜೋರ್ಡಾನ್ (35ಕ್ಕೆ2) ಭಾರತ ತಂಡಕ್ಕೆ ಆರಂಭದಲ್ಲಿಯೇ ಪೆಟ್ಟುಕೊಟ್ಟರು. ಅದರಿಂದಾಗಿ ಇನಿಂಗ್ಸ್‌ನ ಮೊದಲ ಆರು ಓವರ್‌ಗಳಲ್ಲಿ ಆತಿಥೇಯ ಬಳಗವು 24 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿತು.

ಆದರೆ ಕೊನೆಯ ಆರು ಓವರ್‌ಗಳಲ್ಲಿ ವಿರಾಟ್ ಆಟ ರಂಗೇರಿತು. ಹೋದ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಕೊಹ್ಲಿ ಇಲ್ಲಿಯೂ ಅಬ್ಬರಿಸಿದರು. ಕ್ಯಾಪ್ಟನ್ ಕೊಹ್ಲಿಯ ಪಾರರಸದಷ್ಟೇ ಚುರುಕಾದ ಪಾದಚಲನೆ, ಸುಂದರ ಹೊಡೆತಗಳ ಆಟದಿಂದ ರನ್‌ಗಳು ಹರಿದುಬಂದವು. ವುಡ್ ಹಾಕಿದ 18ನೇ ಓವರ್‌ನಲ್ಲಿ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದ ಕೊಹ್ಲಿ ಆಟಕ್ಕೆ ಇಂಗ್ಲೆಂಡ್ ನಾಯಕ ಮಾರ್ಗನ್ ಕೂಡ ತಲೆದೂಗಿದರು. ಹಾರ್ದಿಕ್, ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಜೋಫ್ರಾ ಆರ್ಚರ್‌ಗೆ ಕ್ಯಾಚ್ ಆದರು.

ರಾಹುಲ್ ಮತ್ತೆ ಸೊನ್ನೆ: ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಕೆ.ಎಲ್. ರಾಹುಲ್ ಮತ್ತೊಂದು ಅವಕಾಶ ಪಡೆದರು. ಆದರೆ ಸತತ ಎರಡನೇ ಪಂದ್ಯದಲ್ಲಿಯೂ ರಾಹುಲ್ ಸೊನ್ನೆ ಸುತ್ತಿದರು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ವುಡ್ ಎಸೆತವನ್ನು ಆಡಲಾಗದೇ ಕ್ಲೀನ್‌ಬೌಲ್ಡ್‌ ಆದರು. ಕಳಪೆ ಪಾದಚಲನೆಗೆ ದಂಡ ತೆತ್ತರು.

ಆ ಎರಡೂ ಪಂದ್ಯಗಳಲ್ಲಿ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮಾ ಮತ್ತು ರಾಹುಲ್ ಇನಿಂಗ್ಸ್‌ ಆರಂಭಿಸಿದರು. ಅದರಿಂದಾಗಿ ವಿರಾಟ್ ತಮ್ಮ ಮೂರನೇ ಕ್ರಮಾಂಕವನ್ನು ಯುವಪ್ರತಿಭೆ ಇಶಾನ್ ಕಿಶನ್‌ಗೆ ಬಿಟ್ಟುಕೊಟ್ಟರು. ಎರಡನೇ ಓವರ್‌ನಲ್ಲಿ ಜೋಫ್ರಾ ತಮ್ಮದೇ ಬೌಲಿಂಗ್‌ನಲ್ಲಿ ರೋಹಿತ್ ಕೊಟ್ಟಿದ್ದ ಸುಲಭ ಕ್ಯಾಚ್‌ ಕೈಬಿಟ್ಟಿದ್ದರು. ನಂತರ ಮಾರ್ಕ್‌ ವುಡ್ ಬೌಲಿಂಗ್‌ನಲ್ಲಿ ಜೋಫ್ರಾ ಪಡೆದ ಕ್ಯಾಚ್‌ಗೇ ರೋಹಿತ್ ನಿರ್ಗಮಿಸಬೇಕಾಯಿತು. ಇಶಾನ್ ಕಿಶನ್ ಕೂಡ ಆರನೇ ಓವರ್‌ನಲ್ಲಿ ಕ್ರಿಸ್ ಜೋರ್ಡಾನ್ ಎಸೆತದಲ್ಲಿ ಔಟಾದರು.

ಈ ಹಂತದಲ್ಲಿ ವಿರಾಟ್ ಜೊತೆಗೆ ಸೇರಿಕೊಂಡ ರಿಷಭ್ ಪಂತ್ (25; 20ಎಸೆತ) ಭರವಸೆ ಮೂಡಿಸಿದರು. ನಾಲ್ಕನೇ ವಿಕೆಟ್ ಜತೆಯಾಟದಲ್ಲಿ 40 ರನ್ ಸೇರಿಸಿದರು. ರನ್ ಗಳಿಕೆಯ ಗತಿ ಹೆಚ್ಚುತ್ತಿದ್ದ ಸಂದರ್ಭದಲ್ಲಿ ರಿಷಭ್ ರನ್‌ಔಟ್ ಆದರು. ಮೊದಲ ಪಂದ್ಯದಲ್ಲಿ ಮಿಂಚಿದ್ದ ಶ್ರೇಯಸ್ ಅಯ್ಯರ್ (8) ಇಲ್ಲಿ ವಿಫಲರಾದರು. ತಂಡದ ಮೊತ್ತ ನೂರು ಕೂಡ ದಾಟಿರಲಿಲ್ಲ. ಇನಿಂಗ್ಸ್‌ನಲ್ಲಿ 5.3 ಓವರ್‌ಗಳು ಮಾತ್ರ ಬಾಕಿಯಿದ್ದವು. ಕ್ರೀಸ್‌ಗೆ ಬಂದ ಹಾರ್ದಿಕ್ ತಮ್ಮ ನಾಯಕನಿಗೆ ಸಮರ್ಥ ಬೆಂಬಲ ನೀಡಿದರು. ವಿರಾಟ್ ಆಟ ಗರಿಗೆದರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.