ADVERTISEMENT

IND vs ENG 5th Test: ಭಾರತ ತಂಡಕ್ಕೆ ಕನ್ನಡಿಗ ಕರುಣ್‌ ಆಸರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜುಲೈ 2025, 19:31 IST
Last Updated 31 ಜುಲೈ 2025, 19:31 IST
<div class="paragraphs"><p>ಕರುಣ್‌ ನಾಯರ್‌ ಬ್ಯಾಟಿಂಗ್‌ </p></div>

ಕರುಣ್‌ ನಾಯರ್‌ ಬ್ಯಾಟಿಂಗ್‌

   

 –ಪಿಟಿಐ ಚಿತ್ರ

ಲಂಡನ್: ಮಳೆಯ ಕಣ್ಣಾಮುಚ್ಚಾಲೆಯ ನಡುವೆ ಆರಂಭವಾದ ಐದನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ತಡಬಡಾ ಯಿಸಿದರು. ಆದರೆ, ಕನ್ನಡಿಗ ಕರುಣ್‌ ನಾಯರ್‌ ಅವರು ಅಜೇಯ ಅರ್ಧಶತಕ ದಾಖಲಿಸಿ ತಂಡಕ್ಕೆ ಆಸರೆಯಾದರು. 

ADVERTISEMENT

ಮೋಡ ಮುಸುಕಿದ ಗುರುವಾರ ಆತಿಥೇಯ ಇಂಗ್ಲೆಂಡ್ ತಂಡದ ಹಂಗಾಮಿ ನಾಯಕ ಓಲಿ ಪೋಪ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಭಾರತ ತಂಡದ ನಾಯಕ ಶುಭಮನ್ ಗಿಲ್ ಸರಣಿಯಲ್ಲಿ ಸತತ ಐದನೇ ಬಾರಿ ಟಾಸ್ ಸೋತರು. ಪ್ರವಾಸಿ ಬಳಗವು ಆರಂಭದಲ್ಲಿಯೇ ಆಘಾತ ಅನುಭವಿಸಿತು. ಚಹಾ ವಿರಾಮದ ವೇಳೆಗೆ 3 ವಿಕೆಟ್‌ಗಳಿಗೆ 85 ರನ್ ಗಳಿಸಿತ್ತು. ನಂತರ ಕೆಲಹೊತ್ತು ಮಳೆಯಿಂದಾಗಿ ಆಟ ಸ್ಥಗಿತಗೊಂಡು ಮತ್ತೆ ಆರಂಭವಾಯಿತು. ಮೊದಲ ದಿನದಾಟದ ಮುಕ್ತಾಯಕ್ಕೆ ಕರುಣ್‌ (ಔಟಾಗದೇ 52; 98ಎ, 4x7) ಬ್ಯಾಟಿಂಗ್‌ ಬಲದಿಂದ 64 ಓವರ್‌ಗಳಲ್ಲಿ 6 ವಿಕೆಟ್‌ಗೆ 204 ರನ್‌ ಗಳಿಸಿದೆ.

ಕಳೆದ ನಾಲ್ಕು ಪಂದ್ಯಗಳು ನಡೆದ ಅಂಗಣಗಳಿಗಿಂತಲೂ ವಿಭಿನ್ನವಾದ ಪಿಚ್‌ ಇಲ್ಲಿ ಸಿದ್ಧಪಡಿಸಲಾಗಿದೆ. ಈ ಸಂಗತಿಯನ್ನು ಬುಧವಾರವೇ ಗಿಲ್ ಪಡೆ ಅರಿತಿತ್ತು. ಓವಲ್ ಕ್ರೀಡಾಂಗಣದ ಮುಖ್ಯ ಪಿಚ್ ಕ್ಯುರೇಟರ್ ಲಿಯಾನ್ ಫೋರ್ಟಿಸ್ ಅವರು 2023ರಿಂದಲೇ ಇಲ್ಲಿಯ ಸರೆ ತಂಡಕ್ಕಾಗಿ  ಇಂತಹದೇ ಅಂಗಣ ಸಿದ್ಧಪಡಿಸುತ್ತಿದ್ದಾರೆ. ಹಸಿರು ನಳನಳಿಸುವ ಪಿಚ್ ವೇಗಿಗಳಿಗೆ ನೆರವು ನೀಡುವಂತಿತ್ತು.
ಅದರಿಂದಾಗಿ ಸಹಜವಾಗಿ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.  ಇದು ಫಲ
ಕೂಡ ನೀಡಿತು. 

ವೇಗಿ ಗಸ್ ಅಟ್ಕಿನ್ಸನ್ ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಯಶಸ್ವಿ ಜೈಸ್ವಾಲ್ (2) ಬಿದ್ದರು. ಆದರೆ ಅಂಪೈರ್ ಎಹಸಾನ್ ರಝಾ ಅವರು ಔಟ್ ನೀಡಲಿಲ್ಲ. ಪೋಪ್ ಅವರು ಯುಡಿಆರ್‌ಎಸ್ (ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ) ಅವಕಾಶ ಬಳಸಿ ಕೊಂಡರು. ಜೈಸ್ವಾಲ್ ಬ್ಯಾಟ್‌ಗೆ ಬಡಿಯದ ಚೆಂಡು ಪ್ಯಾಡ್‌ಗಳನ್ನು ಸವರಿತ್ತು ಮತ್ತು ಸ್ಟಂಪ್‌ಗಳಿಗೆ ನೇರವಾಗಿ ಸಾಗಿತ್ತು. ಭಾರತಕ್ಕೆ ಮೊದಲ ಆಘಾತವಾಯಿತು. ಹೋದ ವರ್ಷ ಇಲ್ಲಿ ನಡೆದಿದ್ದ ಶ್ರೀಲಂಕಾ ಎದುರಿನ ಸರಣಿಯಲ್ಲಿ ಗಾಯಗೊಂಡಿದ್ದ ಬೆನ್ ಸ್ಟೋಕ್ಸ್ ಬದಲಿಗೆ ನಾಯಕತ್ವ ವಹಿಸಿದ್ದ ಪೋಪ್ 14 ರೆಫರಲ್‌ಗಳಲ್ಲಿ ವಿಫಲ
ರಾಗಿದ್ದರು. ಆದರೆ ಇಲ್ಲಿ ಸಫಲವಾದರು. 

ಇನ್ನೊಂದೆಡೆ ಕೆ.ಎಲ್. ರಾಹುಲ್ (14;40ಎ) ಮತ್ತು ಎಡಗೈ ಬ್ಯಾಟರ್ ಸಾಯಿ ಸುದರ್ಶನ್ (38;108ಎ) ಅವರು ಕ್ರಿಸ್ ವೋಕ್ಸ್ ಅವರ ಪರಿಣಾಮ ಕಾರಿ ದಾಳಿಯನ್ನು ತಾಳ್ಮೆಯಿಂದ ಎದುರಿ ಸಿದರು. ಆದರೆ ಅಟ್ಕಿನ್ಸನ್, ಜೋಶ್ ಟಂಗ್ ಅಥವಾ ಜೆಮಿ ಓವರ್ಟನ್ ಅವರ ದಾಳಿಗೆ ಅಷ್ಟೇನೂ ಅವರು ಬೆದರಲಿಲ್ಲ. 

ಆದರೆ ರಾಹುಲ್ (14; 40ಎಸೆತ) ಅವರು ವೋಕ್ಸ್ ಎಸೆತವೊಂದನ್ನು ಆಡುವ ಭರದಲ್ಲಿ ಚೆಂಡನ್ನು ಸ್ಟಂಪ್ಸ್‌ಗೆ ಎಳೆದುಕೊಂಡರು. ಜೊತೆಯಾಟಕ್ಕೆ ತೆರೆಬಿತ್ತು. ಈ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿರುವ ಬ್ಯಾಟರ್ ಶುಭಮನ್ ಗಿಲ್ ಅವರು ಸಾಯಿ ಸುದರ್ಶನ್ ಜೊತೆಗೆ ಸೇರಿಕೊಂಡರು. ಊಟದ ವಿರಾಮಕ್ಕೆ ಎಂಟು ನಿಮಿಷಗಳು ಬಾಕಿ ಇದ್ದ ಸಂದರ್ಭದಲ್ಲಿ ಮಳೆ ಸುರಿಯಿತು.  

ಅಟ್ಕಿನ್ಸನ್ ಎಸೆತದಲ್ಲಿ ಗಿಲ್‌ ಚೆಂದದ ಕವರ್‌ ಡ್ರೈವ್ ಪ್ರಯೋಗಿಸಿದರು. ಟೆಸ್ಟ್ ಸರಣಿಯೊಂದರಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯ ಅಗ್ರಸ್ಥಾನದಲ್ಲಿ ರುವ ಸುನಿಲ್ ಗಾವಸ್ಕರ್ (774) ಅವರ ದಾಖಲೆಯನ್ನು ಮೀರಿ ನಿಲ್ಲುವತ್ತ ಗಿಲ್ ದಾಪುಗಾಲಿಟ್ಟರು. ಅವರ ಪುಲ್ ಮತ್ತು ಡ್ರೈವ್‌ಗಳು ಆಕರ್ಷಕವಾಗಿದ್ದವು. ಆದರೆ ಊಟದ ವಿರಾಮದ ನಂತರದ ಎರಡನೇ ಓವರ್‌ನಲ್ಲಿ ಗಿಲ್ ದಂಡ ತೆತ್ತರು.  ಶಾರ್ಟ್‌ಕವರ್ಸ್‌
ನತ್ತ ಚೆಂಡನ್ನು ಹೊಡೆದ ಅವರು
ಒಂದು ರನ್‌ಗಾಗಿ ಓಡಿದರು. ಚೆಂಡು ಬೌಲರ್‌ ಅಟ್ಕಿನ್ಸನ್ ಅವರತ್ತ ಸಾಗಿತು.  ಇದನ್ನು ಗಮನಿಸಿದ ನಾನ್‌ಸ್ಟ್ರೈಕರ್ ಸಾಯಿ ಅವರು ನಿರಾಕರಿಸಿ, ಗಿಲ್‌ ಅವರನ್ನು ಮರಳಿ ಹೋಗುವಂತೆ ಸೂಚಿಸಿದರು. ಆದರೆ ಅವರು ಮರಳುವಷ್ಟರಲ್ಲಿ ಅಟ್ಕಿನ್ಸನ್ ಚುರುಕಾಗಿ ನೇರ ಥ್ರೋ ಮಾಡಿ, ಗಿಲ್ ರನೌಟ್ ಆಗಲು ಕಾರಣರಾದರು. ಗಿಲ್‌ ಖಾತೆಯಲ್ಲಿ ಸದ್ಯ 743 ರನ್‌ಗಳು ಇವೆ. 

‘ಕೊನೆಯ’ ಟೆಸ್ಟ್‌ಗೆ ಮತ್ತೆ ಅವಕಾಶ ಪಡೆದ ಕನ್ನಡಗ ಕರುಣ್‌ ಎದುರಾಳಿ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ, ಸರಣಿಯಲ್ಲಿ ಮೊದಲ ಅರ್ಧಶತಕ ದಾಖಲಿಸಿದರು. ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ ಅವರು ಮಾತ್ರ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಮೊದಲ ಮೂರು ಟೆಸ್ಟ್‌ಗಳಲ್ಲಿ ಆಡಿದ್ದ ಅವರು  (0,20,31,26,40 ಮತ್ತು 14) ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದರು. ಹೀಗಾಗಿ, ನಾಲ್ಕನೇ ಟೆಸ್ಟ್‌ನಲ್ಲಿ ಆಡುವ ಬಳಗದಿಂದ ಅವರನ್ನು ಕೈಬಿಡಲಾಗಿತ್ತು. 

ತಾಳ್ಮೆಯ ಆಡವಾಡುತ್ತಿದ್ದಸುದರ್ಶನ್‌ ವಿಕೆಟ್‌ ಪಡೆದು  ಜೋಶ್‌ ಟಂಗ್‌ ಸಂಭ್ರಮಿ ಸಿದರು. ನಂತರ ಬಂದ ರವೀಂದ್ರ ಜಡೇಜ (9) ಮತ್ತು ಧ್ರುವ ಜುರೇಲ್‌ (19) ಅವರೂ ಬೇಗನೆ ಪೆವಿಲಿಯನ್‌ ಸೇರಿಕೊಂಡರು. ಗಾಯಾಳಾಗಿರುವ ರಿಷಭ್‌ ಪಂತ್‌ ಬದಲು ಜುರೇಲ್ ಅವಕಾಶ ಪಡೆದಿದ್ದಾರೆ. ಬಳಿಕ ಬಂದ ವಾಷಿಂಗ್ಟನ್‌ ಸುಂದರ್‌ (ಔಟಾಗದೇ 19) ಅವರು ಕರುಣ್ ಅವರೊಂದಿಗೆ ಮುರಿಯದ ಏಳನೇ ವಿಕೆಟ್‌ ಜೊತೆಯಾಟದಲ್ಲಿ 51 (88ಎ) ಸೇರಿಸಿ, ಎರಡನೇ ದಿನಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ.

ಸತತ 5ನೇ ಸಲ ಟಾಸ್ ಗೆಲ್ಲುವಲ್ಲಿ ಗಿಲ್ ವಿಫಲ...

ಪ್ರವಾಸಿ ಭಾರತ ವಿರುದ್ಧ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ತಂಡದ ಉಸ್ತುವಾರಿ ನಾಯಕ ಓಲಿ ಪೋಪ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

ಇದರೊಂದಿಗೆ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಮಗದೊಂದು ಬಾರಿ ಟಾಸ್ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.

ಭಾರತ ತಂಡದಲ್ಲಿ ನಾಲ್ಕು ಬದಲಾವಣೆ...

ಭಾರತ ತಂಡದಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಲಾಗಿದೆ.

ಕೆಲಸದೊತ್ತಡ ನಿಭಾಯಿಸುವ ಹಿನ್ನೆಲೆಯಲ್ಲಿ ಅಗ್ರ ವೇಗಿ ಜಸ್‌ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ಸೂಚಿಸಲಾಗಿದೆ.

ಗಾಯದ ಕಾರಣ ರಿಷಭ್ ಪಂತ್ ಸಹ ಅಲಭ್ಯರಾಗಿದ್ದಾರೆ. ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಕೈಬಿಡಲಾಗಿದೆ.

ಕರ್ನಾಟಕದ ಆಟಗಾರರಾದ ಕರುಣ್ ನಾಯರ್ ಹಾಗೂ ಪ್ರಸಿದ್ಧ ಕೃಷ್ಣ ತಂಡಕ್ಕೆ ಪುನರಾಗಮನ ಮಾಡಿದ್ದಾರೆ. ಹಾಗೆಯೇ ಪಂತ್ ಸ್ಥಾನದಲ್ಲಿ ಧ್ರುವ್ ಜುರೇಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಲಿದ್ದಾರೆ.

ಇನ್ನು ಅನ್ಶುಲ್ ಕಂಬೋಜ್ ಬದಲಿಗೆ ಆಕಾಶ್ ದೀಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಆತಿಥೇಯ ಇಂಗ್ಲೆಂಡ್ ತಂಡದಲ್ಲಿ ನಾಲ್ಕು ಬದಲಾವಣೆ ಮಾಡಲಾಗಿದೆ. ಬಲಭುಜದ ಗಾಯದಿಂದಾಗಿ ನಾಯಕ ಬೆನ್ ಸ್ಟೋಕ್ಸ್ ಅಲಭ್ಯರಾಗಿದ್ದಾರೆ.

ಜೋಫ್ರಾ ಆರ್ಚರ್, ಬ್ರೈಡನ್ ಕಾರ್ಸ್ ಹಾಗೂ ಲಿಯಾಮ್ ಡಾಸನ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಗಸ್ ಅಟ್ಕಿನ್ಸನ್, ಜೇಮಿ ಓವರ್ಟನ್ ಹಾಗೂ ಜೋಶ್ ಟಂಗ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್ 2-1ರ ಅಂತರದ ಮುನ್ನಡೆಯಲ್ಲಿದೆ. ಸರಣಿಯಲ್ಲಿ ಸಮಬಲ ಸಾಧಿಸುವ ನಿಟ್ಟಿನಲ್ಲಿ ಭಾರತ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.