ಬೆನ್ ಡಕೆಟ್ ಹಾಗೂ ಆಕಾಶ್ ದೀಪ್
ಕೃಪೆ: ಪಿಟಿಯ
ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ಆಕಾಶ್ ದೀಪ್ ಅವರನ್ನು ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್ ಟೀಕಿಸಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಿವೆ. ಅಂತಿಮ ಪಂದ್ಯವು ಲಂಡನ್‌ನ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್ ವೇಳೆ ಆರಂಭಿಕ ಆಟಗಾರ ಬೆನ್ ಡಕೆಟ್ ಅವರನ್ನು ಔಟ್ ಮಾಡಿದ್ದ ಆಕಾಶ್ ದೀಪ್, ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಿದ್ದ ಬ್ಯಾಟರ್ (ಡಕೆಟ್) ಹೆಗಲ ಮೇಲೆ ಕೈ ಹಾಕಿ ನಗುತ್ತಾ ಸೆಂಡ್‌ಅಪ್ ನೀಡಿದ್ದರು.
ಆಕಾಶ್ ದೀಪ್ 'ಸೆಂಡ್‌ಅಪ್' ನೀಡಿದ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಪರ–ವಿರೋಧದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಂದ್ಯದ ನೇರಪ್ರಸಾರದ ವೇಳೆ ವೀಕ್ಷಕ ವಿವರಣೆಗಾರರೂ ಈ ಬಗ್ಗೆ ಚರ್ಚಿಸಿದ್ದರು.
'Sky Sports' ನಿರೂಪಕ ಇಯಾನ್ ವಾರ್ಡ್ ಅವರು ಘಟನೆಯ ಬಗ್ಗೆ ಪಾಂಟಿಂಗ್ ಅವರೊಂದಿಗೆ ಮಾತನಾಡುತ್ತಾ, 'ಇಂತಹ ಸಂದರ್ಭಗಳಲ್ಲಿ ಕೆಲವು ಬ್ಯಾಟರ್‌ಗಳು ಕೋಪಗೊಳ್ಳುವುದು ನನಗೆ ನೆನಪಿದೆ. ನಾನೀಗ ನಿಮ್ಮ ಅಭಿಪ್ರಾಯವನ್ನು ಎದುರು ನೋಡುತ್ತಿದ್ದೇನೆ. ಇಂತಹ ಸಂದರ್ಭದಲ್ಲಿ ಪಾಂಟಿಂಗ್ ಸರಿಯಾಗಿ ಗುದ್ದುತ್ತಿದ್ದರು ಅಲ್ಲವೇ?' ಎಂದು ಕೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪಾಂಟಿಂಗ್ 'ಬಹುಶಃ ಹೌದು' ಎಂದಿದ್ದಾರೆ. ಹಾಗೆಯೇ, ಡಕೆಟ್ ಅವರ ಶಾಂತ ಹಾಗೂ ಸಂಯಮದ ವರ್ತನೆಯನ್ನು ಶ್ಲಾಘಿಸಿದ್ದಾರೆ.
'ಘಟನೆಯನ್ನು ನೋಡಿದಾಗ, ಅವರಿಬ್ಬರೂ ಜೊತೆಗಾರರಿರಬೇಕು ಅಥವಾ ಜೊತೆಯಾಗಿ ಆಡಿರಬೇಕು ಇಲ್ಲವೇ ಹಲವು ಸಲ ಸೆಣಸಾಟ ನಡೆಸಿರಬೇಕು ಎನಿಸಿತು. ಈ ರೀತಿಯ ಆಟವನ್ನು ಇಷ್ಟಪಡುತ್ತೇನೆ. ನನ್ನ ಪ್ರಕಾರ ಇವು ಪ್ರತಿದಿನವೂ ನೋಡಲು ಸಿಗುವುದಿಲ್ಲ. ಗಲ್ಲಿ ಕ್ರಿಕೆಟ್‌ನಲ್ಲಿ ಇಂಥವನ್ನು ಕಾಣಬಹುದು. ಆದರೆ, ಈ ರೀತಿಯ ನಿಕಟ ಸ್ಪರ್ಧೆಯಿರುವ ಸರಣಿಯ ಪಂದ್ಯಗಳಲ್ಲಿ ಅಲ್ಲ. ಬೆನ್ ಡಕೆಟ್ ಆಡುವ ರೀತಿ ನನಗೆ ತುಂಬಾ ಇಷ್ಟ. ಇದೀಗ, ಆಕಾಶ್ ದೀಪ್ ವರ್ತನೆಗೆ ಪ್ರತಿಕ್ರಿಯಿಸದಿರುವುದನ್ನು ನೋಡಿದ ಮೇಲೆ ಅಭಿಮಾನ ಇನ್ನಷ್ಟು ಹೆಚ್ಚಾಗಿದೆ ಎನಿಸುತ್ತಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೊದಲ ಇನಿಂಗ್ಸ್‌ನಲ್ಲಿ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿದ್ದ ಡಕೆಟ್ ಆಟ 43 ರನ್‌ಗೆ ಕೊನೆಯಾಯಿತು. ಈ ಟೂರ್ನಿಯಲ್ಲಿ ಡಕೆಟ್ ಅವರನ್ನು ಆಕಾಶ್ 4 ಬಾರಿ ಔಟ್ ಮಾಡಿದ್ದಾರೆ ಎಂಬುದು ವಿಶೇಷ.
ಅಂತಿಮ ಟೆಸ್ಟ್: ಸ್ಪಷ್ಟ ಫಲಿತಾಂಶದ ನಿರೀಕ್ಷೆ
ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 23 ರನ್‌ಗಳ ಹಿನ್ನಡೆ ಅನುಭವಿಸಿದ್ದ ಭಾರತ, ಇಂಗ್ಲೆಂಡ್ ಗೆಲುವಿಗೆ 374 ರನ್ ಗುರಿ ನೀಡಿದೆ. ಮೊತ್ತ ಬೆನ್ನತ್ತಿರುವ ಆತಿಥೇಯ ತಂಡ 3ನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 50 ರನ್ ಗಳಿಸಿದೆ.
ಇಂಗ್ಲೆಂಡ್ ಈ ಪಂದ್ಯ ಗೆಲ್ಲಲು ಇನ್ನೂ 324 ರನ್ ಗಳಿಸಬೇಕಿದೆ. ಭಾರತಕ್ಕೆ 9 ವಿಕೆಟ್ ಬೇಕಿದೆ. 48 ಎಸೆತಗಳಲ್ಲಿ 34 ರನ್ ಗಳಿಸಿರುವ ಡಕೆಟ್ ಕ್ರೀಸ್‌ನಲ್ಲಿದ್ದಾರೆ.
ಇನ್ನೂ ಎರಡು ದಿನಗಳ ಆಟ ಬಾಕಿ ಇದ್ದು, ಸ್ಪಷ್ಟ ಫಲಿತಾಂಶ ದೊರೆಯುವ ನಿರೀಕ್ಷೆ ಇದೆ.
ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ 224 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತವಾಗಿ ಇಂಗ್ಲೆಂಡ್, 247 ರನ್ ಗಳಿಸಿತ್ತು. ಬಳಿಕ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ, 396 ಕಲೆಹಾಕಿ ಸವಾಲಿನ ಗುರಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.