
ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್
(ಪಿಟಿಐ ಚಿತ್ರ)
ರಾಯಪುರ: ಎಡಗೈ ಬ್ಯಾಟರ್ ಇಶಾನ್ ಕಿಶನ್ (76) ಮತ್ತು ನಾಯಕ ಸೂರ್ಯಕುಮಾರ್ ಯಾದವ್ (82*) ಅಮೋಘ ಆಟದ ನೆರವಿನಿಂದ ಭಾರತ ತಂಡವು ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿತು.
ನ್ಯೂಜಿಲೆಂಡ್ ಒಡ್ಡಿದ 209 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 15.2 ಓವರ್‌ಗಳಲ್ಲಿ ಗುರಿ ತಲುಪಿತು. ಆ ಮೂಲಕ ಐದು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 2-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
209 ರನ್‌ಗಳ ಗುರಿಯನ್ನು ಇನ್ನೂ 28 ಎಸೆತಗಳು ಉಳಿದಿರುವಂತೆ ಭಾರತ ವಿಜಯ ದಾಖಲಿಸಿತು. ಇದು ಟ್ವೆಂಟಿ-20 ಇತಿಹಾಸದಲ್ಲಿ 200ಕ್ಕೂ ಅಧಿಕ ರನ್ ಗುರಿ ಇದ್ದಾಗ ಅತಿವೇಗದ ರನ್ ಚೇಸ್ ದಾಖಲೆ ಎನಿಸಿತು.
ಅಲ್ಲದೆ ಭಾರತದ ಯಶಸ್ವಿ ಗರಿಷ್ಠ ರನ್ ಚೇಸ್ ದಾಖಲೆಯನ್ನು ಸರಿಗಟ್ಟಿದೆ. 2023ರಲ್ಲಿ ವಿಶಾಖಪಟ್ಟಣದಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ರನ್ ಬೆನ್ನಟ್ಟಿತ್ತು.
ಆರನೇ ಸಲ 200+ ರನ್ ಚೇಸ್...
ಒಟ್ಟಾರೆಯಾಗಿ ಆರನೇ ಸಲ ಭಾರತವು 200ಕ್ಕೂ ಅಧಿಕ ರನ್‌ಗಳ ಚೇಸ್ ಸಾಧನೆ ಮಾಡಿದೆ. ಆ ಮೂಲಕ ಆಸ್ಟ್ರೇಲಿಯಾದ (7 ಸಲ) ನಂತರದ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
10 ರನ್ ಅಂತರದಲ್ಲಿ ಎರಡು ವಿಕೆಟ್ ಕಳೆದುಕೊಂಡರೂ ಗರಿಷ್ಠ ರನ್ ಚೇಸ್ ಮಾಡಿದ ದಾಖಲೆಯೂ ಭಾರತಕ್ಕೆ ಸೇರಿದೆ.
ಇಶಾನ್ 21 ಎಸೆತಗಳಲ್ಲಿ ಅರ್ಧಶತಕ...
ಎಡಗೈ ಬ್ಯಾಟರ್ 21 ಎಸೆತಗಳಲ್ಲಿ ಅರ್ಧಶತಕದ ಸಾಧನೆ ಮಾಡಿದರು. ಇದು ಟಿ20 ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತೀಯ ಬ್ಯಾಟರ್‌ನಿಂದ ವೇಗದ ಅರ್ಧಶತಕ ದಾಖಲೆಯಾಗಿದೆ.
ಇದೇ ಸರಣಿಯಲ್ಲಿ ನಾಗ್ಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 22 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ್ದರು. ಇನ್ನು ನಾಯಕ ಸೂರ್ಯಕುಮಾರ್ ಯಾದವ್ 23 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಮಿಂಚಿದರು.
ಪವರ್-ಪ್ಲೇಯಲ್ಲಿ 56 ರನ್ ಬಾರಿಸಿದ ಇಶಾನ್...
ಪವರ್-ಪ್ಲೇಯಲ್ಲೇ ಇಶಾನ್ 56 ರನ್ ಗಳಿಸಿದರು. ಆ ಮೂಲಕ ಅಭಿಷೇಕ್ ಶರ್ಮಾ (58) ಬಳಿಕ ಮೊದಲ ಆರು ಓವರ್‌ಗಳಲ್ಲಿ ವೈಯಕ್ತಿಕವಾಗಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ಎನಿಸಿದರು.
3 ಓವರ್‌ನಲ್ಲಿ 67 ರನ್ ಬಿಟ್ಟು ಕೊಟ್ಟ ಝಾಕ್ ಫೌಲ್ಕ್ಸ್
ನ್ಯೂಜಿಲೆಂಡ್ ತಂಡದ ವೇಗದ ಬೌಲರ್ ಝಾಕ್ ಫೌಲ್ಕ್ಸ್ 3 ಓವರ್‌ಗಳಲ್ಲಿ 67 ರನ್ ಬಿಟ್ಟು ಕೊಟ್ಟು ದುಬಾರಿಯೆನಿಸಿದರು.
ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್
ಇಶಾನ್-ಸೂರ್ಯ ಜೊತೆಯಾಟ...
ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಮೂರನೇ ವಿಕೆಟ್‌ಗೆ 48 ಎಸೆತಗಳಲ್ಲಿ 122 ರನ್‌ಗಳ ಜೊತೆಯಾಟ ಕಟ್ಟಿದರು.
ಇಶಾನ್ 32 ಎಸೆತಗಳಲ್ಲಿ 76 ರನ್ (11 ಬೌಂಡರಿ, 4 ಸಿಕ್ಸರ್) ಹಾಗೂ ಸೂರ್ಯ 37 ಎಸೆತಗಳಲ್ಲಿ ಅಜೇಯ 82 ರನ್ (9 ಬೌಂಡರಿ, 4 ಸಿಕ್ಸರ್) ಗಳಿಸಿ ಅಬ್ಬರಿಸಿದರು.
ಕಳೆದ ಪಂದ್ಯದ ಹೀರೊ ಅಭಿಷೇಕ್ ಶರ್ಮಾ ಶೂನ್ಯಕ್ಕೆ ಔಟ್ ಆದರೆ ಸಂಜು ಸ್ಯಾಮ್ಯನ್ (6) ಮಗದೊಮ್ಮೆ ನಿರಾಸೆ ಮೂಡಿಸಿದರು. ಕೊನೆಯಲ್ಲಿ ಶಿವಂ ದುಬೆ 18 ಎಸೆತಗಳಲ್ಲಿ ಅಜೇಯ 36 ರನ್ ಗಳಿಸಿ (3 ಸಿಕ್ಸರ್, 1 ಬೌಂಡರಿ) ತಂಡದ ಗೆಲುವನ್ನು ಸುಲಭಗೊಳಿಸಿದರು.
ನ್ಯೂಜಿಲೆಂಡ್ ತಂಡದ ಪರ ನಾಯಕ ಮಿಚೆಲ್ ಸ್ಯಾಂಟ್ನರ್ ಅಜೇಯ 47 ಹಾಗೂ ರಚಿನ್ ರವೀಂದ್ರ 44 ರನ್ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.