
ನಾಗಪುರದ ವಿಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ತಾಲೀಮು ನಡೆಸಿದ ಭಾರತ ತಂಡದ ರಿಂಕು ಸಿಂಗ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ರವಿ ಬಿಷ್ಣೋಯಿ
–ಪಿಟಿಐ ಚಿತ್ರ
ನಾಗ್ಪುರ: ನಾಯಕ ಸೂರ್ಯಕುಮಾರ್ ಯಾದವ್ ಅವರೀಗ ಒತ್ತಡದಲ್ಲಿದ್ದಾರೆ. ಏಕೆಂದರೆ; ನ್ಯೂಜಿಲೆಂಡ್ ಎದುರು ಬುಧವಾರ ಆರಂಭವಾಗಲಿರುವ ಟಿ20 ಕ್ರಿಕೆಟ್ ಸರಣಿಯಲ್ಲಿ ಅವರಿಗೆ ಎರಡು ಪ್ರಮುಖ ಸವಾಲುಗಳಿವೆ.
ಈಚೆಗೆ ಏಕದಿನ ಸರಣಿಯಲ್ಲಿ ಸೋತಿರುವ ಭಾರತ ತಂಡವನ್ನು ಟಿ20 ಮಾದರಿಯಲ್ಲಿ ಗೆಲುವಿನತ್ತ ಮುನ್ನಡೆಸಬೇಕಿದೆ. ಅಲ್ಲದೇ ತಮ್ಮ ಬ್ಯಾಟಿಂಗ್ ಲಯವನ್ನು ಕೂಡ ಕಂಡುಕೊಳ್ಳಬೇಕಿದೆ. 2024ರಲ್ಲಿ ಸೂರ್ಯ ಅವರು ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ತಂಡವು ಆಡಿರುವ 25 ಪಂದ್ಯಗಳಲ್ಲಿ 18ರಲ್ಲಿ ಜಯಿಸಿದೆ. ಅಭಿಷೇಕ್ ಶರ್ಮಾ ಅವರ ಸ್ಫೋಟಕ ಶೈಲಿಯ ಬ್ಯಾಟಿಂಗ್ ಮತ್ತು ವರುಣ ಚಕ್ರವರ್ತಿಯವರ ಸ್ಪಿನ್ ಮೋಡಿಯು ಈ ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಸುಳ್ಳಲ್ಲ.
ಐದು ಪಂದ್ಯಗಳ ಸರಣಿಯ ಮೊದಲ ಹಣಾಹಣಿಯು ವಿದರ್ಭ ಕ್ರಿಕೆಟ್ ಸಂಸ್ಥೆ (ವಿಸಿಎ) ಕ್ರೀಡಾಂಗಣದಲ್ಲಿ ನಡೆಯಲಿದೆ. ಇಲ್ಲಿಯೂ ತಮ್ಮ ಗೆಲುವಿನ ಓಟ ಮುಂದುವರಿಸುವತ್ತ ಸೂರ್ಯ ಬಳಗವು ಚಿತ್ತ ನೆಟ್ಟಿದೆ. ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಪೂರ್ವಾಭ್ಯಾಸಕ್ಕೆ ಪ್ರಸಕ್ತ ಸರಣಿಯು ವೇದಿಕೆಯಾಗಿದೆ. ಆದ್ದರಿಂದ ಈ ಸರಣಿಯ ಜಯವು ಆತಿಥೇಯ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ.
ಸೂರ್ಯ ಅವರಿಗೂ ಲಯಕ್ಕೆ ಮರಳಲು ಉತ್ತಮ ಅವಕಾಶ ಇದಾಗಿದೆ. ಏಕೆಂದರೆ 2025ರಲ್ಲಿ ಸೂರ್ಯಕುಮಾರ್ ಅವರಿಗೆ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. 19 ಪಂದ್ಯಗಳಿಂದ ಅವರು ಗಳಿಸಿರುವುದು ಕೇವಲ 218 ರನ್ ಮಾತ್ರ. 123ರ ಸ್ಟ್ರೈಕ್ ರೇಟ್‌ನಲ್ಲಿ ಅವರು ಈ ರನ್‌ಗಳನ್ನು ಪೇರಿಸಿದ್ದಾರೆ. ಸೂರ್ಯ ಅವರು ತಿಲಕ್ ವರ್ಮಾ ಅವರಿಗೆ ಮೂರನೇ ಕ್ರಮಾಂಕ ಬಿಟ್ಟುಕೊಟ್ಟು ತಾವು ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದರು. ಹೊಟ್ಟೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ತಿಲಕ್ ವರ್ಮಾ ವಿಶ್ರಾಂತಿಯಲ್ಲಿದ್ದು ಈ ಸರಣಿಯಲ್ಲಿ ಆಡುತ್ತಿಲ್ಲ.
ಈ ಸರಣಿಯಲ್ಲಿ ಅವರು ಇಶಾನ್ ಕಿಶನ್ ಅವರು ಮೂರನೇ ಕ್ರಮಾಂಕದಲ್ಲಿ ಆಡುವರು. ನಾಲ್ಕನೇ ಕ್ರಮಾಂಕದಲ್ಲಿ ತಾವು ಮುಂದುವರಿಯುವುದಾಗಿ ಸೂರ್ಯ ಅವರೇ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಖಚಿತಪಡಿಸಿದ್ದಾರೆ.
ಅಭಿಷೇಕ್ ಅವರೊಂದಿಗೆ ಸಂಜು ಸ್ಯಾಮ್ಸನ್ ಅವರು ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಹಾರ್ದಿಕ್ ಪಾಂಡ್ಯ ಮರಳಿರುವುದರಿಂದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮತ್ತು ಮಧ್ಯಮವೇಗದ ಬೌಲಿಂಗ್ ವಿಭಾಗದ ಶಕ್ತಿ ಹೆಚ್ಚಿದೆ. ಜಸ್‌ಪ್ರೀತ್ ಬೂಮ್ರಾ ಕೂಡ ಮರಳಿದ್ದಾರೆ. ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಕೂಡ ತಂಡದಲ್ಲಿದ್ದಾರೆ.
ನ್ಯೂಜಿಲೆಂಡ್ ತಂಡವು ಏಕದಿನ ಸರಣಿಯ ಗೆಲುವಿನಿಂದ ಅಪಾರ ಹುಮ್ಮಸ್ಸಿನಲ್ಲಿದೆ. 2024ರ ಟಿ20 ವಿಶ್ವಕಪ್ ಟೂರ್ನಿಯ ನಂತರದಲ್ಲಿ ಕಿವೀಸ್ ತಂಡವು ಆಡಿರುವ 21 ಪಂದ್ಯಗಳಲ್ಲಿ 13ರಲ್ಲಿ ಜಯಿಸಿದೆ. ನಾಯಕ ಮಿಚೆಲ್ ಸ್ಯಾಂಟನರ್, ಡೆವೊನ್ ಕಾನ್ವೆ, ಅಮೋಘ ಲಯದಲ್ಲಿರುವ ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್ ಮತ್ತು ವೇಗಿ ಜೇಕಬ್ ಡಫಿ ಅವರು ತಂಡದ ಶಕ್ತಿಯಾಗಿದ್ದಾರೆ.
ಬಲಾಬಲ
ಪಂದ್ಯಗಳು: 25
ಭಾರತ ಜಯ;14
ನ್ಯೂಜಿಲೆಂಡ್ ಜಯ: 10
ತಂಡಗಳು
ಭಾರತ: ಸೂರ್ಯಕುಮಾರ್ ಯಾದವ್ (ನಾಯಕ) ಅಭಿಷೇಕ್ ಶರ್ಮಾ ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್) ಇಶಾನ್ ಕಿಶನ್ ಶ್ರೇಯಸ್ ಅಯ್ಯರ್ ಹಾರ್ದಿಕ್ ಪಾಂಡ್ಯ ಶಿವಂ ದುಬೆ ಅಕ್ಷರ್ ಪಟೇಲ್ ಕುಲದೀಪ್ ಯಾದವ್ ಜಸ್‌ಪ್ರೀತ್ ಬೂಮ್ರಾ ವರುಣ ಚಕ್ರವರ್ತಿ ರಿಂಕು ಸಿಂಗ್ ಅರ್ಷದೀಪ್ ಸಿಂಗ್ ರವಿ ಬಿಷ್ಣೋಯಿ ಹರ್ಷಿತ್ ರಾಣಾ.
ನ್ಯೂಜಿಲೆಂಡ್: ಮಿಚೆಲ್ ಸ್ಯಾಂಟನರ್ (ನಾಯಕ) ಡೆವೊನ್ ಕಾನ್ವೆ ಬೆವೊನ್ ಜೇಕಬ್ಸ್ ಡ್ಯಾರಿಲ್ ಮಿಚೆಲ್ ಗ್ಲೆನ್ ಫಿಲಿಪ್ಸ್ ಟಿಮ್ ರಾಬಿನ್ಸನ್ ಜಿಮ್ಮಿ ನಿಶಾಮ್ ಈಶ್ ಸೋದಿ ಜ್ಯಾಕ್ ಫೌಲ್ಕೆಸ್ ಮಾರ್ಕ್ ಚಾಪ್ಮನ್ ಮೈಕೆಲ್ ಬ್ರೇಸ್‌ವೆಲ್ ರಚಿನ್ ರವೀಂದ್ರ ಕೈಲ್ ಜೆಮಿಸನ್ ಮ್ಯಾಟ್ ಹೆನ್ರಿ ಜೇಕಬ್ ಡಫಿ ಕ್ರಿಸ್ಟನ್ ಕ್ಲಾರ್ಕ್. ಪಂದ್ಯ ಆರಂಭ: ರಾತ್ರಿ 7. ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಜಿಯೊಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.