ADVERTISEMENT

IND vs WI: ಈಡನ್‌ನಲ್ಲಿ ಪ್ರಜ್ವಲಿಸಿದ ಸೂರ್ಯ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ಭಾರತ

ಕ್ರಿಕೆಟ್: ವೆಂಕಟೇಶ್ ಅಯ್ಯರ್ ಮಿಂಚಿನ ಬ್ಯಾಟಿಂಗ್; ಇಶಾನ್, ಶ್ರೇಯಸ್ ಅರ್ಧಶತಕದ ಜೊತೆಯಾಟ

ಪಿಟಿಐ
Published 20 ಫೆಬ್ರುವರಿ 2022, 19:33 IST
Last Updated 20 ಫೆಬ್ರುವರಿ 2022, 19:33 IST
ಸೂರ್ಯಕುಮಾರ್ ಯಾದವ್  –ಎಎಫ್‌ಪಿ ಚಿತ್ರ
ಸೂರ್ಯಕುಮಾರ್ ಯಾದವ್  –ಎಎಫ್‌ಪಿ ಚಿತ್ರ   

ಕೋಲ್ಕತ್ತ: ಮೊದಲೇ ನಿರೀಕ್ಷಿಸಿದಂತೆ ಭಾರತ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ಟ್ವೆಂಟಿ–20 ಸರಣಿಯಲ್ಲಿ ಕ್ಲೀನ್‌ಸ್ವೀಪ್ ಮಾಡಿತು.

ಭಾನುವಾರ ರಾತ್ರಿ ಈಡನ್ ಗಾರ್ಡನ್‌ನಲ್ಲಿ ಸಮಾಧಾನಕರ ಗೆಲುವಿಗಾಗಿ ವಿಂಡೀಸ್ ಬಳಗವು ಮಾಡಿದ ಪ್ರಯತ್ನಗಳಿಗೆ ಆತಿಥೇಯ ತಂಡದ ಭರವಸೆಯ ಆಟಗಾರರು ಅಡ್ಡಗಾಲು ಹಾಕಿದರು. ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ 17 ರನ್‌ಗಳಿಂದ ಜಯಿಸಿ, 3–0ಯಿಂದ ಸರಣಿಯನ್ನು ತನ್ನದಾಗಿಸಿಕೊಂಡಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ವಿಂಡೀಸ್ ಬಳಗದ ಬೌಲರ್‌ಗಳು ಆರಂಭವದಲ್ಲಿ ಯಶ ಕಂಡರು. ಆದರೆ, ಸೂರ್ಯಕುಮಾರ್ ಯಾದವ್ ಸೂರ್ಯಕುಮಾರ್ (65; 31ಎ, 4X1, 6X7) ಅಬ್ಬರದ ಬ್ಯಾಟಿಂಗ್‌ನಿಂದಾಗಿ ಭಾರತ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 184 ರನ್‌ಗಳ ಹೋರಾಟದ ಮೊತ್ತ ಕಲೆಹಾಕಿತು.

ADVERTISEMENT

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ ಇಂದೋರ್ ಪ್ರತಿಭೆ ವೆಂಕಟೇಶ್ ಅಯ್ಯರ್ (ಔಟಾ ಗದೆ 35 ಮತ್ತು 23ಕ್ಕೆ2) ಹಾಗೂ ಹರ್ಷಲ್ ಪಟೇಲ್ (22ಕ್ಕೆ3) ಅವರ ಆಟದ ಮುಂದೆ ವಿಂಡೀಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 167 ರನ್‌ ಗಳಿಸಿತು. ನಿಕೋಲಸ್ ಪೂರನ್ (61; 47ಎ) ಅವರ ಆಟಕ್ಕೆ ಶ್ರೇಯಸ್ ಠಾಕೂರ್ ಕಡಿವಾಣ ಹಾಕಿದರು. 18ನೇ ಓವರ್‌ನಲ್ಲಿ ವಿಕೆಟ್‌ಕೀಪರ್ ಇಶಾನ್ ಕಿಶನ್ ಪಡೆದ ಅಮೋಘ ಕ್ಯಾಚ್‌ಗೆ ಪೂರನ್ ಇನಿಂಗ್ಸ್‌ ಕೊನೆಗೊಂಡಿತು. ಅಲ್ಲಿಗೆ ಪ್ರವಾಸಿ ಬಳಗದ ಭರವಸೆಯೂ ಕಮರಿತು.

ಭಾರತ ತಂಡದಲ್ಲಿ ಪದಾರ್ಪಣೆ ಮಾಡಿದ ಬೌಲರ್‌ ಆವೇಶ್ ಖಾನ್‌ಗೆ ಒಂದೂ ವಿಕೆಟ್ ಒಲಿಯಲಿಲ್ಲ. ಭಾರತದ ಫೀಲ್ಡರ್‌ಗಳು ಮೂರು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರಿಂದ ಜಯದ ದಡ ಸೇರುವುದು ವಿಳಂಬವಾಯಿತು.

ಸೂರ್ಯ–ವೆಂಕಟೇಶ್ ಜೊತೆ ಯಾಟ:ವಿಂಡೀಸ್ ತಂಡದ ಭರ ವಸೆಯ ಆಟಗಾರ ಜೇಸನ್‌ ಹೋಲ್ಡರ್ ಭಾರತ ತಂಡಕ್ಕೆ ಆರಂಭದಲ್ಲಿಯೇ ಪೆಟ್ಟುಕೊಟ್ಟರು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಯುವ ಬ್ಯಾಟರ್ ಋತುರಾಜ್ ಗಾಯಕವಾಡ್ (4 ರನ್) ವಿಕೆಟ್ ಗಳಿಸಿದರು. ಈ ಹಂತದಲ್ಲಿ ಇಶಾನ್ ಕಿಶನ್ (34 ರನ್) ಮತ್ತು ಶ್ರೇಯಸ್ ಅಯ್ಯರ್ (25; 16ಎ) ಎರಡನೇ ವಿಕೆಟ್‌ಗೆ 53 ರನ್‌ ರನ್ ಸೇರಿಸಿದರು. ಅಯ್ಯರ್ ಉತ್ತಮ ಲಯದಲ್ಲಿದ್ದಾಗಲೇ ಹೇಡನ್ ವಾಲ್ಶ್ ಎಸೆತದಲ್ಲಿ ಎಡವಿದರು. ಹೋಲ್ಡರ್‌ಗೆ ಕ್ಯಾಚಿತ್ತ ಅಯ್ಯರ್ ನಿರ್ಗಮಿಸಿದರು. ನಂತರದ ಓವರ್‌ನಲ್ಲಿ ರಾಸ್ಟನ್ ಚೇಸ್ ಎಸೆತದಲ್ಲಿ ಇಶಾನ್ ಕ್ಲೀನ್‌ಬೌಲ್ಡ್‌ ಆದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರೋಹಿತ್ ವಿಫಲರಾದರು.

15 ಎಸೆತಗಳಲ್ಲಿ ಏಳು ರನ್ ಮಾತ್ರ ಗಳಿಸಿದರು. 14ನೇ ಓವರ್‌ನಲ್ಲಿ ಅವರು ಔಟಾದರು. ಈ ಹಂತದಲ್ಲಿ ತಂಡದ ಮೊತ್ತವು ನೂರರ ಗಡಿಯನ್ನೂ ದಾಟಿರಲಿಲ್ಲ.

ಸೂರ್ಯ ಮತ್ತು ವೆಂಕಟೇಶ್ ಅಯ್ಯರ್ (ಔಟಾಗದೆ 35; 19ಎ) ಜೋಡಿಯು ಆತಂಕ ದೂರ ಮಾಡಿತು. ಇಬ್ಬರ ಆಟದ ಭರಾಟೆಗೆ ಕ್ರೀಡಾಂಗಣದಲ್ಲಿ ಸೇರಿದ್ದ ಪ್ರೇಕ್ಷಕರ ಸಂತಸ ಮುಗಿಲುಮುಟ್ಟಿತು. ವಿಂಡೀಸ್ ಬೌಲರ್‌ಗಳ ಬೆವರು ಹರಿಯಿತು.ಕೊನೆಯ ಐದು ಓವರ್‌ಗಳಲ್ಲಿ 86 ರನ್‌ಗಳು ಸೇರಿದವು.

ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಔಟಾಗುವ ಮುನ್ನ ಸೂರ್ಯ ಒಟ್ಟು ಏಳು ಸಿಕ್ಸರ್‌ಗಳನ್ನು ಸಿಡಿಸಿದರು. 209.68ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದರು.

ಇನ್ನೊಂದೆಡೆ ಅಯ್ಯರ್ ಕೂಡ ನಾಲ್ಕು ಬೌಂಡರಿ, ಎರಡು ಸಿಕ್ಸರ್ ಸಿಡಿಸಿದರು. ಅಜೇಯ 35 ರನ್ ಗಳಿಸಿದರು. ವಿಂಡೀಸ್ ತಂಡದ ಆರು ಬೌಲರ್‌ಗಳಎಸೆತಗಳನ್ನೂ ಪುಡಿಗಟ್ಟಿದ ಸೂರ್ಯ ಮತ್ತು ವೆಂಕಟೇಶ್ ಆಟ ರಂಗೇರಿತು.

ದೀಪಕ್ ಚಾಹರ್‌ಗೆ ಗಾಯ

ತಮ್ಮ ಮೊದಲ ಓವರ್‌ನಲ್ಲಿ ಕೈಲ್ ಮೇಯರ್ಸ್ ಹಾಗೂ ಎರಡನೇ ಓವರ್‌ನಲ್ಲಿ ಶಾಯ್ ಹೋಪ್ ವಿಕೆಟ್ ಗಳಿಸಿ ಭಾರತ ತಂಡಕ್ಕೆ ಉತ್ತಮ ಆರಂಭ ನೀಡಿದ್ದ ದೀಪಕ್ ಚಾಹರ್ ಗಾಯಗೊಂಡು ಅಂಗಳದಿಂದ ನಿರ್ಗಮಿಸಿದರು.

ಗುರಿ ಬೆನ್ನಟ್ಟಿದ ವಿಂಡೀಸ್‌ಗೆ ಆರಂಭದಲ್ಲಿ ದೊಡ್ಡ ಆಘಾತ ನೀಡಿದ ದೀಪಕ್ ಎರಡನೇ ಓವರ್‌ನ ಕೊನೆಯ ಎಸೆತವನ್ನು ಬೌಲಿಂಗ್ ಮಾಡುವಾಗ ಸ್ನಾಯುಸೆಳೆತದಿಂದ ಬಳಲಿದರು. ನಂತರ ಅವರಿಗೆ ವಿಶ್ರಾಂತಿ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.