ADVERTISEMENT

T20 WC | ಜಿಂಬಾಬ್ವೆ ವಿರುದ್ಧ 72 ರನ್‌ಗಳ ಜಯ: ಭಾರತದ ಸೆಮಿ ಕನಸು ಜೀವಂತ

ಪಿಟಿಐ
Published 26 ಫೆಬ್ರುವರಿ 2026, 20:49 IST
Last Updated 26 ಫೆಬ್ರುವರಿ 2026, 20:49 IST
   

ಚೆನ್ನೈ: ಆರಂಭಿಕ ಅಭಿಷೇಕ್‌ ಶರ್ಮಾ ಅವರು ಅಮೋಘ ಅರ್ಧಶತಕದೊಂದಿಗೆ ಲಯಕ್ಕೆ ಮರಳಿದರು. ಕೊನೆಯಲ್ಲಿ ಹಾರ್ದಿಕ್‌ ಪಾಂಡ್ಯ ಮತ್ತು ತಿಲಕ್‌ ವರ್ಮಾ ಅವರೂ ಮಿಂಚಿನ ಆಟವಾಡಿದರು. ಇದರೊಂದಿಗೆ ಟೂರ್ನಿಯ ಇತಿಹಾಸದಲ್ಲಿ ಎರಡನೇ ಅತ್ಯಧಿಕ ಮೊತ್ತ ದಾಖಲಿಸಿದ ಭಾರತ ತಂಡವು ಟಿ20 ವಿಶ್ವಕಪ್‌ ಸೂಪರ್ ಎಂಟರ ಪಂದ್ಯದಲ್ಲಿ ಗುರುವಾರ ಜಿಂಬಾಬ್ವೆ ವಿರುದ್ಧ ಸುಲಭ ಜಯ ಗಳಿಸಿತು. 

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 72 ರನ್‌ಗಳಿಂದ ಜಯಗಳಿಸಿ ಸೆಮಿಫೈನಲ್‌ನ ಕನಸನ್ನು ಜೀವಂತವಾಗಿರಿಸಿಕೊಂಡಿತು. ಸೂಪರ್‌ ಎಂಟರ ಎ ಗುಂಪಿನಲ್ಲಿ ಭಾರತ ಸದ್ಯ ಮೂರನೇ ಸ್ಥಾನದಲ್ಲಿದೆ. ಮಾರ್ಚ್‌ 1ರಂದು ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯಲಿರುವ ಕೊನೆಯ ಪಂದ್ಯ ಉಭಯ ತಂಡಗಳಿಗೆ ನಿರ್ಣಾಯಕವಾಗಲಿದೆ. ಜಿಂಬಾಬ್ವೆ ತಂಡ ಈ ಸೋಲಿನೊಂದಿಗೆ ನಾಕೌಟ್‌ ರೇಸ್‌ನಿಂದ ಹೊರಬಿತ್ತು.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತಂಡವು ಅಭಿಷೇಕ್‌ (55;30ಎ, 4x4, 6x4), ಹಾರ್ದಿಕ್‌ (ಔಟಾಗದೇ 50;23ಎ, 4x2, 6x4) ಮತ್ತು ತಿಲಕ್‌  (ಔಟಾಗದೇ 44;16ಎ, 4x3, 6x4) ಅವರ ಬ್ಯಾಟಿಂಗ್‌ ಬಲದಿಂದ 4 ವಿಕೆಟ್‌ಗೆ 256 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು. ವಿಶ್ವಕಪ್‌ನಲ್ಲಿ ಭಾರತದ ಅತ್ಯಧಿಕ ಮೊತ್ತ ಇದಾಗಿದೆ. ಇದಕ್ಕೆ ಇತರ ಬ್ಯಾಟರ್‌ಗಳು ಉಪಯುಕ್ತ ಕಾಣಿಕೆ ನೀಡಿದರು.

ADVERTISEMENT

ಕಠಿಣ ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡವು ಕೊನೆಯತನಕ ಉತ್ತಮ ಹೋರಾಟ ತೋರಿ, ಸೋಲಿನ ಅಂತರವನ್ನು ಕಡಿಮೆ ಮಾಡಿಕೊಂಡಿತಷ್ಟೇ. ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ (ಔಟಾಗದೇ 97; 59ಎ, 4x8, 6x6) ಅವರು ಅರ್ಹ ಶತಕ ತಪ್ಪಿಸಿಕೊಂಡರು. ಅವರು ನಾಯಕ ಸಿಕಂದರ್‌ ರಝಾ (31;21) ಜೊತೆ ಮೂರನೇ ವಿಕೆಟ್‌ಗೆ 72 ರನ್‌ ಸೇರಿಸಿ ಭಾರತದ ದಾಳಿಗೆ ಸಡ್ಡು ಹೊಡೆದರು. ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗೆ 184 ರನ್‌ ಗಳಿಸಿ ಹೋರಾಟ ಮುಗಿಸಿತು. 

ಭಾರತದ ಪರ ಅರ್ಷದೀಪ್‌ ಸಿಂಗ್‌ ಮೂರು ವಿಕೆಟ್‌ ಪಡೆದರು. ಸ್ಪಿನ್ನರ್‌ಗಳಾದ ಅಕ್ಷರ್‌ ಪಟೇಲ್‌ ಮತ್ತು ವರುಣ್‌ ಚಕ್ರವರ್ತಿ ತಲಾ ಒಂದು ವಿಕೆಟ್‌ ಗಳಿಸಿದರು. ಮಧ್ಯಮ ವೇಗಿ ಶಿವಂ ದುಬೆ (2–0–46–1) ಬಲು ದುಬಾರಿ ಎನಿಸಿದರು. 

ಅಭಿಷೇಕ್‌–ಹಾರ್ದಿಕ್ ಅಬ್ಬರ: ಹಾಲಿ ವಿಶ್ವಕಪ್‌ ಟೂರ್ನಿಯಲ್ಲಿ ರನ್‌ಗಳಿಗೆ ತಡಕಾಡಿದ್ದ ಅಭಿಷೇಕ್ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಹೊಟ್ಟೆಕೆಟ್ಟು ಮೊದಲ ಪಂದ್ಯ ಕಳೆದುಕೊಂಡಿದ್ದ ಅಭಿಷೇಕ್, ನಂತರದ ನಾಲ್ಕು ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದರು. ಆದರೆ ಈ ಪಂದ್ಯದಲ್ಲಿ 25 ವರ್ಷದ ಆಟಗಾರನ ಬೀಸಾಟ ಕಳೆಗಟ್ಟಿತು. ಎರಡು ಜೊತೆಯಾಟಗಳಲ್ಲಿ ಭಾಗಿಯಾದರು. ಸಂಜು ಸ್ಯಾಮ್ಸನ್ (24) ಜೊತೆ 48 ರನ್ ಸೇರಿಸಿದ ಅವರು ಇಶಾನ್ (38) ಜೊತೆ 72 ರನ್ ಸೇರಿಸಿದರು. ಇದರಿಂದ ಇತರ ಆಟಗಾರರಿಗೆ ಪರಾಕ್ರಮ ಮೆರೆಯಲು ವೇದಿಕೆ ಸಿದ್ಧಗೊಂಡಿತು.

ರಿಂಕು ಬದಲು ಸ್ಥಾನ ಪಡೆದಿದ್ದ ಸ್ಯಾಮ್ಸನ್ ಮತ್ತು ಅಭಿಷೇಕ್ ಮೊದಲ ವಿಕೆಟ್‌ಗೆ 48 ರನ್‌ (3.4ಓವರ್‌) ಸೇರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಮುಝರಾಬಾನಿ ಬೌಲಿಂಗ್‌ನಲ್ಲಿ ಚೆಂಡನ್ನು ಪುಲ್ ಮಾಡುವ ಯತ್ನದಲ್ಲಿ ಸಂಜು ಡೀಪ್‌ಮಿಡ್‌ ವಿಕೆಟ್‌ನಲ್ಲಿ ಕ್ಯಾಚಿತ್ತರು. ಅವರ ನಿರ್ಗಮನದ ನಂತರ ಅಭಿಷೇಕ್ ರನ್‌ ವೇಗ ಹೆಚ್ಚಿಸಿದರು. ಟಿನೊ ಮಪೊಸೊ, ಬ್ರಿಯಾನ್ ಬೆನೆಟ್ ಮತ್ತು ಎನ್‌ಗವಾರ ಬೌಲಿಂಗ್‌ನಲ್ಲಿ ಸಿಕ್ಸರ್‌ಗಳನ್ನು ಎತ್ತಿದರು. ಪವರ್‌ ಪ್ಲೇ ಕೊನೆಗೆ ಮೊತ್ತ 86 ಆಗಿತ್ತು.

ಅಭಿಷೇಕ್‌ ಪಾದ ಚಲನೆ, ಕಣ್ಣು– ಕೈ ಸಂಯೋಜನೆ ಎಂದಿನ ರೀತಿಗೆ ಮರಳಿತು. ಅರ್ಧಶತಕ ದಾಟಿದ ಕೂಡಲೇ ಅವರು ಸಿಕಂದರ್ ರಝಾ ಬೌಲಿಂಗ್‌ನಲ್ಲಿ ಭರ್ಜರಿ ಹೊಡೆತಕ್ಕೆ ಹೋಗಿ ಕ್ಯಾಚ್ ನೀಡಿದರು. ಆದರೆ ಜಿಂಬಾಬ್ವೆ ಸಂತಸ ಕ್ಷಣಕಾಲದ್ದಾಯಿತು. ಭಾರತದ ಇತರ ಬ್ಯಾಟರ್‌ಗಳು ಟೂರ್ನಿಯಲ್ಲಿ ಇದೇ ಮೊದಲ ಬಾರಿ ಒಟ್ಟಾಗಿ ಉತ್ತಮ ಪ್ರದರ್ಶನ ನೀಡಿದರು.

ಜಿಂಬಾಬ್ವೆ ಫೀಲ್ಡರ್‌ಗಳೂ ಸುಲಭ ಕ್ಯಾಚುಗಳನ್ನು ನೆಲಕ್ಕೆ ಹಾಕಿದರು. 26 ರನ್ ಗಳಿಸಿದ್ದಾಗ ಇಶಾನ್‌ ಮತ್ತು ನಾಲ್ಕು ರ‌ನ್‌ ಗಳಿಸಿದ್ದಾಗ ನಾಯಕ ಸೂರ್ಯಕುಮಾರ್ (33) ಅವರಿಗೆ ಜೀವದಾನ ಪಡೆದರು. ಭಾರತ 9.1 ಓವರುಗಳಲ್ಲಿ 100 ರನ್ ಗಳಿಸಿದರೆ, ಮುಂದಿನ ನೂರು ರನ್‌ಗಳು ಕೇವಲ 7.3 ಓವರುಗಳಲ್ಲಿ ಪ್ರವಾಹದಂತೆ ಹರಿದುಬಂದವು. ಹಾರ್ದಿಕ್ ಜೊತೆ ತಿಲಕ್‌ ಕೂಡ ಅಬ್ಬರಿಸಿದರು. ಕೊನೆಯ ಐದು ಓವರುಗಳಲ್ಲಿ 80 ರನ್‌ಗಳನ್ನು ಭಾರತ ಬಾಚಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.