
ನವಿ ಮುಂಬೈ: ಸ್ಮೃತಿ ಮಂದಾನ (109; 95ಎ) ಮತ್ತು ಪ್ರತೀಕಾ ರಾವಲ್ (122;134ಎ) ಅವರ ಶತಕಗಳ ಆರ್ಭಟದಿಂದಾಗಿ ಭಾರತ ಮಹಿಳಾ ಕ್ರಿಕೆಟ್ ತಂಡವು ಗುರುವಾರ ನ್ಯೂಜಿಲೆಂಡ್ ತಂಡವನ್ನು ಡಕ್ವರ್ಥ್ ಲೂಯಿಸ್ ನಿಯಮದನ್ವಯ 53 ರನ್‌ಗಳಿಂದ ಮಣಿಸಿ, ಮಹಿಳೆಯರ ವಿಶ್ವಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಮುನ್ನಡೆಯಿತು.
ಗುರುವಾರ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು 49 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 340 ರನ್ ಗಳಿಸಿತು. ಮಳೆ ಬಂದ ಕಾರಣ ಭಾರತದ ಇನಿಂಗ್ಸ್‌ನಲ್ಲಿ ಒಂದು ಓವರ್ ಕಡಿತ ಮಾಡಿ ಆಡಿಸಲಾಗಿತ್ತು. ಮತ್ತೆಯೂ ಮಳೆ ಸುರಿದ ಕಾರಣ ಡಿಎಲ್‌ಎಸ್ ನಿಯಮದನ್ವಯ ನ್ಯೂಜಿಲೆಂಡ್ ತಂಡಕ್ಕೆ ಗುರಿಯನ್ನು 325 ರನ್‌ಗಳಿಗೆ (44 ಓವರ್‌ಗಳಲ್ಲಿ) ಪರಿಷ್ಕರಿಸಲಾಯಿತು.
ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ 8 ವಿಕೆಟ್‌ಗೆ 271 ರನ್ ಗಳಿಸಿ ಹೋರಾಟವನ್ನು ಮುಗಿಸಿತು. ಎರಡನೇ ಓವರ್‌ನಲ್ಲೇ ಕ್ರಾಂತಿ ಗೌಡ್ ಅವರು ಆರಂಭಿಕ ಆಟಗಾರ್ತಿ ಸೂಝಿ ಬೇಟ್ಸ್ ಅವರ ವಿಕೆಟ್ ಪಡೆದು ಆಘಾತ ನೀಡಿದರು. ನಂತರದಲ್ಲಿ ಅಮೆಲಿಯಾ ಕೆರ್ (45; 53ಎ), ಬ್ರೂಕ್ ಹ್ಯಾಲಿಡೇ (81;84ಎ) ಮತ್ತು ವಿಕೆಟ್ ಕೀಪರ್ ಇಸಾಬೆಲ್ಲಾ ಗೇಜ್ (ಔಟಾಗದೇ 65;51ಎ) ಅವರು ಹೋರಾಟ ತೋರಿದರೂ ಗೆಲುವಿಗೆ ಅದು ಸಾಕಾಗಲಿಲ್ಲ. ಭಾರತದ ಪರ ರೇಣುಕಾ ಸಿಂಗ್ ಮತ್ತು ಕ್ರಾಂತಿ ಗೌಡ್ ತಲಾ ಎರಡು ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ ಭಾರತ, ನಾಲ್ಕನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತು. ಇದಕ್ಕೂ ಮುನ್ನ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ನಾಲ್ಕರ ಘಟ್ಟಕ್ಕೆ ಮುನ್ನಡೆದಿದ್ದವು. ಈ ಸೋಲಿನೊಂದಿಗೆ ನ್ಯೂಜಿಲೆಂಡ್ ತಂಡದ ಸೆಮಿಫೈನಲ್ ಕನಸು ಕಮರಿತು. ಟೂರ್ನಿಯಲ್ಲಿರುವ ಎಲ್ಲಾ ಎಂಟು ತಂಡಗಳಿಗೆ ಗುಂಪು ಹಂತದಲ್ಲಿ ತಲಾ ಒಂದು ಪಂದ್ಯ ಬಾಕಿ ಉಳಿದಿವೆ. ಭಾರತವು ಇದೇ 26ರಂದು ತನ್ನ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
ಇದಕ್ಕೂ ಮುನ್ನ ನ್ಯೂಜಿಲೆಂಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭರ್ತಿ ಆತ್ಮವಿಶ್ವಾಸದೊಂದಿಗೆ ಕ್ರೀಸ್‌ಗೆ ಬಂದ ಆರಂಭಿಕ ಜೋಡಿ ಸ್ಮೃತಿ ಮತ್ತು ಪ್ರತೀಕಾ ಕಿವೀಸ್ ಬೌಲರ್‌ಗಳಿಗೆ ಕಬ್ಬಿಣದ ಕಡಲೆಯಾದರು. ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಸ್ಮೃತಿ ಶತಕ ದಾಖಲಿಸಿದರು.
ವಿಶ್ವಕಪ್ ಇತಿಹಾಸದಲ್ಲಿ ಸ್ಮೃತಿಗೆ ಮೂರನೇ ಶತಕ ಇದಾಗಿದೆ. ಆಫ್‌ಸ್ಪಿನ್ನರ್ ಈಡನ್ ಕ್ಯಾರ್ಸನ್ ಅವರ ಎಸೆತವನ್ನು ಸಿಕ್ಸರ್‌ಗೆತ್ತುವ ಮೂಲಕ ನೂರರ ಗಡಿ ದಾಟಿದರು. ಇದು ಅವರಿಗೆ ಒಟ್ಟಾರೆ 14ನೇ ಏಕದಿನ ಕ್ರಿಕೆಟ್ ಶತಕವಾಗಿದೆ. ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ (15 ಶತಕ) ದಾಖಲೆ ಸರಿಗಟ್ಟಲು ಸ್ಮೃತಿಗೆ ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇದೆ.
ಪ್ರತೀಕಾ ಅವರಿಗೆ ವಿಶ್ವಕಪ್ ಟೂರ್ನಿ ಯಲ್ಲಿ ಇದು ಮೊದಲ ಶತಕ. ಮೊದಲ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ ದಾಖಲೆಯ 212 ರನ್ ಸೇರಿಸಿದರು. ಇದರಿಂದಾಗಿ ತಂಡವು ಪ್ರಸಕ್ತ ಟೂರ್ನಿಯ ಗರಿಷ್ಠ ಮೊತ್ತವನ್ನು ದಾಖಲಿಸಿತು. ಪ್ರತೀಕಾ ಅವರು ಎರಡನೇ ವಿಕೆಟ್ ಜೊತೆ ಯಾಟ ದಲ್ಲಿ ಜೆಮಿಮಾ ರಾಡ್ರಿಗಸ್ ಅವ ರೊಂದಿಗೆ 76 ರನ್ ಕಲೆಹಾಕಿದರು. ಜೆಮಿಮಾ ಅವರಿಗೆ ಒಂದು ಜೀವದಾನ ಲಭಿಸಿತು. ಇದರ ಲಾಭ ಪಡೆದ ಅವರು 39 ಎಸೆತಗಳಲ್ಲಿ ಅರ್ಧಶತಕ ಹೊಡೆದರು. ಇದು ವಿಶ್ವಕಪ್ ಟೂರ್ನಿಯ ವೇಗದ ಅರ್ಧಶತಕವಾಗಿ ದಾಖಲಾಯಿತು.
34ನೇ ಓವರ್‌ನಲ್ಲಿ ಸ್ಮೃತಿ ಮಂದಾನ ಅವರ ವಿಕೆಟ್ ಗಳಿಸಿದ ಸೂಝಿ ಬೇಟ್ಸ್ ಅವರು ಜೊತೆಯಾಟಕ್ಕೆ ತಡೆಯೊಡ್ಡಿದರು. ಆದರೆ ಪ್ರತೀಕಾ ಮತ್ತು ಜಿಮಿಮಾ ಬೀಸಾಟ ಮುಂದುವರಿಸಿದರು. 43ನೇ ಓವರ್‌ನಲ್ಲಿ ಪ್ರತೀಕಾ ಅವರ ಆಟಕ್ಕೆ ಅಮೆಲಿಯಾ ಕೆರ್ ತೆರೆ ಎಳೆದರು. ಹರ್ಮನ್‌ಪ್ರೀತ್ ಕೌರ್ 11 ಎಸೆತಗಳಲ್ಲಿ 10 ರನ್ ಗಳಿಸಿದರು. 48 ಓವರ್ ಮುಗಿದಾಗ ಮಳೆ ಸುರಿಯಿತು.
ಏಕದಿನ ಕ್ರಿಕೆಟ್‌ನಲ್ಲಿ ಸ್ಕೃತಿ ಮಂದಾನ 14ನೇ ಶತಕ
ಮೊದಲ ವಿಕೆಟ್‌ಗೆ ಮಂದಾನ–ಪ್ರತೀಕಾ 212 ರನ್ ಜೊತೆಯಾಟ
ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಈಗಾಗಲೇ ಸೆಮಿಫೈನಲ್‌ಗೆ ಅರ್ಹತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.